ದೊಡ್ಡಬಳ್ಳಾಪುರ: ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಲಿ (KIADB) ವತಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯಲ್ಲಿ ಉದ್ದೇಶಿಸಿರುವ 2100 ಎಕರೆ ಭೂ ಸ್ವಾಧೀನದ ವಿರುದ್ಧ ರೈತರು ಕೆರಳಿದ್ದು, ಬಿರು ಬಿಸಿಲಿನಲ್ಲಿಯೂ ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕೆಂದು ಪಟ್ಟುಹಿಡಿದಿದ್ದು, ರೈತರನ್ನು ಕಡೆಗಣಿಸುವುದನ್ನು ಸಹಿಸುವುದಿಲ್ಲ, ಡಿಸಿ ಬರದಿದ್ದರೆ ರೈತರೊಂದಿಗೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರೆ.
ಇದಕ್ಕೂ ಮುನ್ನ ಖಾನ್ ಮಠದಿಂದ ದೊಡ್ಡಬೆಳವಂಗಲ ನಾಡ ಕಚೇರಿವರೆಗೆ ಜಾಥಾ ನಡೆಸಿದ ರೈತರು, ನಾಡ ಕಚೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದೊಡ್ಡಬೆಳವಂಗಲ, ಚಿಕ್ಕಬೆಳವಂಗಲ, ಸೊನ್ನೇನಹಳ್ಳಿ, ರಾಂಪುರ ನಾರನಹಳ್ಳಿ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ತಾಪಂ ಮಾಜಿ ಅಧ್ಯಕ್ಷ ಡಿ.ಸಿ.ಶಶಿಧರ್, ರೈತ ಸಂಘದ ಪ್ರಭ ಬೆಳವಂಗಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ನಿಗಮದ ಅಧ್ಯಕ್ಷ ವಿಶ್ವನಾಥ ರೆಡ್ಡಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದಾರೆ.