ದೆಹಲಿ: ಜನಪರ ಸಮಸ್ಯೆಗಳನ್ನು ರಾಜ್ಯಸಭೆಯಲ್ಲಿ ಪ್ರಶ್ನಿಸುವ ಮೂಲಕ ಮೋದಿ (Modi) ಸರ್ಕಾರದ ವಿರುದ್ದ ಗುಡುಗುತ್ತಿದ್ದ ಆಮ್ ಆದ್ಮಿ ಪಕ್ಷದ (APP) ಸಂಸದ ರಾಘವ್ ಚಡ್ಡಾ (Raghav Chadha) ಅವರ ರೆಕ್ಕೆ ಕತ್ತರಿಸುವ ಕೆಲಸವನ್ನು ತನ್ನದೇ ಪಕ್ಷ ಮಾಡಿದೆ.

ಹೌದು ಕೇವಲ 33ನೇ ವಯಸ್ಸಿಗೆ ರಾಜ್ಯಸಭೆ ಪ್ರವೇಶಿಸಿ ಸಂಸತ್ತಿನಲ್ಲಿ ಜನ ಪರವಾಗಿ ಘರ್ಜಿಸುತ್ತಿದ್ದ ರಾಘವ್ ಚಡ್ಡಾ, ಈಗ ರಾಜ್ಯ ಸಭೆಯಲ್ಲಿ ಮಾತನಾಡುವಂತಿಲ್ಲ.
ಆಮ್ ಆದ್ಮಿ ಪಾರ್ಟಿ ರಾಘವ್ ಚಡ್ಡಾ ಅವರನ್ನು ರಾಜ್ಯಸಭೆಯ ಪಕ್ಷದ ಉಪನಾಯಕ ಸ್ಥಾನದಿಂದ ದಿಢೀರ್ ಆಗಿ ಕೆಳಗಿಳಿಸಿದೆ. ಅಷ್ಟೇ ಅಲ್ಲ ಅವರಿಗೆ ಸದನದಲ್ಲಿ ಮಾತನಾಡಲು ಸಮಯವನ್ನೇ ನೀಡಬಾರದು ಎಂದು ಅಧಿಕೃತವಾಗಿ ಮನವಿ ಮಾಡಿದೆ. ಇದಕ್ಕೆ ಕಾರಣ ನಿಗೂಢವಾಗಿದೆ.
ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರವಾಲ್ ದೋಷಮುಕ್ತರಾದಾಗ ಅವರನ್ನು ಭೇಟಿ ಮಾಡಿ, ಚಡ್ಡಾ ಶುಭ ಹಾರೈಸಿಲ್ಲ ಎಂಬುದೇ ಈ ಸ್ಥಿತಿಗೆ ಕಾರಣ ಎನ್ನಲಾಗಿದೆ.
ಮೂಲಗಳ ಪ್ರಕಾರ, ರಾಘವ್ ಚಡ್ಡಾ ಅವರನ್ನು ಉಪನಾಯಕ ಸ್ಥಾನದಿಂದ ತೆಗೆದುಹಾಕಿರುವುದರ ಹಿಂದೆ ಪಕ್ಷದ ಸಂಸದೀಯ ಕಾರ್ಯತಂತ್ರದಲ್ಲಿ ದೊಡ್ಡ ಬದಲಾವಣೆಯ ಸೂಚನೆ ಇದೆ ಎನ್ನಲಾಗುತ್ತಿದೆ. ಅಲ್ಲದೆ ಮೋದಿ ಸರ್ಕಾರದ ವಿರುದ್ಧ ಪ್ರಶ್ನೆ ಮಾಡದಂತೆ ಮಾಡಲಾಗಿದೆ ಎಂಬ ಆಕ್ರೋಶ ನೆಟ್ಟಿಗರದ್ದಾಗಿದೆ.
ಟೆಲಿಕಾಂ ಸಂಸ್ಥೆಗಳ ಹಗಲು ದರೋಡೆ, ದಾರಿತಪ್ಪಿಸುತ್ತಿರುವ ದೊಡ್ಡ ದೊಡ್ಡ ಆಹಾರ ಬ್ರಾಂಡ್‌ಗಳ ಕರಾಳ ಸತ್ಯವನ್ನು ಬಯಲು ಮಾಡುವ ಮೂಲಕ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ (Raghav Chadha) ಗಮನ ಸೆಳೆದು ಜನರ ವಿಶ್ವಾಸ ಪಡೆದಿದ್ದಾರೆ.