ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

RCB ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತ ಘಟನೆಯ ಬಳಿಕ ಸುಮಾರು 9 ತಿಂಗಳು ಸೂತಕದ ವಾತಾವರಣವಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ ಪಿಎಲ್ ರಂಗು ಕಾಣಿಸಿಕೊಂಡಿದೆ.
ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟವರ ಸ್ಮರಣಾರ್ಥ 11 ಸೀಟುಗಳನ್ನು ಶಾಶ್ವತವಾಗಿ ಖಾಲಿ ಬಿಡಲು ತೀರ್ಮಾನಿಸಿರುವ ಕೆಎಸ್‌ಸಿಎ ಮತ್ತು ಆರ್‌ಸಿಬಿ, ಉದ್ಘಾಟನಾ ಪಂದ್ಯದಲ್ಲಿ ಯಾವುದೇ ಮನರಂಜನಾ ಕಾಠ್ಯಕ್ರಮಗಳಿಲ್ಲದೆ ಸರಳವಾಗಿ ಪಂದ್ಯವನ್ನು ಆರಂಭಿಸಲು ನಿರ್ಧರಿಸಿದೆ.
ಕಳೆದ ಜೂನ್ ತಿಂಗಳಲ್ಲಿ ನಡೆದ ದುರಂತದಿಂದ ಎಚ್ಚೆತ್ತು ಕೊಂಡಿರುವ ಬೆಂಗಳೂರು ನಗರ ಪೊಲೀಸರು ಶನಿವಾರದ ಪಂದ್ಯಾವಳಿಗೆ ಬರೋಬ್ಬರಿ 2 ಸಾವಿರ ಪೊಲೀಸರ ಸರ್ಪಗಾವಲು ಹಾಕಿದ್ದಾರೆ. ರಾತ್ರಿ 7.30ಕ್ಕೆ ಪಂದ್ಯ ಆರಂಭವಾ ಗಲಿದ್ದು 4 ಗಂಟೆ ಮುಂಚಿತವಾಗಿ ಟಿಕೆಟ್‌ಹೊಂದಿದವರು ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಬಿಟ್ಟಿ ಟಿಕೆಟ್ ಕೇಳಿ ಮರ್ಯಾದೆ ಕಳೆದುಕೊಂಡ ಶಾಸಕರು
ಐಪಿಎಲ್‌ಗೆ ನೋಡಲು ವಿಐಪಿ ಟ್ರೀಟ್‌ಮೆಂಟ್ ಕೇಳಿದ್ದ, ಮನೆಮಂದಿಗೆಲ್ಲ ನೋಡಲು ಐದು ಟಿಕೆಟ್‌ಗೆ ವಿಧಾನಸಭೆಯಲ್ಲಿ ಬೇಡಿಕೊಂಡಿದ್ದ ಶಾಸಕರ ಒತ್ತಾಯಕ್ಕೆ ಸಾರ್ವಜನಿಕ ವಲಯದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ವಿಧಾನಸಭೆಯ ಕಲಾಪದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ಶಾಸಕರು ಐಪಿಎಲ್ ನೋಡಲು ಐದು ಟಿಕೆಟ್ ಕೊಡಿಸಬೇಕು, ಶಾಸಕರಿಗಾಗಿ ವಿಐಪಿ ಜಾಗ ಮಾಡಬೇಕು ಎಂದು ಸ್ಪೀಕರ್‌ಗೆ ದುಂಬಾಲು ಬಿದ್ದ ಘಟನೆ ಹಾಗೂ ಐದು ಟಿಕೆಟ್ ಕೊಡಿಸುವಂತೆ ಸರಕಾರಕ್ಕೆ ಸೂಚನೆ ನೀಡಿರುವ ನಡೆ ತೀವ್ರ ಅಕ್ಷೇಪಕ್ಕೆ ಕಾರಣವಾಗಿದೆ.
ಶಾಸಕರಾಗಿದ್ದವರು, ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡುವುದು ಬಿಟ್ಟು, ಈ ರೀತಿ ಟಿಕೆಟ್ ಕೊಡಿಸುವಂತೆ ಒತ್ತಡ ಹೇರಲು ಸದನವನ್ನು ಬಳಸಿಕೊಂಡಿರುವುದು ಸರಿಯಲ್ಲ. ಅದರಲ್ಲಿಯೂ ಜನಪ್ರತಿನಿಧಿಗಳಾದವರು ಜನ ರೊಂದಿಗೆ ಕುಳಿತು ಕ್ರಿಕೆಟ್ ನೋಡುವುದರಲ್ಲಿ ತಪ್ಪೇನಿದೆ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಎತ್ತಿದ್ದಾರೆ.
ಶಾಸಕರು ಇರುವುದು ಶಾಸನ ಮಾಡುವುದಕ್ಕೆ, ಸವಾರಿ ಮಾಡಲು ಅಲ್ಲ. ಬೆಟ್ಟಿಂಗ್ ದಂಧೆ ಮಾಡಿ ಶಾಸಕರಾದವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಟಿಕೆಟ್‌ಗೆ ಹೀಗೆ ಅಂಗಲಾಚುವ ಶಾಸಕರಿಂದ ಕ್ಷೇತ್ರದ ಸಮಸ್ಯೆಗೆ ಪರಿಹಾರ ಸಾಧ್ಯವೇ? ಎನ್ನುವ ಆಕ್ರೋಶದ ಮಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.