ದೊಡ್ಡಬಳ್ಳಾಪುರ: ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಸುತ್ತ ಮುತ್ತ ನಡೆಯುತ್ತಿರುವ 2,100 ಎಕರೆ ಫಲವತ್ತಾದ ಕೃಷಿ ಭೂಸ್ವಾಧೀನ (Land acquisition) ಖಂಡಿಸಿ, ಭೂ ಸ್ವಾಧೀನದ ವಿರುದ್ಧ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಚಿಕ್ಕಬೆಳವಂಗಲದಿಂದ ತಾಲ್ಲೂಕು ಕಚೇರಿವರೆಗೆ ಮಂಗಳವಾರ ನೂರಾರು ಟ್ರ್ಯಾಕ್ಟರ್ (Tractors) ರ್ಯಾಲಿ ನಡೆಸುವ ಮೂಲಕ ರೈತರು ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಸಿ.ಎಚ್.ಹನುಮಂತರಾಯ ಅವರು, ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಫವತ್ತಾದ ಕೃಷಿ ಭೂಮಿ ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನವಾಗುವಂತೆ ಮಾಡಿದ್ದಾರೆ.
ಈಗ ಸ್ವಾಧೀನಕ್ಕೆ ಒಳಪಡುತ್ತಿರುವ ಕೃಷಿ ಭೂಮಿಯಲ್ಲಿ ನಮ್ಮ ಪೂರ್ವಿಕರ ಕಾಲದಿಂದಲು ಅಡಿಕೆ, ತೆಂಗು,ಬಾಳೆ ಸೇರಿದಂತೆ ಹತ್ತಾರು ರೀತಿಯ ಬೆಳೆಗಳನ್ನು ಬೆಳೆಯುತ್ತ ಬದುಕು ಕಟ್ಟಿಕೊಂಡಿರುವ ಸಾವಿರಾರು ರೈತ ಕುಟುಂಬಗಳು ಇವೆ. ಇಂತಹ ಫಲವತ್ತಾದ ಕೃಷಿ ಭೂಮಿಯನ್ನು ಖಾಲಿ ಭೂಮಿ ಎಂದು ಸರ್ಕಾರಕ್ಕೆ ವರದಿ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು.
ಈಗ ಸ್ವಾಧೀನ ಮಾಡಿಕೊಳ್ಳಲು ಉದ್ದೇಶಿಸಿರುವ ದೊಡ್ಡಬೆಳವಂಗಲ, ರಾಂಪುರ, ಸೊಣ್ಣೇನಹಳ್ಳಿ, ನಾರನಹಳ್ಳಿ ಹಾಗೂ ಚಿಕ್ಕಬೆಳವಂಗಲ ಗ್ರಾಮಗಳ ಭೂಮಿಯನ್ನು ಕೈಬಿಡದೇ ಇದ್ದರೆ ನ್ಯಾಯಾಲಯದ ಮೂಲಕ ರೈತರಿಗೆ ನ್ಯಾಯ ದೊರಕಿಸಿಕೊಡಲಾಗುವುದು. ಹಾಗೆಯೇ ತಪ್ಪು ಮಾಹಿತಿ ನೀಡಿರುವ ಅಧಿಕಾರಿಗಳ ವಿರುದ್ಧವು ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಮ್ಮ ಪ್ರತಿಭಟನೆಗೆ ಮನ್ನಣೆ ನೀಡಿ ಸರ್ಕಾರ ಭೂಸ್ವಾಧೀನವನ್ನು ಕೈಬಿಡದೇ ಇದ್ದರೆ ಫಲವತ್ತಾದ ಹಾಗೂ ಸಮೃದ್ಧವಾಗಿ ಬೆಳೆ ಬೆಳೆಯುತ್ತಿರುವ ಭೂಮಿಯನ್ನು ಖಾಲಿ ಭೂಮಿ ಎಂದು ವರದಿ ನೀಡಿರುವ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧವು ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು. ನಮ್ಮೂರಿನ ಫಲವತ್ತಾದ ಕೃಷಿ ಭೂಮಿ ಸ್ವಾಧೀನ ರದ್ದತಿಯ ಹೋರಾಟಕ್ಕೆ ಮುಂದಿನ ದಿನಗಳಲ್ಲಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಮುಖಂಡರಾದ ಎನ್.ಪ್ರಭಾ, ಡಿ.ಸಿ.ಶಶಿಧರ್ ಮಾತನಾಡಿ, ತಾಲೂಕಿನ ದೊಡ್ಡಬೆಳವಂಗಲ ಚಿಕ್ಕಬೆಳವಂಗಲ, ಸೊಣೇನಹಳ್ಳಿ, ನಾರನಹಳ್ಳಿ, ರಾಂಪುರ ಗ್ರಾಮಗಳ ಮೇಲ್ಕಂಡ ಗ್ರಾಮಗಳ ರೈತರಿಗೆ ಸೇರಿದ ಸುಮಾರು 2100 ಎಕರೆ ಕೃಷಿ ಭೂಮಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಳ್ಳಲು ವಿಶೇಷ ಜಿಲ್ಲಾಧಿಕಾರಿಗಳು ಕೆಐಎಡಿಬಿಯ 398ನೆಯ ಬೋರ್ಡ್ ಸಭೆಯಲ್ಲಿ ಮಂಡಿಸಿ, ಭೂ-ಸ್ವಾಧೀನಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಕೃಷಿಕರನ್ನು ಅವಲಂಬಿಸಿ ನೂರಾರು ಕೃಷಿ ಕೂಲಿ ಕಾರ ಕುಟುಂಬಗಳು ಬದುಕು ನಡೆಸುತ್ತಿವೆ. ಈ ನಿಟ್ಟಿನಲ್ಲಿ ಭಾರತದ ಸಂವಿಧಾನವು ಎಲ್ಲರಿಗು ಜೀವಿಸುವ, ಬದುಕುವ ಹಕ್ಕನ್ನು ನೀಡಿದ್ದು ಆ ಪ್ರಕಾರವಾಗಿ ಈಗಾಗಲೆ ಸೊರಗಿರುವ ರೈತರನ್ನು ಬದುಕಲು ಬಿಡಬೇಕೆಂದು, ಗುಳೆ ಹೋಗುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಬಾರದೆಂದು ಆಗ್ರಹಿಸಲಾಗುತ್ತಿದ್ದು, ಮುಖ್ಯಮಂತ್ರಿಗಳಿಗೂ ಸಹ ಮನವಿ ಸಲ್ಲಿಸಲಾಗಿದೆ ಎಂದರು.
ಪ್ರತಿಭಟನೆಯಲ್ಲಿ ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಜೆಡಿಎಸ್ ಮುಖಂಡ ಹರೀಶ್ ಗೌಡ, ಸಿಪಿಐಂ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ, ಕರವೇ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ಸ್ಥಳೀಯ ಸಿ.ಎಚ್.ರಾಮಕೃಷ್ಣಯ್ಯ, ಸುನಿಲ್ ಕುಮಾರ್ ಸೇರದಂತೆ ರೈತ ಸಂಘ, ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.