ನವದೆಹಲಿ: ಧರ್ಮಸ್ಥಳದ (Dharmasthala) ಸೌಜನ್ಯ (Saujanya) ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಸರ್ಕಾರ ಮತ್ತು ಸಿಬಿಐಗೆ ನೋಟಿಸ್ ನೀಡಿದೆ.

ಈ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ, ಏಪ್ರಿಲ್ 28ಕ್ಕೆ ವಿಚಾರ ಣೆಯನ್ನು ಮುಂದೂಡಿಕೆ ಮಾಡಿದೆ ಎಂದು ವರದಿಯಾಗಿದೆ.
ಈ ಹಿಂದೆ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪುರಾವೆ ಇಲ್ಲ ಎಂದು ಹೇಳಿ ಮರು ತನಿಖೆಗೆ ಅದೇಶಿಸಲು ನಿರಾಕರಿಸಿತ್ತು. ಆದರೆ ಇದೀಗ ಸುಪ್ರೀಂ ಕೋಟ್೯ಗೆ ವೈದ್ಯಕೀಯ ಪುರಾವೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.
2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಧರ್ಮಸ್ಥಳದ ಬಳಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಮರುದಿನ ಆಕೆಯ ಮೃತದೇಹ ನೇತ್ರಾವತಿ ಸ್ನಾನಘಟ್ಟದ ಬಳಿಯ ಪೊದೆಯಲ್ಲಿ ಸಿಕ್ಕಿತ್ತು.
ಸೌಜನ್ಯ ಪ್ರಕರಣವನ್ನು 2013ರಲ್ಲಿ ಸಿಬಿಐಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ.ಸಂತೋಷ್ 2023ರಲ್ಲಿ ಲೋಪದೋಷ ಗಳನ್ನು ಗುರುತಿಸಿ ಸಂತೋಷ್ ರಾವ್ ನನ್ನು ಖುಲಾಸೆಗೊಳಿಸಿದ್ದರು. ಇಲ್ಲಿಯವರೆಗೆ ಸೌಜನ್ಯಳನ್ನು ಹಂತಕರು ಯಾರೆಂದು ಗೊತ್ತಾಗಿಲ್ಲ.