ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಸೇರಿ ರಾಜ್ಯದ 15 ಜಿಲ್ಲೆಗಳಲ್ಲಿ ಸತತ 2ನೇ ದಿನ ಬುಧವಾರವೂ ಭಾರಿ ಬಿರುಗಾಳಿ ಮಿಶ್ರಿತ ಮಳೆ (Rain) ಆಗಿದೆ. ಅನೇಕ ಕಡೆ ಮರ, ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ಗಳು ನೆಲಕ್ಕುರುಳಿ ಹಾನಿ ಆಗಿದೆ.

ಭಾರಿ ಬಿರುಗಾಳಿಗೆ ವಾಹನ ಸವಾರರು ಹೈರಾಣು..!
ಭಾರಿ ಬಿರುಗಾಳಿಗೆ ರಾಜ್ಯ ಹೆದ್ದಾರಿ ತಪಸೀಹಳ್ಳಿಯಲ್ಲಿ ವಾಹನ ಸವಾರರು ಪರದಾಡುವಂತಾಗಿರುವ ಘಟನೆ ಬುಧವಾರ ರಾತ್ರಿ ವರದಿಯಾಗಿದೆ.
ಮತ್ತೊಂದೆಡೆ ಜಾಲಪ್ಪ ಕಾಲೇಜು ರಸ್ತೆಯಲ್ಲಿ ಎರಡು ಮರ, ವಿದ್ಯುತ್ ಕಂಬ, ನಗರಸಭೆ ಕಚೇರಿ ರಸ್ತೆ ಬಳಿ ಮರ ಬಿದ್ದಿದೆ.
ದೊಡ್ಡಬಳ್ಳಾಪುರದಲ್ಲಿ ಬಿರುಗಾಳಿ ಸಹಿತ ಮಳೆಗೆ ನಗರದ ಅರಳು ಮಲ್ಲಿಗೆ ಬಾಗಿಲು ವಿಶ್ವೇಶ್ವರಯ್ಯ ವೃತ್ತದ ಬಳಿ ರಸ್ತೆ ಬದಿಯ ಮರವೊಂದು ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಕಾಂಪೌಂಡ್ ಮೇಲೆ ಉರುಳಿ ಬಿದ್ದಿದ್ದು, ಅದೃಷ್ಟವಷಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಬುಧವಾರ ರಾತ್ರಿ ಭಾರೀ ಬಿರುಗಾಳಿ, ಮಳೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಮೇಷ್ಟ್ರು ಮನೆ ಕ್ರಾಸ್ ರಸ್ತೆ ಇಂದ ನೇರಳಘಟ್ಟ ಗ್ರಾಮದವರೆಗೂ ರಸ್ತೆಯುದ್ದಕ್ಕೂ ಮರಗಳು ಬಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಈ ಭಾಗದಲ್ಲಿ ಸಂಚಾರ ಬಂದ್ ಅಗಿದೆ.
ಅಲ್ಲದೆ ಕೆಸ್ತೂರ್ ಗೇಟ್, ಕೊಡಿಗೇಹಳ್ಳಿ ಬಳಿ ಮರ ಹಾಗೂ ಮರದ ಕೊಂಬೆಗಳು ಬಿದ್ದು ವಿದ್ಯುತ್ ತಂತಿಗಳು ಕಟ್ ಆಗಿತ್ತು.
ಸಿಲಿಂಡರ್ ಕೊರತೆಯಿಂದ ಬಸವಳಿದಿರುವ ಜನತೆ, ಯುಗಾದಿ ಹಬ್ಬದ ಹಿಂದಿನ ದಿನದ ಮಳೆಯ ಅಬ್ಬರದಿಂದಾಗಿ ವಿದ್ಯುತ್ ಪೂರೈಕೆ ಹಲವೆಡೆ ಕಟ್ಟಾಗಿದ್ದು, ಹೂರಣ ಮಾಡಲು ಮಹಿಳೆಯರು ರುಬ್ಬುವ ಒಳಕಲ್ಲನ್ನು ಆಶ್ರಯಿಸಬೇಕಾದ ಅನಿರ್ವಾರ್ಯತೆ ಎದುರಾಗಿದೆ.
ತಾಲ್ಲೂಕಿನಲ್ಲಿ 2025ರ ನಂವೆಂಬರ್ ಎರಡನೇ ವಾರದಲ್ಲಿ ಹಿಂಗಾರಿನ ಕೊನೆಯ ಮಳೆ ಬಿದ್ದಿತ್ತು. ಯುಗಾದಿ ಹಬ್ಬ ಇನ್ನು ಎರಡು ದಿನ ಇರುವಂತೆಯೇ ಬಂದಿರುವ ಮಳೆಯಿಂದಾಗಿ ರೈತರಲ್ಲಿ ಸಂತಸ ಮೂಡಿದೆ. ಯುಗಾದಿ ಹಬ್ಬ ನಂತರ ಮಾರ್ಚ್ 31ರಂದು ಹುಟ್ಟುವ ರೇವತಿ ಮಳೆಯ ಬೀಳಲು ಪ್ರಾರಂಭವಾದರೆ ಉತ್ತಮ ಮುಂಗಾರಿನ ನಿರೀಕ್ಷೆ ಇರಲಿದೆ ಎನ್ನುವ ನಂಬಿಕೆ ರೈತರದ್ದು.
25ರ ವರೆಗೆ ಮಳೆ ಸಾಧ್ಯತೆ
ಬಂಗಾಳ ಕೊಲ್ಲಿಯಲ್ಲಿ ಮೇಲ್ಮ ಸುಳಿಗಾಳಿ ಇರಿವುದರಿಂದ ಮಾ.25ರ ವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಿದ್ದಾರೆ.