ಚಾಮರಾಜನಗರ; ಶಾಲೆಯಲ್ಲಿ ಕುಸಿದುಬಿದ್ದು ಮೂರನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ (Heart attack) ಮೃತಪಟ್ಟಿರುವ ಆಘಾತಕಾರಿ ಘಟನೆ ಚಾಮರಾಜನಗರದ ಖಾಸಗಿ ಶಾಲೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದ ನಿವಾಸಿ ಲಿಂಗರಾಜು, ಶ್ರುತಿ ದಂಪತಿಯ ಪುತ್ರಿ ತೇಜಸ್ವಿನಿ ಮೃತ ದುರ್ದೈವಿ.
ಲಿಂಗರಾಜು, ಶ್ರುತಿ ದಂಪತಿಯ ಏಕೈಕ ಪುತ್ರಿ ತೇಜಸ್ವಿನಿ ಚಾಮರಾಜನಗರದ ಖಾಸಗಿ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಳು. ಇಂದು ಎಂದಿನಂತೆ ಶಾಲೆಗೆ ತೆರಳಿದ್ದಾಳೆ. ಆದರೆ, ತರಗತಿಯಲ್ಲಿ ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಕುಸಿದುಬಿದ್ದಿದ್ದಾಳೆ.
ಕೂಡಲೇ ತೇಜಸ್ವಿನಿಯನ್ನು ಶಾಲಾ ಸಿಬ್ಬಂದಿ ಜೆಎಸ್ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ದುರದೃಷ್ಟವಶಾತ್ ತೇಜಸ್ವಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.
ಇದ್ದ ಏಕೈಕ ಪುತ್ರಿಯನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ನೋಡುಗರ ದುಃಖ ಮಡುಗಟ್ಟಿದ್ದು, ಶಾಲೆಯಲ್ಲಿ ಶೋಕ ಆವರಿಸಿದೆ.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						