ಧಾರವಾಡ (Darawada); ಸುಮಾರು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಒಟ್ಟಿಗೆ ಸಂಸಾರ ನಡೆಸುತ್ತಿದ್ದ ಜೋಡಿ, ಒಟ್ಟಿಗೆ ಇಹಲೋಕ ತ್ಯಜಿಸಿರುವ ಅಪರೂಪದ ಘಟನೆ ಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ.
ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ 82 ವರ್ಷ ಈಶ್ವರ ಆರೇರ ಹಾಗೂ ಅವರ ಪತ್ನಿ 73 ವರ್ಷದ ಪಾರವ್ವಾ ಆರೇರ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಭಾನುವಾರ ಮನೆಯವರ ಜೊತೆ ಸಂತೋಷದಿಂದ ಊಟ ಮಾಡಿದ್ದರಂತೆ. ಊಟದ ಬಳಿಕ ಕೆಲ ಕಾಲ ಮಾತುಕತೆ ನಡೆಸಿ ಮಲಗಿದ್ದಾರೆ.
ಪ್ರತಿದಿನ ಸೂರ್ಯ ಹುಟ್ಟುವ ಮುನ್ನವೇ ದಿನಚರಿ ಆರಂಭಿಸುತ್ತಿದ್ದ ದಂಪತಿಗಳು ಇಂದು ಸೂರ್ಯ ಹುಟ್ಟಿ ಕೆಲ ಕಾಲ ಕಳೆದರು ಕೂಡ ಎದ್ದಿಲ್ಲದಿರುವುದನ್ನು ಗಮನಿಸಿ ನೋಡಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಕಳೆದ ಕೆಲ ತಿಂಗಳಿಂದ ಪಾರವ್ವಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಪತಿ ಈಶ್ವರ ಸದಾ ಪತ್ನಿಯ ಜೊತೆಗೆ ಇದ್ದು ಕಾಲ ಕಳೆಯುತ್ತಿದ್ದರಂತೆ.
ಇದೀಗ ಇಬ್ಬರು ಕೂಡ ಇಹಲೋಕ ತ್ಯಜಿಸಿದ್ದು ಕುಟುಂಬಸ್ಥರು ಅಷ್ಟೇ ಅಲ್ಲದೆ ಇಡೀ ಗ್ರಾಮವೇ ದುಃಖದಿಂದ ಕೂಡಿದೆ.
ಆರೇರಾ ದಂಪತಿಗಳಿಗೆ ನಾಲ್ವರು ಪುತ್ರಿಯರು ಹಾಗೂ 12 ಜನ ಮೊಮ್ಮಕ್ಕಳು ಸೇರಿ ದೊಡ್ಡ ಬಂಧು ಬಳಗವನ್ನು ಹೊಂದಿದ್ದಾರೆ.
ದಂಪತಿಗಳ ಸಾವಿನ ಸುದ್ದಿ ಕೇಳಿ ಎಲ್ಲರೂ ಓಡೋಡಿ ಬಂದಿದ್ದಾರೆ. ಅಲ್ಲದೇ ಇಂದು ಸಂಜೆ ದಂಪತಿಗಳ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.