ಸಕಲೇಶಪುರ: ಮದುವೆ ನಿಶ್ಚಯವಾಗಿದ್ದ ಜೋಡಿಯೊಂದರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ಗೆಂದು (photoshoot) ತೆರಳಿದ್ದ ಫೋಟೋಗ್ರಾಫರ್ಗಳ (Photographers) ಮೇಲೆ ಸ್ಥಳೀಯ ಕೆಲವರು ಹಲ್ಲೆ ನಡೆಸಿರುವ ಘಟನೆ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಾಲಯದ ಆವರಣದಲ್ಲಿ ನಡೆದಿದೆ.

ಘಟನೆಯಲ್ಲಿ ಹಾಸನದ ಫೊಟೋಗ್ರಾಫರ್ ಯಶ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಕ್ಯಾಮೆರಾ ಮತ್ತಿತರ ಉಪಕರಣಗಳು ಹಾನಿಯಾಗಿದೆ.
ಹಲ್ಲೆಗೊಳಗಾದ ಯಶ್ ಸಕಲೇಶಪುರದ ತಾಲೂಕು ಆಸ್ಪತ್ರೆ ಯಲ್ಲಿ ದಾಖಲಾಗಿದ್ದಾರೆ.
ದೇವಾಲಯದ ಮುಂಭಾಗ ಫೋಟೋಶೂಟ್ ಮಾಡುವಾಗ ಅಲ್ಲಿಗೆ ಬಂದ ಸ್ಥಳೀಯ ಯುವಕರ ಗುಂಪು ಕ್ಯಾಮೆರಾಮೆನ್ಗಳ ಜತೆ ವಾಗ್ವಾದಕ್ಕಿಳಿದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು, ಮತ್ತಷ್ಟು ಜನರ ಕರೆತಂದು ಕ್ಯಾಮೆರಾಮೆನ್ಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಸಂಬಂಧ ಸಕಲೇಶಪುರ ಗ್ರಾಮಾಂತರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದ ಆರೋಪದ ಮೇರೆಗೆ ಮೂಡಿಗೆರೆ ತಾಲ್ಲೂಕಿನ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಭಿ, ಪ್ರಶಾಂತ್, ರಕ್ಷ, ಅರವಿಂದ್, ಉಚಿತ್, ಪ್ರಜ್ವಲ್, ನಿಶಾಂತ್ ಬಂಧಿತರು.
ಹಾಸನ ಹಾಗೂ ಬೆಂಗಳೂರಿನ ಛಾಯಾಗ್ರಾಹಕರಾದ ನವಿ, ಯಶ್ ಹಾಗೂ ನಂದನ್ ಹಾಗೂ ಆರೋಪಿಗಳ ನಡುವೆ ನಡೆದ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿತ್ತು.
ಬಂಧಿತರನ್ನು ಕೋರ್ಟ್ಗೆ ಕರೆದೊಯ್ಯುವಾಗ ಠಾಣೆ ಎದುರೇ ಛಾಯಾಗ್ರಾಹಕರು, ಆರೋಪಿಗಳ ಕಡೆಯವರ ಮಧ್ಯೆ ಮತ್ತೆ ಹೊಡೆದಾಟ ನಡೆಯಿತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.