ದೊಡ್ಡಬಳ್ಳಾಪುರ: ತಾಲೂಕಿನ ಆರೂಢಿ ಸೇರಿ 7 ಕೆರೆಗಳಿಗೆ ಎತ್ತಿನಹೊಳೆಯ ಯೋಜನೆಯಡಿಯಲ್ಲಿ (Yettinahole project) ನೀರು ತುಂಬಿಸುವ ಕುರಿತು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಹಣಬೆಯ ಕೀರ್ತಿಗೌಡ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಉತ್ತರ ನೀಡಿದ್ದಾರೆ.
ಇದರ ಅನ್ವಯ ದೊಡ್ಡಬೆಳವಂಗಲ ಹೋಬಳಿಯ ಮೂಡಲಕಾಳೆಹಳ್ಳಿಯ ಹೊಸಕೆರೆ, ಸಾಸಲು ಹೋಬಳಿಯ ಶ್ರೀರಾಮನಹಳ್ಳಿ ಹೊಸಕೆರೆ, ಮಚ್ಚೇನಹಳ್ಳಿ ಹೊಸಕೆರೆ, ಕೊಟ್ಟಿಗೆಮಾಚೇನಹಳ್ಳಿ ಹೊಸಕೆರೆ, ಆರೂಢಿ ಕೆರೆ, ಗುಂಡಮಗೆರೆ ಟ್ಯಾಂಕ್ ಹಾಗೂ ಮಲ್ಲಸಂದ್ರ ಹೊಸಕೆರೆಗಳಿಗೆ ಎತ್ತಿನಹೊಳೆಯಡಿ ಯೋಜನೆ ನೀರು ತುಂಬಿಸುವುದಾಗಿ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೀರ್ತಿಗೌಡ, ಎತ್ತಿನಹೊಳೆಯ ಯೋಜನೆಯಲ್ಲಿ ಹಣಬೆ ಹಾಗೂ ತಿಮ್ಮಮ್ಮನ ಕೆರೆಗೆ ನೀರು ಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಮಾಹಿತಿ ಹಕ್ಕಿನ ಅಡಿಯಲ್ಲಿ ದೊರೆತ ಪಟ್ಟಿ ನೋಡಿದರೆ ಈ ಎರಡು ಕೆರೆಗಳು ಎತ್ತಿನಹೊಳೆ ಯೋಜನೆಯ ನೀರಿನಿಂದ ವಂಚಿತವಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
(ಎತ್ತಿನಹೊಳೆ ಯೋಜನೆ ಅನುಷ್ಠಾನ ಕುರಿತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಇತ್ತೀಚಿನ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸ್ಥಳ ಪರಿಶೀಲನೆಯ ಸಂಗ್ರಹ ಫೋಟೋ ಬಳಸಲಾಗಿದೆ)