ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು (Cmsiddaramaiah) ಮಂಡಿಸಿದ ಬಜೆಟ್ ರಾಜ್ಯದ ಜನರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ ಹಾಗೂ ಎಲ್ಲ ವರ್ಗದ ಜನರಿಗೆ ಈ ಬಜೆಟ್ ತೀವ್ರ ಅನ್ಯಾಯ ಮಾಡಿದೆ. ವಿತ್ತೀಯ ಕೊರತೆ ಹಾಗೂ ಸಾಲದ ಪ್ರಮಾಣ ಮಿತಿ ಮೀರಿ ಹೋಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ದೂರಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಳೆ ಸಾಲ ತೀರಿಸಲು ಹೊಸ ಸಾಲ ಮಾಡಿದ್ದಾರೆ. ಹಿಂದಿನ ಯೋಜನೆಗಳ ಪ್ರಗತಿಯನ್ನು ಹೇಳದೆ ಸಾಲ ಮಾತ್ರ ಮಾಡಿದ್ದಾರೆ.
1995- 96 ರಲ್ಲಿ ಸಿದ್ದರಾಮಯ್ಯ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಮೊದಲ ಬಾರಿಗೆ ಆರ್ಥಿಕ ಸಚಿವರನ್ನಾಗಿ ಮಾಡಿದ್ದರು. ಆಗ ಕುರಿ ಕಾಯಲು ಬಾರದವನು ಬಜೆಟ್ ಹೇಗೆ ಮಂಡಿಸುತ್ತಾನೆ ಎಂಬ ಟೀಕೆ ಕೇಳಿಬಂದಿತ್ತು. ಇದಕ್ಕೆ ತಕ್ಕ ಉತ್ತರ ನೀಡಬೇಕೆಂಬ ತುಡಿದ ಸಿದ್ದರಾಮಯ್ಯನವರಲ್ಲಿ ಇತ್ತು. ಅಂದು ಬಜೆಟ್ ಮಂಡಿಸಿದಾಗ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದ್ದರು.
ಈ ಬಾರಿ ಬಜೆಟ್ ಮಂಡಿಸಿದಾಗ ಕೇವಲ 60 ಸದಸ್ಯರಿದ್ದರು. ವಿರೋಧ ಪಕ್ಷಗಳು ಬಜೆಟ್ ಟೀಕಿಸುತ್ತವೆ. ಆದರೆ ಆಡಳಿತ ಪಕ್ಷದ ಸದ್ಯಸರೇ ಬಜೆಟ್ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಇದರಲ್ಲಿ ಕಳೆಯೂ ಇಲ್ಲ, ಕೊಳೆಯೂ ಇಲ್ಲ ಅಂದಿನ ಬಜೆಟ್ ನಲ್ಲಿ 66 ಪುಟ, 181 ಅಂಶಗಳಿದ್ದರೆ, ಈ ಬಾರಿ 171 ಪುಟ ಹಾಗೂ 532 ಅಂಶಗಳಿವೆ. ಆದರೂ ಈ ಬಜೆಟ್ ಗೆ ಚಪ್ಪಾಳೆ ಸಿಕ್ಕಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಮೊದಲಿಗೆ ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ ಎನ್ನುತ್ತಿದ್ದರು. ಈಗ ಆ ಬಗ್ಗೆ ಖಚಿತತೆ ಇಲ್ಲ. ಡಿ.ಕೆ.ಶಿವಕುಮಾರ್ ಜೊತೆಗೆ ಹಾಲು ಜೇನಿನಂತೆ ಇದ್ದೇನೆ ಎನ್ನುತ್ತಾರೆ. ಅದು ಹಾಲು ಜೇನಾ ಅಥವಾ ಹಾಲಾಹಲವೋ ಎಂದು ಮುಂದೆ ಗೊತ್ತಾಗುತ್ತದೆ. ಒಂದು ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ ಎಂದರು.
ಕೇಂದ್ರ ಸರ್ಕಾರವನ್ನು ತೆಗಳುವುದು ಕಾಂಗ್ರೆಸ್ ನಾಯಕರ ಸಾಮಾನ್ಯ ಮನಸ್ಥಿತಿ. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ 1995-96 ರಲ್ಲಿ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ, ತೆರಿಗೆಯಲ್ಲಿ ಶೇ.29 ರಷ್ಟನ್ನು ರಾಜ್ಯಕ್ಕೆ ವರ್ಗಾಯಿಸುವುದನ್ನು ಒಪ್ಪಬಾರದು, ಶೇ.40 ರಷ್ಟಾದರೂ ಕೊಡಬೇಕೆಂದು ಒತ್ತಾಯಿಸಿದ್ದರು.
ನಮ್ಮ ಸರ್ಕಾರ ಅಧಿಕಾರ ವಹಿಸಿಕೊಂಡಾಗ ಸ್ಥಿತಿ ಸರಿ ಇರಲಿಲ್ಲ ಎಂದು ಹೇಳಿದ್ದರು. ಅಂದು ಕೂಡ ಸಿದ್ದರಾಮಯ್ಯ ಕೇಂದ್ರದ ಬಗ್ಗೆ ಆಕ್ಷೇಪ ಮಾಡಿದ್ದರು. 2015-16 ರಲ್ಲಿ ಸಿಎಂ ಆಗಿದ್ದಾಗ, ಅವರು ಮತ್ತೆ ಹಣಕಾಸು ಆಯೋಗ ಹಂಚಿಕೆಯಲ್ಲಿ ಅನ್ಯಾಯ ಮಾಡಿಕೊಂಡೇ ಬಂದಿದೆ ಎಂದು ಹೇಳಿದ್ದರು. ಜೊತೆಗೆ, 2015 ರಲ್ಲಿ ರಾಜ್ಯದ ಪಾಲಿನಲ್ಲಿ ಹೆಚ್ಚಳವಾಗಿರುವುದರ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು. ಅಂದರೆ ನರಸಿಂಹರಾವ್ ಅವಧಿಯಲ್ಲಿ ಇಟ್ಟಿದ್ದ ಬೇಡಿಕೆಯನ್ನು ನಂತರ ಪ್ರಧಾನಿ ನರೇಂದ್ರ ಮೋದಿ ಜಾರಿ ಮಾಡಿದ್ದರು. ಅದರೂ ಪ್ರಧಾನಿ ಮೋದಿಗೆ ಇವರು ಧನ್ಯವಾದ ಹೇಳಿಲ್ಲ ಎಂದರು.
ಜೀಗಳ ಕಥೆ
ಈ ಬಾರಿಯ ಬಜೆಟ್‌ನಲ್ಲಿ ʼಜೀʼ ಎಂದು ಉಲ್ಲೇಖಿಸಿದ್ದು, ನಗರಾಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದೇವೆ ಎಂದಿದ್ದಾರೆ. ಆದರೆ ಆಂಧ್ರ ಸಿಎಂ ರೇವಂತ್ ರೆಡ್ಡಿ ಬೆಂಗಳೂರನ್ನು ತೆಗಳಿದ್ದಾರೆ. ಬೆಂಗಳೂರಿನ ಯಾವುದೇ ರಸ್ತೆಯು ಕಸಮುಕ್ತವಾಗಿಲ್ಲ. 10 ಸಾವಿರ ರೂ. ಲಂಚ ಪಡೆದು ಇ ಖಾತಾ ಮಾಡುತ್ತಿದ್ದಾರೆ.
ಜನರ ಹೆಸರಿನ ಖಾತೆಯನ್ನು ಮರಳಿ ಜನರ ಹೆಸರಿಗೇ ಮಾಡಿಸಿಕೊಡುತ್ತಿದ್ದಾರೆ. ಇದರಿಂದಾಗಿ ಅಧಿಕಾರಿಗಳಿಗೆ ಲಾಭವಾಗಿದೆ. ನನ್ನ ಕಚೇರಿಗೆ ಬಹಳಷ್ಟು ಜನರು ಬಂದು ಈ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. ಹಣವಿಲ್ಲದೆ ಇ ಖಾತಾ ಮಾಡಿಸುತ್ತಿಲ್ಲ ಎಂದಾದರೆ ಸರ್ಕಾರ ನನ್ನ ಮೇಲೆ ಕ್ರಮ ಕೈಗೊಳ್ಳಬಹುದು.
ಐದು ಪಾಲಿಕೆಗಳಲ್ಲಿ ಈಗ ಅನುದಾನವಿಲ್ಲ. ಪಶ್ಚಿಮ ವಲಯದಲ್ಲಿ ಕಸ ಎತ್ತಲು ಕೂಡ ಹಣವಿಲ್ಲ. ಬಾಂಡ್ ಮೂಲಕ ಹಣ ಸಂಗ್ರಹಿಸಿ ಎಂದು ಸರ್ಕಾರ ಸೂಚಿಸಿದೆ. ಈ ಹಿಂದೆ ಜಲಾಶಯಗಳನ್ನು ನಿರ್ಮಿಸಲು ಮಾತ್ರ ಬಾಂಡ್‌ಗಳನ್ನು ನೀಡಲಾಗುತ್ತಿತ್ತು ಎಂದರು.
ʼಗುಡ್ ಹೆಲ್ತ್ ಟು ಆಲ್ʼ ಎಂದು ಉಲ್ಲೇಖಿಸಿದ್ದರೂ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇದೆ. ಬಳಕೆದಾರರ ಮೊತ್ತವನ್ನು ಬಳಸಿ ಔಷಧಿ ಖರೀದಿಸಿ ಎಂದು ಸರ್ಕಾರ ಸೂಚಿಸಿದೆ. ಕರ್ನಾಟಕ ವೈದ್ಯಾಧಿಕಾರಿಗಳ ಸಂಘ ಸರ್ಕಾರಕ್ಕೆ ಪತ್ರ ಬರೆದಿದೆ. ಇತ್ತೀಚಿನ ದಿನಗಳಲ್ಲಿ ಔಷಧಿ ನಿಗಮ ಔಷಧಿ ಪೂರೈಕೆಯಲ್ಲಿ ವಿಫಲವಾಗಿದೆ ಎಂದು ಸಂಘ ದೂರಿದೆ. ಇದು ಸುಳ್ಳಾಗಿದ್ದರೆ ಸಂಘದ ಅಧ್ಯಕ್ಷರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ.
ಆಸ್ಪತ್ರೆಗಳಲ್ಲಿ 1040 ಔಷಧಿಗಳಿರಬೇಕು, ಆದರೆ ಈಗ 170 ಔಷಧಿಗಳು ಲಭ್ಯವಿದೆ. ಅಂದರೆ ಉಳಿದೆಲ್ಲ ಔಷಧಿಗಳು ಕಾಣದಂತೆ ಮಾಯವಾಗಿವೆ. ಆದರೂ ಇದನ್ನು ಗುಡ್ ಹೆಲ್ತ್ ಎನ್ನುತ್ತಾರೆ. 2024-25 ರಲ್ಲಿ ಆರೋಗ್ಯ ಇಲಾಖೆಯಿಂದ ಒಂದೂವರೆ ಸಾವಿರ ಕೋಟಿ ರೂ. ವಾಪಸ್ ಮಾಡಿದ್ದಾರೆ. 2025-26 ರಲ್ಲಿ ಶೂನ್ಯ ಬಿಲ್ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಲಭ್ಯವಿಲ್ಲದೆ ಜನರು ಬಂದು ಹೊಡೆಯುತ್ತಿದ್ದಾರೆ ಎಂದು ಸರ್ಕಾರಿ ವೈದ್ಯರು ಹೇಳಿದ್ದಾರೆ ಎಂದರು.
230 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹೆರಿಗೆ ಮಾಡಿಸಲು ಯಾವುದೇ ಸೌಲಭ್ಯವಿಲ್ಲ. ಚಾಮರಾಜನಗರದ ಒಂದು ಕೇಂದ್ರದಲ್ಲಿ ವರ್ಷಕ್ಕೆ ಒಂದೇ ಹೆರಿಗೆಯಾಗಿದೆ. ಮತ್ತೊಂದು ಕಡೆ ಒಂದೂ ಆಗಿಲ್ಲ. ಚಿಕ್ಕಮಗಳೂರು, ಬೇಲೂರು ಹಾಗೂ ಕಡೂರಿನಲ್ಲಿ ಒಂದು ಹೆರಿಗೆಯಾಗಿದೆ. ಇದನ್ನು ʼ11 ಜಿʼ ಎಂದು ಸರ್ಕಾರ ಹೇಳುತ್ತಿದೆಯೇ? ಎಂದು ಪ್ರಶ್ನೆ ಮಾಡಿದರು.
ಶಾಲೆಗಳು ಮುಚ್ಚುವ ಆತಂಕ
ಕಳೆದ ಮೂರು ವರ್ಷಗಳಲ್ಲಿ 3,617 ಸರ್ಕಾರಿ ಶಾಲೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ವರದಿ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ 17 ಲಕ್ಷ ದಾಖಲಾತಿ ಕುಸಿತವಾಗಿದೆ, 4,398 ಶಾಲೆಗಳು ಮುಚ್ಚುವ ಹಂತದಲ್ಲಿದೆ ಎಂದು ಬೇರೆ ಮಾಧ್ಯಮಗಳಲ್ಲಿ ವರದಿ ಬಂದಿದೆ.
ಶಾಲೆಗಳ ದುರಸ್ತಿಗೆ ಕೂಡ ಹಣ ಇಲ್ಲ. ಬೆಳ್ತಂಗಡಿಯ ಗ್ರಾಮದಲ್ಲಿ ಶಾಲಾ ಪ್ರವಾಸಕ್ಕೆ ಟಿಪ್ಪರ್ ಬಳಸಲಾಗಿದೆ. ಮಕ್ಕಳು ಟಿಪ್ಪರ್, ಜಿಸಿಬಿಯಲ್ಲಿ ಪ್ರಯಾಣ ಮಾಡುವುದೇ ಇವರ 11 ಜಿ ಅಭಿವೃದ್ಧಿಯಾಗಿದೆ ಎಂದು ಟೀಕಿಸಿದರು.
ಸಾಲದ ಸುಳಿ, ಅತ್ಯಧಿಕ ಖರ್ಚು
2018 ರಿಂದ 2023 ರವರೆಗೆ ಜಿಎಸ್‌ಡಿಪಿ ಬೆಳವಣಿಗೆ ದರ ಸರಾಸರಿ 12.16% ಇತ್ತು. ಈಗ 11.51% ಗೆ ಬಂದಿದೆ. ಕೋವಿಡ್ ಸಮಯದ ಹೊರತುಪಡಿಸಿ ಬಿಜೆಪಿ ಅವಧಿಯಲ್ಲಿ ಎಂದೂ ಹೀಗೆ ಕುಸಿತವಾಗಿರಲಿಲ್ಲ. 2019 ರಲ್ಲಿ 48,500 ಕೋಟಿ ರೂ., 2020 ರಲ್ಲಿ 69,000 ಕೋಟಿ ರೂ., 2021 ರಲ್ಲಿ 59,000 ಕೋಟಿ ರೂ. ಹಾಗೂ 2022 ರಲ್ಲಿ 36,000 ಕೋಟಿ ರೂ. ಸಾಲ ಮಾಡಲಾಗಿತ್ತು. 2023 ರಲ್ಲಿ 81,000 ಕೋಟಿ ರೂ. ಸಾಲ ಮಾಡಲಾಯಿತು. ಅಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಒಂದೇ ಬಾರಿಗೆ ಸಾಲದ ಹೊರೆ ಹೆಚ್ಚಿತು. ಇದು ಅವೈಜ್ಞಾನಿಕ ಗ್ಯಾರಂಟಿಗಳಿಂದ ಆದ ಬೆಳವಣಿಗೆ. 2024 ರಲ್ಲಿ 92,025 ಕೋಟಿ ರೂ, 2025 ರಲ್ಲಿ 1.16 ಲಕ್ಷ ಕೋಟಿ ರೂ ಸಾಲ ಮಾಡಲಾಗಿದೆ. ಮೂರು ವರ್ಷಗಳಲ್ಲಿ 2,89,025 ಕೋಟಿ ರೂ. ಸಾಲ ಮಾಡಲಾಗಿದೆ. ಸಿದ್ದರಾಮಯ್ಯನವರೇ ಮುಂದುವರಿದರೆ ಒಟ್ಟು 6 ಲಕ್ಷ ಕೋಟಿ ರೂ. ಆಗಲಿದೆ. ಇದು ಸಿದ್ದರಾಮಯ್ಯನವರದ್ದೇ ಪ್ರತ್ಯೇಕ ದಾಖಲೆ ಎಂದರು.
2022 ರಲ್ಲಿ ಬಿಜೆಪಿ ಅವಧಿಯಲ್ಲಿ 2,29,079 ಕೋಟಿ ರೂ. ಕಂದಾಯ ಸ್ವೀಕೃತಿಯಿತ್ತು. 2,15,584 ಕೋಟಿ ರೂ. ಖರ್ಚು ಇತ್ತು. ಅಂದರೆ ಆದಾಯಕ್ಕಿಂತಲೂ 13,000 ಕೋಟಿ ರೂ. ಖರ್ಚು ಕಡಿಮೆ ಇತ್ತು. ಕಾಂಗ್ರೆಸ್ ಬಂದಾಕ್ಷಣ ಮೊದಲ ವರ್ಷ ಆದಾಯ ಸ್ವೀಕೃತಿ 2,33,342 ಕೋಟಿ ರೂ. ಹಾಗೂ ಖರ್ಚು 2,42,614 ಕೋಟಿ ರೂ. ಖರ್ಚು ಇದೆ. ಅಂದರೆ 9,271 ಕೋಟಿ ರೂ. ಕೊರತೆ ಇದೆ. ಒಂದೇ ವರ್ಷದಲ್ಲಿ ಬಜೆಟ್ ಪಾತಾಳಕ್ಕೆ ಬಿದ್ದುಹೋಗಿದೆ. 2025 ರಲ್ಲಿ ಆದಾಯ 2,92,476 ಕೋಟಿ ರೂ. ಇದ್ದು, ಖರ್ಚು 3,11,738 ಕೋಟಿ ರೂ. ಆಗಿತ್ತು. ಹೀಗೆ ಖರ್ಚು ಹೆಚ್ಚಾಗುತ್ತಲೇ ಹೋಗಿದೆ. ವಿಪರೀತ ಸಾಲ ಇರುವುದರಿಂದ ರಾಜ್ಯದ ಮೇಲೆ ಒತ್ತಡ ಶುರುವಾಗಿದೆ ಎಂದರು.
ಮೂರು ವರ್ಷದಲ್ಲಿ ಒಟ್ಟು ವಿತ್ತೀಯ ಕೊರತೆ 54,660 ಕೋಟಿ ರೂ. ಆಗಿದೆ. ಈ ಮೂಲಕ ರಾಜ್ಯದ ಆರ್ಥಿಕ ಹೊಣೆ ದಯನೀಯ ಸ್ಥಿತಿಗೆ ಬಂದಿದೆ. ಸರ್ಕಾರ ದಿವಾಳಿಯ ಅಂಚಿಗೆ ಹೋಗುತ್ತಿದ್ದು, ಆರ್ಥಿಕ ಶಿಸ್ತು ಪುಸ್ತಕದ ಬದನೇಕಾಯಿ ಆಗಿದೆ. 1998 ರಿಂದ ಈವರೆಗೆ ಕಾಂಗ್ರೆಸ್ ಪಕ್ಷದ ಸರ್ಕಾರಗಳು 5,66,970 ಕೋಟಿ ರೂ. ಸಾಲ ಮಾಡಿದೆ. ಅಂದರೆ ಒಟ್ಟು ಸಾಲದಲ್ಲಿ ಕಾಂಗ್ರೆಸ್ ಸರ್ಕಾರಗಳ ಪಾಲು 67.9% ಆಗಿದೆ. ಬಿಜೆಪಿ ಸರ್ಕಾರಗಳು 2,62,042 ಕೋಟಿ ರೂ. ಸಾಲ ಮಾಡಿದ್ದು, 31.39% ಪಾಲು ಇದೆ. ಜೆಡಿಎಸ್ ಸರ್ಕಾರ 5664 ಕೋಟಿ ರೂ. ಸಾಲ ಮಾಡಿದೆ ಎಂದರು.
ಜೆ.ಎಚ್.ಪಟೇಲ್ 5,604 ಕೋಟಿ ರೂ, ಧರ್ಮಸಿಂಗ್ 14,974 ಕೋಟಿ ರೂ., ಎಸ್.ಎಂ.ಕೃಷ್ಣ 20,576 ಕೋಟಿ ರೂ. ಡಿ.ವಿ.ಸದಾನಂದಗೌಡ 24,525 ಕೋಟಿ ರೂ., ಬಸವರಾಜ ಬೊಮ್ಮಾಯಿ 67,000 ಕೋಟಿ ರೂ., ಎಚ್.ಡಿ.ಕುಮಾರಸ್ವಾಮಿ 1,01,419 ಕೋಟಿ ರೂ., ಬಿ.ಎಸ್.ಯಡಿಯೂರಪ್ಪ 1,63,713 ಕೋಟಿ ರೂ. ಸಾಲ ಮಾಡಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ 4,36,803 ಕೋಟಿ ರೂ. ಸಾಲ ಮಾಡಿದ್ದು, ಒಟ್ಟು ಸಾಲದಲ್ಲಿ ಅವರ ಸಾಲದ ಪ್ರಮಾಣ 52.33% ಆಗಿದೆ. ಸಿದ್ದರಾಮಯ್ಯನವರು ಸಾಲದ ರಾಮಯ್ಯ ಆಗಿದ್ದಾರೆ. ಹಿಂದೆ ಮ್ಯಾಜಿಕ್ ಮಾಡುತ್ತಿದ್ದವರು ಈಗ ಬ್ಲಾಕ್ ಮ್ಯಾಜಿಕ್ ಮಾಡುತ್ತಿದ್ದು, ಅಂಕಿ ಅಂಶಗಳನ್ನು ತಮ್ಮದೇ ರೀತಿಯಲ್ಲಿ ತೋರಿಸುತ್ತಿದ್ದಾರೆ ಎಂದರು.
2021-22 ರ ಬಜೆಟ್ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆಸ್ತಿಗಳ ರಚನೆಗಾಗಿ ಸಾಲ ಪಡೆಯುತ್ತೇವೆ. ಸಾಲ ಸಿಗುತ್ತದೆ ಎಂದು ಸಾಲ ಪಡೆಯಲು ಆಗಲ್ಲ ಎಂದು ಹೇಳಿದ್ದರು. ಇಷ್ಟು ಸಾಲ ಮಾಡಿದರೂ ಯಾವುದೇ ನೀರಾವರಿ ಯೋಜನೆ ಸಿಕ್ಕಿಲ್ಲ. ಬ್ರ್ಯಾಂಡ್ ಬೆಂಗಳೂರಿಗೆ ಅನುದಾನ ದೊರೆತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಆಸ್ತಿ ರಚಿಸುವ ಕೆಲಸ ನಡೆದಿಲ್ಲ.
ಮೂರು ವರ್ಷದಲ್ಲಿ ಪ್ರತಿ ವರ್ಷ 82,000 ಕೋಟಿ ರೂ. ಸಾಲ ಪಡೆಯಲಾಗಿದೆ. ಪ್ರತಿ ತಿಂಗಳಿಗೆ 6,833 ಕೋಟಿ ರೂ., ದಿನಕ್ಕೆ 277 ಕೋಟಿ ರೂ., ಗಂಟೆಗೆ 9.5 ಕೋಟಿ ರೂ. ಸಾಲವಾಗುತ್ತಿದೆ. ಪ್ರತಿ ದಿನ 125 ಕೋಟಿ ರೂ., ಗಂಟೆಗೆ 5.2 ಕೋಟಿ ರೂ. ಬಡ್ಡಿ ಪಾವತಿಸಲಾಗುತ್ತಿದೆ. 2013 ರಲ್ಲಿ ಪ್ರತಿ ಕನ್ನಡಿಗನ ಮೇಲೆ 19,000 ರೂ. ಸಾಲವಿದ್ದು, 2026 ಮಾರ್ಚ್ ವೇಳೆಗೆ ಆ ಮೊತ್ತ 1,12,400 ಲಕ್ಷ ರೂ. ಸಾಲ ಇದೆ.
ಈ ಎರಡೂ ಅವಧಿಯಲ್ಲಿ ಸಿದ್ದರಾಮಯ್ಯನವರೇ ಸಿಎಂ ಆಗಿದ್ದು, ಸಾಲವನ್ನು ನಿರಂತರವಾಗಿ ಏರಿಕೆ ಮಾಡಿದ್ದಾರೆ. ಕೊರತೆ ಬಜೆಟ್ ಪ್ರಮಾಣ 2.94% ಎಂದು ತೋರಿಸಿದ್ದು, ನಿಜವಾದ ಅಂಕಿ ಅಂಶ ನೋಡಿದರೆ 3% ದಾಟಿ ಹೋಗುತ್ತದೆ ಎಂದರು.
ಸರ್ಕಾರ ಗುತ್ತಿಗೆದಾರರಿಗೆ 38,000 ಕೋಟಿ ರೂ., ಎಸ್ಕಾಂಗಳಿಗೆ 12,500 ಕೋಟಿ ರೂ. ಬಾಕಿ ಪಾವತಿ ಮಾಡಬೇಕಿದೆ. ಹೊಸ ನೇಮಕಾತಿಗೆ 10,000 ಕೋಟಿ ರೂ. ನೀಡಬೇಕಿದೆ. ಗೃಹಲಕ್ಷ್ಮಿಗೆ 5,000 ಕೋಟಿ ರೂ. ಕೊಡಬೇಕಿದೆ. ಸಾರಿಗೆ ಇಲಾಖೆಗೆ 4250 ಕೋಟಿ ರೂ, ಬಿಬಿಎಂಪಿ ಗುತ್ತಿಗೆದಾರರಿಗೆ 2,500 ಕೋಟಿ ರೂ. ಸಾರಿಗೆ ಸಿಬ್ಬಂದಿಗೆ 2,000 ಕೋಟಿ ರೂ, ಅನ್ನಭಾಗ್ಯ ಯೋಜನೆಯ ಒಂದು ತಿಂಗಳ 600 ಕೋಟಿ ರೂ. ಸಿಟಿ ಸ್ಕ್ಯಾನಿಂಗ್ ಸೇವೆ ನೀಡುವ ಕಂಪನಿಗೆ 143.78 ಕೋಟಿ ರೂ, ಅನಾಥ ಮಕ್ಕಳಿಗೆ ಮಾಸಾಶನಕ್ಕೆ 73 ಕೋಟಿ ರೂ, ಭಿಕ್ಷುಕರ ಕಲ್ಯಾಣಕ್ಕೆ 23,042 ಕೋಟಿ ರೂ, ಕೊಡಬೇಕಿದೆ. ಎಲ್ಲವೂ ಸೇರಿ ರಾಜ್ಯ ಸರ್ಕಾರ ಒಟ್ಟು 75,689 ಕೋಟಿ ರೂ. ಬಾಕಿ ನೀಡಬೇಕಿದೆ. ಇಷ್ಟಾದರೂ ಆರ್ಥಿಕ ಶಿಸ್ತು ಮೀರಿಲ್ಲ ಎಂದು ಹೇಳುತ್ತಾರೆ ಎಂದರು.
ಸರ್ಕಾರದ ಪರ್ಫಾಮೆನ್ಸ್
ಕಳೆದ ಬಜೆಟ್‌ನ ಶೇ.59.43 ರಷ್ಟು ಹಣವನ್ನು ಮಾತ್ರ ಈವರೆಗೆ ಖರ್ಚು ಮಾಡಲಾಗಿದೆ. ಉಳಿದ 41% ಬಳಸಿಯೇ ಇಲ್ಲ. ಬಜೆಟ್ ಗಾತ್ರ ದೊಡ್ಡದಿದ್ದರೂ ಅನುದಾನ ಚಿಕ್ಕದಾಗಿದೆ. ಕಳೆದ ವರ್ಷದ ವೆಚ್ಚಕ್ಕೆ ಹೋಲಿಸಿದರೆ 3.44% ಕಡಿಮೆಯಾಗಿದೆ. ಪ್ರಧಾನ ಕಾರ್ಯದರ್ಶಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ.
3,39,277.31 ಕೋಟಿ ರೂ. ಹಂಚಿಕೆ ಮಾಡಿದ್ದು, 2,44,465 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಇನ್ನೂ 94761.42 ಕೋಟಿ ರೂ. ಇನ್ನೂ ಬಿಡುಗಡೆಯಾಗಿಲ್ಲ. ಸರ್ಕಾರ ಪಾಪರ್ ಆಗಿಲ್ಲ ಎಂದು ಈ ಹಣವನ್ನು ಯಾಕೆ ಬಿಡುಗಡೆ ಮಾಡಿಲ್ಲ? ಒಂದು ವೇಳೆ ಈ ಹಣ ಬಿಡುಗಡೆ ಮಾಡಿದರೂ ಅದರಲ್ಲಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದರು.
ಇಲಾಖೆಗಳಿಗೆ 2,44,465 ಕೋಟಿ ರೂ. ಹಂಚಲಾಗಿದೆ. ಅದರಲ್ಲಿ 2,07,954 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. 36,510 ಕೋಟಿ ರೂ. ಇನ್ನೂ ಖರ್ಚು ಮಾಡಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ 5,239.10 ಕೋಟಿ ರೂ. ಕಡಿಮೆ ವೆಚ್ಚ ಮಾಡಲಾಗಿದೆ. ಗ್ಯಾರಂಟಿಗಾಗಿ ಚಪ್ಪಾಳೆ ಹೊಡೆಸಿಕೊಂಡು ನಾಳೆಯ ಅಭಿವೃದ್ಧಿಯನ್ನು ಕಟ್ಟಿ ಹಾಕುತ್ತಿದ್ದಾರೆ.
ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು 50% ಹಣ ಕೂಡ ಬಿಡುಗಡೆ ಮಾಡಿಲ್ಲ. ಈ ಯೋಜನೆಯಡಿ 3,41,082 ಕೋಟಿ ರೂ. ಹಂಚಿಕೆಯಾಗಿದ್ದರೆ, 1,454 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಅದರಲ್ಲಿ 1,330 ಕೋಟಿ ರೂ. ಖರ್ಚು ಮಾಡಲಾಗಿದೆ. ಗೋವಿಂದರಾವ್ ವರದಿ ಪ್ರಕಾರ, ಹಿಂದುಳಿದ ತಾಲೂಕುಗಳ ಸಂಖ್ಯೆ ಹೆಚ್ಚಿರುವುದರಿಂದ 43,000 ಕೋಟಿ ರೂ. ನೀಡಬೇಕೆಂದು ಶಿಫಾರಸು ಮಾಡಲಾಗಿದೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾಹಿತಿ ತಂತ್ರಜ್ಞಾನ ಇಲಾಖೆಗೆ 1074 ಕೋಟಿ ರೂ. ಹಂಚಿಕೆಯಾಗಿದ್ದು, 326 ಕೋಟಿ ರೂ. ಮಾತ್ರ ಖರ್ಚು ಮಾಡಲಾಗಿದೆ. ಅಂದರೆ 30% ಕೂಡ ಬಳಸಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಗೆ 26,728 ಕೋಟಿ ರೂ. ಅನುದಾನ ಸಿಕ್ಕಿದ್ದು, 8,893 ಕೋಟಿ ರೂ. ಖರ್ಚು ಮಾಡಲಾಗಿದೆ. 33% ಮಾತ್ರ ಬಳಕೆಯಾಗಿದೆ. ಮೀನುಗಾರಿಕೆ ಇಲಾಖೆಗೆ 441 ಕೋಟಿ ರೂ. ನೀಡಿದ್ದು, 187 ಕೋಟಿ ರೂ. ಖರ್ಚಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ 34,915 ಕೋಟಿ ರೂ. ನೀಡಿದ್ದು, 15,106 ಕೋಟಿ ರೂ. ಖರ್ಚು ಮಾಡಲಾಗಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 4327 ಕೋಟಿ ರೂ. ನೀಡಿದ್ದು, 1907 ಕೋಟಿ ರೂ. ಖರ್ಚಾಗಿದೆ. ಸಣ್ಣ ನೀರಾವರಿ ಇಲಾಖೆಗೆ 3,329 ಕೋಟಿ ರೂ. ನೀಡಿದ್ದು, 1,534 ಕೋಟಿ ರೂ. ಖರ್ಚಾಗಿದೆ. ಪ್ರವಾಸೋದ್ಯಮ ಇಲಾಖೆಗೆ 275 ಕೋಟಿ ರೂ. ನೀಡಿದ್ದು, 132 ಕೋಟಿ ರೂ. ಖರ್ಚಾಗಿದೆ. ವಾಣಿಜ್ಯ ಕೈಗಾರಿಕೆಗೆ 1422 ಕೋಟಿ ರೂ. ನೀಡಿದ್ದು, 622 ಕೋಟಿ ರೂ. ಖರ್ಚಾಗಿದೆ.
ಜಲಸಂಪನ್ಮೂಲ ಇಲಾಖೆಗೆ 18,692 ಕೋಟಿ ರೂ. ನೀಡಿದ್ದು, 9082 ಕೋಟಿ ರೂ. ಖರ್ಚಾಗಿದೆ. ಲೋಕೋಪಯೋಗಿ ಇಲಾಖೆಗೆ 11,677 ಕೋಟಿ ರೂ. ನೀಡಿದ್ದು, 6,358 ಕೋಟಿ ರೂ. ಖರ್ಚಾಗಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗೆ 2,131 ಕೋಟಿ ರೂ. ನೀಡಿದ್ದು, 1232 ಕೋಟಿ ರೂ. ಖರ್ಚಾಗಿದೆ ಎಂದು ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆಗೆ 1,10,000 ಕೋಟಿ ರೂ. ಗುರಿ ನೀಡಿದ್ದು, 1,05,000 ಕೋಟಿ ರೂ. ಸಂಗ್ರಹವಾಗಿದೆ. ಅಬಕಾರಿಗೆ 38,525 ಕೋಟಿ ರೂ. ಗುರಿ ನೀಡಿದ್ದು, 2742 ಕೋಟಿ ರೂ. ಸಂಗ್ರಹವಾಗಿದೆ. ಮುದ್ರಾಂಕ ನೋಂದಣಿ ಶುಲ್ಕಕ್ಕೆ 26,000 ಕೋಟಿಯ ಗುರಿ ನೀಡಿದ್ದು, 3647 ಕೋಟಿ ರೂ. ಸಂಗ್ರಹವಾಗಿದೆ. ಮೋಟಾರು ವಾಹನ ಇಲಾಖೆಗೆ 13,000 ಕೋಟಿ ರೂ. ಗುರಿ ಇದ್ದು, 408 ಕೋಟಿ ರೂ. ಸಂಗ್ರಹ ಬಾಕಿ ಉಳಿದಿದೆ. ಒಟ್ಟಾರೆಯಾಗಿದೆ 1,96,525 ಕೋಟಿ ರೂ. ಗುರಿ ನೀಡಿದ್ದು, 1,82,901 ಕೋಟಿ ರೂ. ಸಂಗ್ರಹವಾಗಿದೆ. 13,624 ಕೋಟಿ ರೂ. ಬಾಕಿ ಉಳಿದಿದೆ. ಈ ಬಾರಿಯೂ ಹೊಸದಾಗಿ ಗುರಿ ನೀಡಲಾಗಿದೆ.
ಅಬಕಾರಿ ಇಲಾಖೆಗೆ ಈ ಬಾರಿ 45,000 ಕೋಟಿ ರೂ., ನೋಂದಣಿಗೆ ಈ ಬಾರಿ 29,000 ಕೋಟಿ ರೂ. ಗುರಿ ನೀಡಲಾಗಿದೆ. ಕಳೆದ ವರ್ಷವೇ ಸಂಗ್ರಹವಾಗಿಲ್ಲ ಎಂದಾದರೆ ಈ ಬಾರಿ ಹೇಗೆ ಸಂಗ್ರಹವಾಗುತ್ತದೆ? ಎಂದು ಪ್ರಶ್ನಿಸಿದರು.
ಪರಿಶಿಷ್ಟರ ಹಣ ದುರ್ಬಳಕೆ
ಪರಿಶಿಷ್ಟರ ಹಣವನ್ನು ಲೂಟಿ ಮಾಡಿದರೆ ಅದು ಸಾಮಾಜಿಕ ನ್ಯಾಯ ಅನ್ನಿಸುವುದಿಲ್ಲ. ಎಸ್‌ಸಿಎಸ್‌ಪಿ/ಟಿಎಸ್‌ಪಿಯ ಹಣದಲ್ಲಿ 2026-27 ರಲ್ಲಿ ಗೃಹಲಕ್ಷ್ಮಿಗೆ 8296 ಕೋಟಿ ರೂ., ಶಕ್ತಿಗೆ 1537 ಕೋಟಿ ರೂ. ಅನ್ನಭಾಗ್ಯಕ್ಕೆ 1612 ಕೋಟಿ ರೂ. ಗೃಹಜ್ಯೋತಿಗೆ 2591 ಕೋಟಿ ರೂ. ಯುವನಿಧಿಗೆ 1062 ಸೇರಿ ಒಟ್ಟು 14,198 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಲಾಗಿದೆ. 2023 ರಲ್ಲಿ 11,144 ಕೋಟಿ ರೂ, 2024 ರಲ್ಲಿ 14,282 ಕೋಟಿ ರೂ, 2025 ರಲ್ಲಿ 13,433 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ.
ಒಟ್ಟಾರೆಯಾಗಿ ಇಷ್ಟು ವರ್ಷಗಳಲ್ಲಿ 53,059.45 ಕೋಟಿ ರೂ. ಹಣವನ್ನು ವರ್ಗಾಯಿಸಲಾಗಿದೆ. ಈವರೆಗಿನ ಬಜೆಟ್‌ಗಳಲ್ಲಿ ಎಸ್‌ಸಿ, ಎಸ್‌ಟಿಗೆ 24.1% ಜನಸಂಖ್ಯೆಗೆ ಒಟ್ಟು 1,56,701 ಕೋಟಿ ರೂ. ನೀಡಿದ್ದಾರೆ. ದಲಿತ ಶಾಸಕರು, ಸಚಿವರು ನಮಗೆ ಅನ್ಯಾಯವಾಗಿದೆ ಎಂದು ಬಾಯಿಬಿಡಲೇ ಇಲ್ಲ.
ದಲಿತ ಸಂಘಟನೆಗಳು ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿವೆ. ಎಸ್‌ಸಿಎಸ್‌ಪಿ/ಟಿಎಸ್‌ಪಿಗೆ ಕೊನೆಗೆ 30,000 ಕೋಟಿ ರೂ. ಮಾತ್ರ ಉಳಿಯುತ್ತದೆ. ಈ ಹಣವನ್ನು ಮರಳಿ ದಲಿತರಿಗೆ ನೀಡಬೇಕು. ಈ ಹಣವನ್ನು ಬೇರೆ ಯೋಜನೆಗಳಿಗೆ ಬಳಸಬಾರದು ಎಂದು ಆಗ್ರಹಿಸಿದರು.
ಗ್ಯಾರಂಟಿ ಹೊರತುಪಡಿಸಿ ಉಳಿದ 30,000 ಕೋಟಿ ರೂ. ನಲ್ಲಿ ಕೂಡ ಹಣ ದುರ್ಬಳಕೆಯಾಗಿದೆ. ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದೆ. ಜನವರಿ ಅಂತ್ಯಕ್ಕೆ 16,699 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಅದರಲ್ಲಿ 15,391 ಕೋಟಿ ರೂ. ಮಾತ್ರ ಖರ್ಚಾಗಿದೆ. ಉಳಿದ ಹಣ ಖರ್ಚು ಮಾಡಲಾಗದೆ ಅಧಿಕಾರಿಗಳು ಹಣವನ್ನು ಮರಳಿಸಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕಿತ್ತು ಎಂದರು.
ಪ್ರಕೃತಿ ಸಂರಕ್ಷಣೆ ವನ್ಯಜೀವಿ ರಕ್ಷಣೆಗೆ ಎಸ್‌ಸಿಎಸ್‌ಪಿಯಲ್ಲಿ 4 ಕೋಟಿ ರೂ ಹಾಗೂ ಟಿಎಸ್‌ಪಿಯಲ್ಲಿ 2 ಕೋಟಿ ರೂ. ಮೀಸಲಿಟ್ಟಿದ್ದಾರೆ. ಇದು ಪರಿಶಿಷ್ಟರಿಗೆ ಸಂಬಂಧಿಸಿದ ಯೋಜನೆಯೇ ಇಲ್ಲ. ಹುಲಿ ಸಂರಕ್ಷಣೆಗಾಗಿ ರಾಜ್ಯದ ಪಾಲು ನೀಡಬೇಕಿದ್ದು, ಅದಕ್ಕಾಗಿ 3.12 ಕೋಟಿ ರೂ. ಬಳಸಿಕೊಳ್ಳಲಾಗಿದೆ.
ಆರೋಗ್ಯ ಸಂಸ್ಥೆಗಳ ಕಟ್ಟಡಗಳ ನಿರ್ವಹಣೆಗೆ 9.37 ಕೋಟಿ ರೂ. ನಿಗದಿ ಮಾಡಲಾಗಿದೆ. ಇದಕ್ಕೂ ಎಸ್‌ಸಿ ಅಭಿವೃದ್ಧಿಗೂ ಯಾವ ಸಂಬಂಧವಿದೆ? ಆಯುಷ್ ಕಚೇರಿ ಮಹಾವಿದ್ಯಾಲಯಕ್ಕೆ 3.70 ಕೋಟಿ ರೂ. ನೀಡಲಾಗಿದೆ. ಐಟಿ ನೀತಿ ರೂಪಿಸಲು 10.04 ಕೋಟಿ ರೂ. ಬಳಸಿಕೊಳ್ಳಲಾಗಿದೆ. ಸಂಜಯಗಾಂಧಿ ಆಸ್ಪತ್ರೆಗೆ 4 ಕೋಟಿ ರೂ. ನೀಡಲಾಗಿದೆ. ಲೋಕೋಪಯೋಗಿ ಇಲಾಖೆಯ ಕಟ್ಟಡಗಳಿಗೂ ಹಣ ನೀಡಲಾಗಿದೆ. ಹೀಗೆ ಕೊರತೆಯಾದ ಕಡೆಗಳಿಗೆ ದಲಿತರ ಹಣ ಬಳಸಲಾಗಿದೆ ಎಂದರು.
ಜಾರಿಯಾಗದ ಘೋಷಣೆಗಳು
ಸಿಎಂ ಸಿದ್ದರಾಮಯ್ಯ ನೂರಕ್ಕೆ ನೂರು ಬಜೆಟ್ ಕಾರ್ಯಕ್ರಮಗಳ ಜಾರಿ ಮಾಡಿದ್ದೇನೆ ಎನ್ನುತ್ತಾರೆ. 2024-25 ರ ಬಜೆಟ್‌ನಲ್ಲಿ ಘೋಷಿಸಿದ ಎಲಿವೇಟೆಡ್ ಕಾರಿಡಾರ್ ಯೋಜನೆ ಇನ್ನೂ ಆರಂಭಗೊಂಡಿಲ್ಲ. 3,000 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆ ಅಭಿವೃದ್ಧಿ, ನಾಲ್ಕು ದಿಕ್ಕುಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಯೋಜನೆ ಜಾರಿಯಾಗಿಲ್ಲ.
250 ಕೋಟಿ ರೂ. ವೆಚ್ಚದ ಸ್ಕೈ ವಾಕ್ ನಿರ್ಮಾಣ, 2.3 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಬೀದರ್‌ನಲ್ಲಿ ಕೌಶಲ್ಯ ತರಬೇತಿ, ಐಟಿಐ ಉನ್ನತೀಕರಣ ಮೊದಲಾದ ಯೋಜನೆ ಜಾರಿಯಾಗಿಲ್ಲ. ನಂದಿನಿ ಲೇಔಟ್‌ನಲ್ಲಿ ಚಿತ್ರಮಂದಿರ ಅಭಿವೃದ್ಧಿ ಯೋಜನೆ ಇನ್ನೂ ಚರ್ಚೆಯಲ್ಲೇ ಇದೆ. ಮೈಸೂರಿನಲ್ಲಿ ಚಿತ್ರನಗರಿ ಇನ್ನೂ ಡಿಪಿಆರ್‌ನಲ್ಲೇ ಇದೆ. 100 ನಾಡ ಕಚೇರಿಗಳ ನಿರ್ಮಾಣದಲ್ಲಿ 50 ಕ್ಕೆ ಅನುಮೋದನೆ ಸಿಕ್ಕಿದೆ ಎಂದರು.
ತೆರಿಗೆಗಳು
6-7,000 ಕೋಟಿ ರೂ. ತೆರಿಗೆ ಹಾಕಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದ ಎರಡು ವರ್ಷಗಳಲ್ಲಿ 5599 ಕೋಟಿ ರೂ. ಬಂದಿದೆ. ಮದ್ಯದ ದರ ಹೆಚ್ಚಳದಿಂದ 5371 ಕೋಟಿ ರೂ. ಬಂದಿದೆ. ಮಾರ್ಗಸೂಚಿ ದರ ಏರಿಕೆಯಿಂದ 7,853 ಕೋಟಿ ರೂ. ವಾಹನಗಳ ಮೇಲಿನ ತೆರಿಗೆಯಿಂದ 3712 ಕೋಟಿ ರೂ. ಬಂದಿದೆ.
ಇಷ್ಟರಲ್ಲೇ 25,000 ಕೋಟಿ ರೂ. ಹೆಚ್ಚುವರಿ ಆದಾಯ ಬರುತ್ತದೆ. ಬಸ್ಸು, ಮೆಟ್ರೊ, ಹಾಲು, ವಿದ್ಯುತ್, ಶೈಕ್ಷಣಿಕ ಶುಲ್ಕ, ಕಾರ್ಮಿಕ ಶುಲ್ಕ, ಇ ಖಾತಾ, ಆಸ್ಪತ್ರೆಗಳ ಸೇವಾ ಶುಲ್ಕ, ಪಾರ್ಕಿಂಗ್ ಶುಲ್ಕ ಹೀಗೆ ಅನೇಕ ರೀತಿಯ ತೆರಿಗೆ ವಿಧಿಸಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಡಿಪಾಯಕ್ಕಾಗಿ ತೆಗೆಯುವ ಮಣ್ಣಿಗೂ ತೆರಿಗೆ ಹಾಕಿದೆ. ಇದು ಇತಿಹಾಸದಲ್ಲೇ ಮೊದಲು ಎಂದು ಹೇಳಿದರು.
ಚಿಕ್ಕಮಗಳೂರಿನ ಶ್ರೀಗಂಧ ಬೆಳೆಗಾರ, ಪರಿಹಾರ ಕೊಟ್ಟಿಲ್ಲವೆಂದ ತಿಥಿ ಕಾರ್ಡ್ ಮುದ್ರಣ ಮಾಡಿ ಹಂಚಿದ್ದ. ಕಲಬುರ್ಗಿಯ ಗ್ರಂಥಪಾಲಕಿ ಭಾಗ್ಯವತಿ 18 ತಿಂಗಳಿಂದ ಸಂಬಳವಿಲ್ಲದೆ ಆತ್ಮಹತ್ಯೆ ಮಾಡಿಕೊಂಡರು. 8 ತಿಂಗಳಿಂದ ಸ್ಮಶಾನ ಸಿಬ್ಬಂದಿಗೆ ವೇತನ ಪಾವತಿಸಿಲ್ಲ.
ಬೆಂಗಳೂರಿನ ವ್ಯಕ್ತಿಯೊಬ್ಬರು ಮೃತ ಮಗಳ ನೇತ್ರದಾನ ಮಾಡಲು ಆಂಬ್ಯುಲೆನ್ಸ್‌ಗೆ ಹಣ ನೀಡಿದರು. ಜೊತೆಗೆ ಪೊಲೀಸರಿಗೂ ಲಂಚ ನೀಡಬೇಕಾಯಿತು. ಪಾಲಿಕೆಯಲ್ಲೂ ಲಂಚ ನೀಡಿ ಮರಣ ಪ್ರಮಾಣ ಪತ್ರ ಪಡೆಯಬೇಕಾಯಿತು. ಹಂಪಿ ಕನ್ನಡ ವಿವಿಯಲ್ಲಿ 130 ಸಿಬ್ಬಂದಿಗೆ ಮೂರು ತಿಂಗಳಿಂದ ಸಂಬಳ ಸಿಕ್ಕಿಲ್ಲ. 26,000 ಅನಾಥ ಮಕ್ಕಳಿಗೆ ಏಳು ತಿಂಗಳಿಂದ 73 ಕೋಟಿ ರೂ. ನೀಡಬೇಕಿದೆ.
ಅನ್ನಕ್ಕಾಗಿ ಪರದಾಡುವ ಇಂತಹ ಮಕ್ಕಳಿಗೆ ಹಣ ನೀಡದಿದ್ದರೆ ಯಾವುದೇ ಗ್ಯಾರಂಟಿ ನೀಡಿ ಉಪಯೋಗವಿಲ್ಲ. ಆದರೆ 52 ಮಂದಿಗೆ ಸಂಪುಟ ದರ್ಜೆ ನೀಡಲಾಗಿದೆ. ಇವರಿಗೆ ನೀಡಲು ಹಣವಿದ್ದರೂ ಅನಾಥ ಮಕ್ಕಳಿಗೆ ನೀಡಲು ಹಣವಿಲ್ಲ ಎಂದರು.
ಗೋವಿಂದರಾವ್ ವರದಿಯಲ್ಲಿ ಹಿಂದುಳಿದ ತಾಲೂಕುಗಳಿಗೆ 43,000 ಕೋಟಿ ರೂ. ನೀಡಬೇಕೆಂದು ಶಿಫಾರಸು ಮಾಡಲಾಗಿದೆ. ಇನ್ನೆರಡು ವರ್ಷದಲ್ಲಿ ಇಷ್ಟು ಹಣವನ್ನು ನೀಡಲು ಸಾಧ್ಯವಿಲ್ಲ. ಅಂದರೆ ಇದು ಪ್ರಾದೇಶಿಕ ಅಸಮಾನತೆ ಮೂಡಿಸುವ ಬಜೆಟ್ ಆಗಿದೆ. ಈ ವರದಿಯಲ್ಲಿ ಎಲ್ಲ ರೀತಿಯ ಅಂಶಗಳನ್ನು ತಿಳಿಸಲಾಗಿದೆ. ಆದರೆ ಇದನ್ನು ಕಸದ ಬುಟ್ಟಿಗೆ ಹಾಕಲಾಗಿದೆ. ವರದಿಗಳಿಂದ ಯಾವುದೇ ಪ್ರಯೋಜನವಿಲ್ಲ. ಅದನ್ನು ಜಾರಿ ಮಾಡಲು ಮನಸ್ಸು ಮಾಡಬೇಕು.
ನಂಜುಂಡಪ್ಪ ವರದಿಯಲ್ಲಿ 114 ಹಿಂದುಳಿದ ತಾಲೂಕಿದ್ದರೆ, ಅದು ಗೋವಿಂದರಾವ್ ವರದಿಯಲ್ಲಿ 171 ಆಗಿದೆ. ಆದರೆ ಇವ್ಯಾವುದೂ ಜಾರಿಯಾಗಿಲ್ಲ. 15,000 ಕೋಟಿ ರೂ. ಮೀಸಲಿಡಿ ಎಂದು ನಾನು ಆಗ್ರಹ ಮಾಡಿದ್ದರೂ ಅಷ್ಟು ಹಣ ನೀಡಿಲ್ಲ ಎಂದರು.
ಬೆಳೆ ಯೋಜನೆಯಲ್ಲಿ 108 ಕೋಟಿಯಿಂದ 37 ಕೋಟಿ ರೂ.ಗೆ ಅನುದಾನ ಇಳಿದಿದೆ. ಕಿಸಾನ್ ಸಮ್ಮಾನ್ ಸ್ಥಗಿತಗೊಂಡಿದೆ. ಪ್ರಮುಖ ನೀರಾವರಿ ಯೋಜನೆಗಳಿಗೆ 300 ಕೋಟಿ ರೂ.ನಿಂದ 200 ಕೋಟಿ ರೂ. ಇಳಿದಿದೆ. ದೇವರಾಜಯ ಅರಸು ನಿಗಮಕ್ಕೆ ಬಿಜೆಪಿ 190 ಕೋಟಿ ರೂ. ನೀಡಿದ್ದರೆ, ಕಾಂಗ್ರೆಸ್ 50 ಕೋಟಿ ರೂ. ನೀಡಿದೆ. ಮರಾಠ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ನಿಂದ 25 ಕೋಟಿ ರೂ. ಗೆ, ವೀರಶೈವ ಲಿಂಗಾಯತ ನಿಗಮಕ್ಕೆ 100 ಕೋಟಿ ರೂ. ನಿಂದ 30 ಕೋಟಿ ರೂ. ಗೆ, ಒಕ್ಕಲಿಗರ ನಿಗಮಕ್ಕೆ 60 ಕೋಟಿ ರೂ. ನಿಂದ 30 ಕೋಟಿ ರೂ., ಅಂಬಿಗರ ಚೌಡಯ್ಯ ನಿಗಮಕ್ಕೆ 15 ಕೋಟಿ ರೂ. ನಿಂದ 5 ಕೋಟಿ ರೂಗೆ,. ಅಲೆಮಾರಿ ನಿಗಮಕ್ಕೆ 10 ಕೋಟಿ ರೂ. ನಿಂದ ಎರಡೂವರೆ ಕೋಟಿ ರೂ.ಗೆ ಇಳಿಕೆ ಮಾಡಲಾಗಿದೆ. ಆಹಾರ ಇಲಾಖೆ 0.05%, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 1%, ಇಂಧನ ಇಲಾಖೆ 3%, ಕಂದಾಯ ಇಲಾಖೆ 2% ಆಸ್ತಿ ಸೃಷ್ಟಿ ಮಾಡಿದೆ ಎಂದರು.
ಕೇಂದ್ರದ ನೆರವು
ಕೇಂದ್ರ ಸರ್ಕಾರದಿಂದ 63,049 ಕೋಟಿ ರೂ. ಅನುದಾನ ಬಂದಿದೆ. 50 ವರ್ಷಕ್ಕೆ ಬಡ್ಡಿ ರಹಿತ ಸಾಲ ನೀಡಲಾಗಿದೆ. 8191 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ. ಭಾರತ್ ಮಾಲಾ ಯೋಜನೆಯಡಿ ಕರ್ನಾಟಕಕ್ಕೆ 63,304 ಕೋಟಿ ರೂ. ವೆಚ್ಚದ ಕಾರಿಡಾರ್ ಸಿಕ್ಕಿದೆ. ಬೆಳಗಾವಿ-ಹುನಗುಂದ 8,000 ಕೋಟಿ ರೂ. ಹೆದ್ದಾರಿಯಾಗುತ್ತಿದೆ. ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಮೂರು ವಂದೇಭಾರತ್ ರೈಲು ಸಂಚಾರವಾಗುತ್ತಿದೆ. ಹೊಸ ಹಳ್ಳಿಗಳ ಜೋಡಣೆಯಡಿ ಯುಪಿಎ ಸರ್ಕಾರದಡಿ 113 ಕಿ.ಮೀ. ಆಗಿದ್ದು, ಈಗ 163 ಕಿ.ಮೀ. ಆಗಿದೆ.
ಹಳ್ಳಿಗಳ ವಿದ್ಯುದೀಕರಣದಡಿ ಯುಪಿಎನಲ್ಲಿ 18 ಆಗಿದ್ದರೆ, ಈಗ 317 ಹಳ್ಳಿಗಳಿಗೆ ವಿದ್ಯುತ್ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಬೋಯಿಂಗ್ ಸಂಸ್ಥೆ, ಎಚ್‌ಎಎಲ್ ಫ್ಯಾಕ್ಟರಿ ಸಿಕ್ಕಿದೆ. ಕೇಂದ್ರ ಸರ್ಕಾರ ಇಷ್ಟೊಂದು ಹಣ ನೀಡಿದ್ದರೂ ಆರೋಪ ಮಾಡಲಾಗುತ್ತಿದೆ. ಉಪನಗರ ರೈಲು ಯೋಜನೆಗೆ ಸರ್ಕಾರದಿಂದ ಜಮೀನು ಸಿಕ್ಕಿಲ್ಲ ಎಂದರು.