ನವದೆಹಲಿ: ಕೇಂದ್ರೀಯ ಪಠ್ಯ ಕ್ರಮದ (CBSE) ಪುಸ್ತಕಗಳನ್ನು ಪ್ರಕಟಿಸುವ ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ ( NCERT) 8ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದ ಒಂದು ಅಧ್ಯಾಯದಲ್ಲಿ ‘ನ್ಯಾಯಾಂಗ ದಲ್ಲಿನ ಭ್ರಷ್ಟಾಚಾರ’ ಎಂಬ ಪಾಠ ಮುದ್ರಿಸಿ, ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ನ್ಯಾಯಾಂಗ ನಿಂದನೆ ಕ್ರಮದ ಎಚ್ಚರಿಕೆ ನೀಡಿದ ಮೇಲೆ ಮೋದಿ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕ್ಷಮೆ ಕೇಳಿದ್ದಾರೆ.
ಆ ಬಳಿಕ ಎನ್ಸಿಆರ್ಟಿ ಶಾಲೆಗಳು ಮತ್ತು ಮಾರುಕಟ್ಟೆಯಲ್ಲಿದ್ದ 8ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕಗಳೆಲ್ಲವನ್ನೂ ವಾಪಸ್ ತೆಗೆದುಕೊಂಡಿದೆ. ಅಲ್ಲದೇ, ಮಂಗಳವಾರ ಸಾರ್ವಜನಿಕವಾಗಿ ನ್ಯಾಯಾಲಯದ ಕ್ಷಮೆ ಕೇಳಿದೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ, ಫೆ.26ರಂದು ಸುಪ್ರೀಂ ಕೋರ್ಟ್ 8ನೇ ತರಗ ತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದ ಮೇಲೆ ಪೂರ್ಣ ನಿಷೇಧ ಹೇರಿತ್ತು. ಅಲ್ಲದೇ ಅದರ ಎಲ್ಲಾ ಪ್ರತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಅದರ ಡಿಜಿ ಟಲ್ ಆವೃತ್ತಿಗಳನ್ನು ತಕ್ಷಣವೇ ತೆಗೆದುಹಾಕಲು ಆದೇಶಿಸಿತ್ತು.
ಈ ಸಂಬಂಧ ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಈ ನಿರ್ದೇಶನಗಳನ್ನು ನಿರ್ಲಕ್ಷಿರಿಸಿದರೆ ಗಂಭೀರ ಕ್ರಮ ಎದುರಿಸಬೇಕಾದೀತು ಎಂದೂ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ ಎಚ್ಚರಿಕೆ ನೀಡಿತ್ತು. ಅಲ್ಲದೇ, ವಿವಾದಿತ ಅಧ್ಯಾಯ ಪುಸ್ತಕಕ್ಕೆ ಸೇರ್ಪಡೆಯಾಗಲು ಕಾರಣರಾದವರ ಕ್ರಮ ತೆಗೆದುಕೊಳ್ಳಲೂ ಸೂಚಿಸಿತ್ತು.