ದೊಡ್ಡಬಳ್ಳಾಪುರ: ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬ ಗುರುವಾರ ಭಕ್ತಿಭಾವದಿಂದ ನಡೆದಿದೆ. ಇಂದು (ಶುಕ್ರವಾರ) ಹೊಸತೊಡಕು ಸಂಭ್ರಮ ಮನೆಮಾಡಿದ್ದು, ಎಲ್ಲೆಡೆ ಮಟನ್, ಚಿಕನ್ (Mutton and Chicken) ಖರೀದಿಗೆ ಜನ ಮುಗಿಬಿದ್ದಿದ್ದಾರೆ.

ಹೊಸತೊಡಕು ಹಿನ್ನೆಲೆಯಲ್ಲಿ ಗ್ರಾಹಕರು ಮಟನ್, ಚಿಕನ್ ಸ್ಟಾಲ್ ಮುಂದೆ ಕ್ಯೂ ನಿಂತಿದ್ದಾರೆ. ಮುಂಜಾನೆಯಿಂದಲೇ ಮಟನ್, ಚಿಕನ್ ಅಂಗಡಿಗಳ ಮುಂದೆ ಜನರು ಜಮಾಯಿಸಿದ್ದಾರೆ.
ಯುಗಾದಿಯ ಸಿಹಿ ತಿಂದ ಮೇಲೆ ಹಬ್ಬದ ರಜದಲ್ಲಿ ಮಾಂಸದ ಅಡುಗೆ ಮಾಡುವ ಪದ್ದತಿ ಹಿಂದಿನಿಂದಲೂ ಬೆಳೆದುಕೊಂಡು ಬಂದಿದೆ. ನೆಂಟರು, ಸ್ನೇಹಿತರೆಲ್ಲ ಕೂಡಿ ಮಾಂಸಾಹಾರ ಖಾದ್ಯಗಳನ್ನು ತಯಾರಿಸಿ ತಿನ್ನುವ ಹಬ್ಬ ಇದಾಗಿದೆ.
ಕರಿಯಬ್ಬ ಎಂದು ಸಾಮಾನ್ಯರಲ್ಲಿ ಕರೆಯುವ ಯುಗಾದಿ ಹಬ್ಬದ ಮಾರನೇ ದಿನ ಮಾಂಸದ ಅಂಗಡಿಗಳಲ್ಲಿ ಮಾಂಸ ಖರೀದಿ ನಡೆಯುತ್ತದೆ.
ದೊಡ್ಡಬಳ್ಳಾಪುರ ನಗರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಸಹ ಹೊಸ ತೊಡಕು ಆಚರಣೆ ಮಾಡಲಾಗುತ್ತಿದ್ದು, ಕೆಲ ಗ್ರಾಮಗಳಲ್ಲಿ ಗುಡ್ಡೆ ಮಾಂಸದ ವ್ಯಾಪಾರ, ಚೀಟಿ ವ್ಯಾಪಾರ ನಡೆದಿದೆ.
ಮಾರುಕಟ್ಟೆಯಲ್ಲಿ 800 ಮೇಕೆ, ಕುರಿ ಮಾಂಸ ಮಾರಾಟವಾದರೆ, ಕೋಳಿ ರೆಡಿ ಚಿಕನ್ 250 ರೂ., ಮೊಟ್ಟೆ ಕೋಳಿ ರೆಡಿ ಚಿಕನ್ 160 ರೂ., ರಾಣಿ ಬಾಯ್ಲರ್ 250 ರೂ.ಕ್ಕೆ, ಬಾಯ್ಲರ್ ಕೋಳಿ 182ರೂ. ರಾಣಿ ಬಾಯ್ಲರ್ 185 ರೂ., ಮೊಟ್ಟೆ ಕೋಳಿ 128 ರೂ, ಮೊಟ್ಟೆ 12 ಕ್ಕೆ 66 ರೂ ಮಾರಾಟವಾಗುತ್ತಿದೆ ಎಂದು ಹೆಚ್ಎಜೆ ಚಿಕನ್ ಸೆಂಟರ್ ಮಾಲೀಕ ಹಾಗೂ ಕರ್ನಾಟಕ ಪೌಲ್ಟ್ರೀ ಟ್ರೇಂಡಿಗ್ ಕಾರ್ಯಾಧ್ಯಕ್ಷ ಅಂಬರೀಶ್ ತಿಳಿಸಿದ್ದಾರೆ.
ಬೆಳಗ್ಗೆಯಿಂದ ಗ್ರಾಹಕರು ನೆಮ್ಮದಿಯಿಂದ ಮಾಂಸ ಖರೀದಿ ನಡೆಸುತ್ತಿದ್ದಾರೆ, ಎಲ್ಲೆಡೆ ಬೆಳಗ್ಗೆಯಿಂದಲೂ ಉತ್ತಮ ವ್ಯಾಪಾರ ನಡೆಯುತ್ತಿದ್ದು, ಗ್ರಾಹಕರ ಬೇಡಿಕೆಯನ್ನು ಪೂರೈಸಲಾಗುತ್ತಿದೆ ಎಂದು ಹೆಚ್.ಎ.ಜೆ.ಚಿಕನ್ ಸೆಂಟರ್ ಮಾಲೀಕರಾದ ಅಂಬರೀಶ್ ತಿಳಿಸಿದ್ದಾರೆ.