ದೊಡ್ಡಬಳ್ಳಾಪುರ: ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿರುವ ಮನೆಗೊಂದು ಗ್ರಂಥಾಲಯ (Library) ಅಭಿಯಾನವು ಸಮಾಜದಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸುವ ಮಹತ್ವದ ಹೆಜ್ಜೆಯಾಗಿದೆ ಎಂದು ನಿವೃತ್ತ ಶಿಕ್ಷಕ ರಾದ ಬಿ.ಎಲ್.ರಾಮಕೃಷ್ಣ (ಬಿ.ಎಲ್. ಆರ್) ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಬೆಂ.ಗ್ರಾ.ಜಿಲ್ಲಾ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ನಗರದ ನಿವೃತ್ತ ಶಿಕ್ಷಕರಾದ ವಿ.ವಿಮಲಮ್ಮ ಬಿ.ಎಲ್.ರಾಮಕೃಷ್ಣ ದಂಪತಿಗಳ ಮನೆಯಲ್ಲಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ಮನೆಯಲ್ಲಿರುವ ಗ್ರಂಥಾಲಯವು ಕೇವಲ ಪುಸ್ತಕಗಳ ಸಂಗ್ರಹವಾಗಿರುವ ಸ್ಥಳವಲ್ಲ; ಅದು ಜ್ಞಾನ, ಸಂಸ್ಕೃತಿ ಮತ್ತು ಉತ್ತಮ ಚಿಂತನೆಗಳನ್ನು ಬೆಳಗಿಸುವ ಜ್ಞಾನದ ದೀಪವಾಗಿದೆ ಎಂದು ತಿಳಿಸಿದರು.
ಶಿಕ್ಷಕನಾಗಿ ಸೇವೆ ಸಲ್ಲಿಸಿದ ಅನುಭವದಲ್ಲಿ ಹೇಳುವುದಾದರೆ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಾಯ ಮಾಡುತ್ತವೆ. ಆದರೆ ಬೇರೆ ಬೇರೆ ಸಾಹಿತ್ಯ ಕೃತಿಗಳು ಜೀವನವನ್ನು ಅರಿಯಲು, ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂಬುದನ್ನು ಗಮನಿಸಿದ್ದೇನೆ.
ಇಂದಿನ ಕಾಲದಲ್ಲಿ ಮೊಬೈಲ್ ಮತ್ತು ದೂರದರ್ಶನಗಳ ನಡುವೆ ಮಕ್ಕಳು ಹೆಚ್ಚು ಸಮಯ ಕಳೆಯುತ್ತಿರುವ ಹಿನ್ನೆಲೆಯಲ್ಲಿ ಮನೆಗಳಲ್ಲಿ ಪುಸ್ತಕಗಳ ಸಾನ್ನಿಧ್ಯ ಅಗತ್ಯವಾಗಿದೆ. ಪೋಷಕರು ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ಬೆಳೆಸಲು ಪ್ರೋತ್ಸಾಹ ನೀಡಬೇಕು. ದಿನಕ್ಕೆ ಕೆಲವು ನಿಮಿಷಗಳಾದರೂ ಪುಸ್ತಕ ಓದುವ ಅಭ್ಯಾಸ ಬೆಳೆದರೆ ಅದು ಅವರ ಜ್ಞಾನವರ್ಧನೆಗೆ ಮತ್ತು ಭವಿಷ್ಯದ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಖಾಸಗಿ ಕಾಲೇಜು ಉಪನ್ಯಾಸಕ ಗಿರೀಶ್, ಮಾತನಾಡಿ, ಕನ್ನಡ ಸಾಹಿತ್ಯವು ಅಪಾರ ಸಂಪತ್ತಾಗಿದೆ. ಕುವೆಂಪು, ಬೇಂದ್ರೆ, ಮಾಸ್ತಿ, ಶಿವರಾಮ ಕಾರಂತ ಮುಂತಾದ ಮಹನೀಯರ ಕೃತಿಗಳು ನಮ್ಮ ಬದುಕಿಗೆ ದಾರಿದೀಪಗಳಾಗಿವೆ. ಇಂತಹ ಅಮೂಲ್ಯ ಸಾಹಿತ್ಯ ಮನೆಮನೆಗೂ ತಲುಪುವ ಉದ್ದೇಶದಿಂದ ಮನೆಗೊಂದು ಗ್ರಂಥಾಲಯ ಅಭಿಯಾನವನ್ನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅವರು ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ನೇಮಕ ಮಾಡಿದ್ದಾರೆ.
ಪ್ರತಿ ಮನೆಯಲ್ಲಿ ಒಂದು ಚಿಕ್ಕ ಗ್ರಂಥಾಲಯ ಸ್ಥಾಪಿಸುವ ಮೂಲಕ ಮಕ್ಕಳಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಬೇಕು. ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು ಉತ್ತೇಜಿಸುವುದು ಅಗತ್ಯವಾಗಿದೆ ಎಂದರು.
ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿಯ ಜಿಲ್ಲಾ ಸದಸ್ಯ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ಪುಸ್ತಕಗಳನ್ನ ಓದುವ ಅಭ್ಯಾಸ ಮಾಡಿಕೊಳ್ಳುವುದರಿಂದ ನಮ್ಮಲ್ಲಿ ವಿಚಾರವಂತಿಕೆ ಬೆಳೆಯುತ್ತದೆ.
ಪುಸ್ತಕ ಓದುವುದರಿಂದ ಭಾಷೆ ಬೆಳೆಯುತ್ತದೆ, ಬರಹಗಾರರಿಗೆ ಪ್ರೋತ್ಸಾಹ ಕೊಟ್ಟಂತಗುತ್ತದೆ. ಯುವ ಪ್ರತಿಭೆಗಳಿಗೆ ನಾವು ಬೆನ್ನು ತಟ್ಟಿ ಪ್ರೋತ್ಸಾಹ ಮಾಡಿದಂತಾಗುತ್ತದೆ ಎಂದು ಹೇಳಿದರು.
ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಜಿಲ್ಲಾ ಸದಸ್ಯೆ ಪ್ರಮೀಳಾ ಮಹಾದೇವ ಅವರು ಮಾತನಾಡಿ,ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನ ನಡೆಸಿಕೊಡಲು ಮಾರ್ಗದರ್ಶನ ಮಾಡಿ, ನಮ್ಮಗಳ ಪ್ರೇರಕ ಶಕ್ತಿಯಾಗಿ ನಿಂತು ಇಂತಹ ಒಂದು ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಕರಿಯಪ್ಪ ನವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ನಾಮಿನಿ ಸದಸ್ಯ ಕಾಂತರಾಜ, ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸಂಚಾಲಕ ಗಂಗರಾಜ ಶಿರವಾರ, ಸದಸ್ಯೆ ಗೌಹರ್ ಜಾನ್ ನೆಲಮಂಗಲ, ಸಿರಿ ಸಮೃದ್ದಿ ಟ್ರಸ್ಟ್ ಕಾರ್ಯದರ್ಶಿ ಮುನಿರತ್ನ, ಮಂಜುನಾಥ್, ಕಲಾವಿದ ರಾಮಕೃಷ್ಣ, ಮುಂತಾದವರು ಭಾಗವಹಿಸಿದ್ದರು.