ದೊಡ್ಡಬಳ್ಳಾಪುರ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಆದಾಲತ್ನಲ್ಲಿ (Lok Adalat) ವಿವಿಧ ರೀತಿಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ದೊಡ್ಡಬಳ್ಳಾಪುರ ತಾಲೂಕಿನ ವಿವಿಧ ನ್ಯಾಯಾಲಯಗಳ ಒಟ್ಟು 3737 ಪ್ರಕರಣಗಳನ್ನು ಕೈಗೆತ್ತಿಕೊಂಡು, 1593 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 1.64 ಕೋಟಿ ರೂಗಳ ಹಣವನ್ನುಒಪ್ಪಂದ ಮಾಡಿಕೊಳ್ಳಲಾಗಿದೆ.
ಒಂದಾದ ದಂಪತಿಗಳು
ಅದಾಲತ್ನಲ್ಲಿ 45 ವೈವಾಹಿಕ ವಿವಾದಗಳಿಗೆ ಸಂಬಂಧಪಟ್ಟ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, ಇದರಲ್ಲಿ 6 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.
ಕೌಟುಂಬಿಕ ಪ್ರಕರಣಗಳಲ್ಲಿ ದೂರವಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಗಂಡ-ಹೆಂಡತಿಯನ್ನು ರಾಜೀ ಸಂಧಾನದ ಮೂಲಕ ಒಂದು ಗೂಡಿಸಲಾಯಿತು. ಇಬ್ಬರು ದಂಪತಿಗಳು ನವ ವಧು- ವರರಂತೆ ಪರಸ್ಪರ ಹೂಮಾಲೆಗಳನ್ನು ಹಾಕಿಕೊಳ್ಳುವ ಮೂಲಕ ಒಂದಾದರು.
ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್ ನಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿಲ್ಪ.ಎಚ್.ಎ ರವರ ಸಮ್ಮುಖದಲ್ಲಿ 2013 ರಲ್ಲಿ ವಿವಾಹವಾಗಿದ್ದ ಗಾಯಿತ್ರಿ ಮತ್ತು ಶಂಕರಪ್ಪ ಎಂಬ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಇವರು 2023ರಲ್ಲಿ ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಧೀಶರ ಸಮ್ಮುಖದಲ್ಲಿ ಈ ದಂಪತಿಗಳು ಒಂದಾದರು.
ಇದೇ ಸಂದರ್ಭದಲ್ಲಿ ಪ್ರಧಾನ ಕಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ದಾಸರಿಕ್ರಾಂತಿ ಕಿರಣ್ ರವರು ಎರಡು ಕುಟುಂಬಗಳನ್ನು ಒಂದುಗೂಡಿಸಿದರು.
ಈ ವೇಳೆ ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ಆರ್.ಜೆ.ಎಸ್ ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಪ್ರೀತಿ ಕೆ., ರವಿ ಬೆಟೆಗಾರ್, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ರೇಣುಕಾ ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಕನಕ ರಾಜ್, ಉಪಾಧ್ಯಕ್ಷ ಜಗನ್ನಾಥ್.ಕೆ., ಖಜಾಂಚಿ ಗೀತಾ ಆರ್., ಜಂಟಿ ಕಾರ್ಯದರ್ಶಿ ನರಸಿಂಹಮೂರ್ತಿ ಮೊದಲಾದವರು ಹಾಜರಿದ್ದರು.