ದೊಡ್ಡಬಳ್ಳಾಪುರ; ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳದಿಂದ ಭಾನುವಾರ ನಗರದಲ್ಲಿ ಶೋಭಾಯಾತ್ರೆ (Sobhayatre) ಅದ್ದೂರಿಯಾಗಿ ನೆರವೇರಿದೆ. ಆದರೆ ಆಯೋಜಕರಿಗೆ ಸಂಕಷ್ಟ (FIR) ಎದುರಾಗಿದೆ.

ಹೌದು ಪ್ರತಿ ವರ್ಷದಂತೆಯೇ ಈ ಬಾರಿಯೂ ಡಿ.ಜೆಗೆ ಅನುಮತಿ ನೀಡದೆ ಧ್ವನಿವರ್ಧಕಗಳ ಬಳಕೆಗೆ ಮಾತ್ರ ಅನುಮತಿ ನೀಡಲಾಗಿತ್ತು. ಆದರೆ ಡಿಜೆ ಸೌಂಡ್ಸ್ ಬಳಸುವುದನ್ನು ನಿಷೇಧಿಸಿರುವ ಆದೇಶ ಉಲ್ಲಂಘಿಸಿ ಡಿಜೆ ಬಳಕೆ ಮಾಡಿರುವ ಆರೋಪದ ಮೇಲೆ ಆಯೋಜಕರ ವಿರುದ್ಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್ಸ್ ಬಳಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಖಂಡಿಸಿ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ನಗರ ಪೊಲೀಸ್ ಠಾಣೆ ಮುಂದೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಶ್ರೀರಾಮ ಭಜನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದರು.
ಆ ವೇಳೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಪಾಂಡುರಂಗ ಅವರ ಸಮ್ಮುಖದಲ್ಲಿ ಶಾಸಕ ಧೀರಜ್ ಮುನಿರಾಜು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ‘ಡಿಜೆ ಬಳಸದೆ ಶೋಭಾಯಾತ್ರೆಯಲ್ಲಿ ಧ್ವನಿ ವರ್ಧಕಗಳನ್ನು ಮಾತ್ರ ಬಳಸಬೇಕು’ ಎಂದು ಸೂಚನೆ ನೀಡಿದ್ದರು ಎನ್ನಲಾಗಿದೆ.
ಅದರಂತೆಯೇ ಮಧ್ಯಾಹ್ನ 3 ಗಂಟೆಗೆ ಭಗತ್‌ಸಿಂಗ್ ಕ್ರೀಡಾಂಗಣದಿಂದ ಪ್ರಾರಂಭವಾದ ಶೋಭಾಯಾತ್ರೆಯಲ್ಲಿ ಶ್ರೀರಾಮ, ಶಿವ, ಆಂಜನೇಯ, ಇಮ್ಮಡಿ ಪುಲಿಕೇಶಿ, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ವಿವಿಧ ದೇವತೆಗಳ ಪ್ರತಿಮೆಗಳು ಮೆರವಣಿಗೆ ನಡೆಲಾಯಿತು. ವಿವಿಧ ಕಲಾತಂಡಗಳು ಭಾಗವಹಿಸಿದ್ದವು.
ಈ ಶೋಭಾಯಾತ್ರೆ ಡಿಜೆ ನಿಷೇಧ ಆದೇಶ ಉಲ್ಲಂಘಿಸಿ ಡಿಜೆ ಬಳಕೆ ಮಾಡಿರುವ ಆರೋಪದ ಮೇಲೆ ಕಾರ್ಯಕ್ರಮದ ಆಯೋಜಕರು, ಡಿಜೆ ವಾಹನ ಮಾಲೀಕರು ಹಾಗೂ ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿಜೆ ಬಳಸದಂತೆ ಮನವಿ ಮಾಡಿದ್ದ ಎಸ್ಪಿ
ದೊಡ್ಡಬಳ್ಳಾಪುರದಲ್ಲಿ ನಡೆದ ಶೋಭ ಯಾತ್ರೆಯಲ್ಲಿ (Shobha Yatre) ಡಿಜೆ ಹಾಗೂ ಇತರೆ ಹೆಚ್ಚಿನ ಶಬ್ದ ಬರುವಂತಹ ಯಾವುದೇ ಸಲಕರಣೆಗಳನ್ನು ಬಳಸದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶಿಸಿದ್ದು, ತಪ್ಪಿದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದರು.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದ ಅವರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ರಾಮನವಮಿಯ ಅಂಗವಾಗಿ ಬೃಹತ್ ಶೋಭ ಯಾತ್ರೆಯನ್ನು ಆಯೋಜಿಸುತ್ತಿರುವುದು ಸಂತಸ ಮತ್ತು ಶುಭದಾಯಕವಾದ ವಿಚಾರ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಶಾಂತಿ ಮತ್ತು ಕಾಪಾಡುವ ಸಲುವಾಗಿ ಡಿಜೆ ಅಥವಾ ಹೆಚ್ಚಿನ ಶಬ್ದ ಬರುವಂತಹ ಯಾವುದೇ ಸಲಕರಣೆಗಳನ್ನು ಈ ಬಾರಿ ನಿಷೇಧಿಸಲಾಗಿದೆ.
ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಅಂತಿಮ ಘಟ್ಟದಲ್ಲಿ ಇರುತ್ತವೆ. 8, 9ನೇ ತರಗತಿಯ ಹಾಗೂ ಪ್ರಥಮ ಪಿಯುಸಿ ಪರೀಕ್ಷೆಗಳು ಸಹ ಚಾಲ್ತಿಯಲ್ಲಿರುತ್ತವೆ. ಇದಲ್ಲದೆ 60 ವಯಸ್ಸಿನ ಮೇಲ್ಪಟ್ಟಂತಹ ಹಲವಾರು ವೃದ್ಧರು 18 ವರ್ಷದೊಳಗಿನ ಮಕ್ಕಳು ಸಾವಿರಾರು ಸಾವಿರಾರು ಸಂಖ್ಯೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಇರುತ್ತಾರೆ.
ಇಂತಹ ಸಂದರ್ಭದಲ್ಲಿ ಅವರುಗಳ ಆರೋಗ್ಯದ ದೃಷ್ಟಿಯಿಂದ ಹಾಗೂ 20 ರಿಂದ 25 ಸಾವಿರಕ್ಕೂ ಹೆಚ್ಚು ಜನಸಂದಣಿ ಯಾಗುವ ಈ ಕಾರ್ಯಕ್ರಮದಲ್ಲಿ ಕಾನೂನು ವ್ಯವಸ್ಥೆ ಪಾಲನೆಯಾಗುವ ದೃಷ್ಟಿಯಿಂದ ಡಿಜೆ ಮತ್ತು ಇತರೆ ಹೆಚ್ಚಿನ ಶಬ್ದ ಬರುವಂತಹ ಹೆಚ್ಚಿನ ಡಿಸಿಬಲ್ ಇರುವಂತಹ ಯಾವುದೇ ಸಲಕರಣೆಗಳನ್ನು ಕಾರ್ಯಕ್ರಮದಲ್ಲಿ ನಿಷೇಧಿಸಲಾಗಿದೆ.
ಇದರ ಬದಲಾಗಿ ಸಂಸ್ಕೃತಿ ಸಂಪ್ರದಾಯಗಳನ್ನು ಸಾರುವಂತಹ ಈ ಬೃಹತ್ ಕಾರ್ಯಕ್ರಮದಲ್ಲಿ ಚಂಡೆ, ಮದ್ದಳೆ, ತಮಟೆ, ತವಿಲ್ ವೀಣೆ. ಶಹನಾಯಿ, ನಗಾರಿ, ಸ್ಥಳೀಯ ಬ್ಯಾಂಡುಗಳಂತಹ ಯಾವುದೇ ಭಾರತೀಯ ಸಂಸ್ಕೃತಿಯನ್ನು ಹೆಚ್ಚಿಗೆ ಪ್ರತಿನಿಧಿಸುವಂತಹ ವಾದ್ಯಗಳನ್ನು ಬಳಸುವ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರೆಗನ್ನು ತರಲು ಕೋರಿದ್ದರು.
ಇದಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಜನಪ್ರತಿನಿಧಿಗಳು ವಿವಿಧ ಕನ್ನಡ ಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸಹಕರಿಸುವಂತೆ ಮನವಿ ಮಾಡಿದ್ದರು.
ಅಲ್ಲದೆ ಈ ಮನವಿಯನ್ನು ಕಟ್ಟುನಿಟ್ಟಿನ ಸೂಚನೆ ಎಂದು ತಿಳಿಯುವುದು. ಇದನ್ನು ಹೊರತುಪಡಿಸಿಯೂ ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದರು.