ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು (Women’s Day celebration) ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮನಶಾಸ್ತ್ರಜ್ಞೆ ಡಾ. ಪದ್ಮಾಕ್ಷಿ ಲೋಕೇಶ್ ಮಾತನಾಡಿ, ಮನುಷ್ಯ ಶೇ.83 ರಷ್ಟು ಒತ್ತಡದಲ್ಲಿ ಜೀವನ ನಡೆಸುತ್ತಿರುವ ಕಾರಣ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಮನಸ್ಸು ದೇಹವನ್ನು ಹತೋಟಿಯಲ್ಲಿಟ್ಟುಕೊಂಡರೆ ಉತ್ತಮ ಜೀವನ ಸಾಧ್ಯ.

ಉತ್ತಮ ಆರೋಗ್ಯಕ್ಕಾಗಿ ಊಟದಲ್ಲಿ ಸಮಯ ಪಾಲನೆ, ಸಮಾಧಾನವಾಗಿ ನೀರನ್ನು ಕುಡಿಯಬೇಕು, ನೆಮ್ಮದಿಯಾಗಿ ನಿದ್ರೆ ಮಾಡಬೇಕು ಎಂದು ಹೇಳಿದರು.
ಮಹಿಳೆಯರು ಇಂದು ಕೆಲಸ ಮಾಡುತ್ತಿದ್ದಾರೆ ಒತ್ತಡ ಇರುತ್ತದೆ ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಸಲಹೆ ನೀಡಿದರು.
ನಾಲ್ಕನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿರ್ಮಲ ಕೆ ಅವರು ಮಾತನಾಡಿ, ಸಮಾಜದಲ್ಲಿ ಸಮಾನತೆ ಅತಿಮುಖ್ಯ, ಸಮಾಜಮುಖಿಯಾಗಿ ಎಲ್ಲರೂ ಕೆಲಸ ಮಾಡಬೇಕುಣ ಮಹಿಳೆಯರಿಗೆ ಎಲ್ಲಕ್ಕಿಂತ ಮಿಗಿಲಾಗಿ ಆತ್ಮ ಗೌರವ ಇರಬೇಕು, ಸಮಾಜದಲ್ಲಿ ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದು ಹೇಳಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್ಎ ಶಿಲ್ಪ ಅವರು ಮಾತನಾಡಿ, ಒಬ್ಬ ವ್ಯಕ್ತಿ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ಮಹತ್ವವಾದದ್ದು, ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ, ಬಾಳಿಗೆ ಬೆಳಕಾಗುತ್ತಾಳೆ.
ಲಿಂಗ ಸಮಾನತೆ, ಸಬಲೀಕರಣ ಮತ್ತು ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಬೇಕು ಎಂದರು.
ಅಪರ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಪ್ರೀತಿ ಕೆ ಅವರು ಮಾತನಾಡಿ, ಮಹಿಳೆಯರು ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇತರೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆಯನ್ನು ಕೊಟ್ಟಿರುತ್ತಾರೆ. ಅವರ ಸಾಧನೆಯನ್ನ ಗುರುತಿಸಲು ಈ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್ ಆರ್ ಜೆ ಎಸ್., ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್, ಎರಡನೇ ಅಪರ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಧೀಶರಾದ ರವಿ ಬೆಟಗೇರಿ, ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ರೇಣುಕಾ ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಕನಕ ರಾಜ್, ಉಪಾಧ್ಯಕ್ಷ ಜಗನ್ನಾಥ್, ಖಜಾಂಚಿ ಗೀತಾ ಸೇರಿದಂತೆ ಹಿರಿಯ ವಕೀಲರು, ಸಂಘದ ನಿರ್ದೇಶಕರು ಮತ್ತು ನ್ಯಾಯಾಲಯದ ಸಿಬ್ಬಂದಿ ಹಾಜರಿದ್ದರು.