ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 25-26 ರ ಬಜೆಟ್ ಜನರ ಮೇಲೆ ಆರ್ಥಿಕ ಹೊರೆಯನ್ನು ಹೇರಿರುವ ಜನ ವಿರೋಧಿ ನಿರಾಶಾದಾಯಕ ಬಜೆಟ್ ಎಂದು ದೊಡ್ಡಬಳ್ಳಾಪುರ ತಾಲೂಕು ಬಿಜೆಪಿ ಅಧ್ಯಕ್ಷ ನಾಗೇಶ್ ಆರೋಪಿಸಿದ್ದಾರೆ.
ರಾಜ್ಯ ಬಜೆಟ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಕಳೆದ ವರ್ಷ ಬಜೆಟ್ ನಲ್ಲಿ ಹೇಳಿರುವುದಕ್ಕೂ ಮಾಡಿರುವುದಕ್ಕೂ ಬಹಳ ವ್ಯತ್ಯಾಸ ಇದೆ.
ನೀರಾವರಿ, ಗ್ರಾಮೀಣ ಅಭಿವೃದ್ಧಿ, ಕೃಷಿಗೆ ವಿಶೇಷವಾಗಿರುವ ಯಾವುದೇ ಅನುದಾನ ನೀಡದಿರುವುದು ರೈತಾಪಿ ವರ್ಗಕ್ಕೆ ನಿರಾಶಾದಾಯಕವಾಗಿದೆ. ಇದೊಂದು ರೈತ ವಿರೋಧಿ ಬಜೆಟ್ ಆಗಿದೆ.
ಚುನಾವಣೆ ದೃಷ್ಟಿಯಿಂದ ಓಲೈಕೆಗಾಗಿ ಘೋಷಣೆಗಳನ್ನು ಮಾಡಿರುವುದು ಬಿಟ್ಟರೆ ಜನಪರವಾಗಿ ಯಾವುದೇ ನಿರ್ಣಯವನ್ನು ರಾಜ್ಯ ಸರ್ಕಾರ ಈ ಬಜೆಟ್ನಲ್ಲಿ ಮಾಡಿಲ್ಲ.
ಎತ್ತಿನಹೊಳೆ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ. ಆದರೆ ಹಣ ಎಷ್ಟು ನಿಗದಿ ಮಾಡಿದ್ದಾರೆ ಎಂದು ಹೇಳಿಲ್ಲ.
ಕಳೆದ ಬಜೆಟ್ನಲ್ಲಿ ಕೂಡ ಯಾವುದೇ ತೆರಿಗೆ ಘೋಷಣೆ ಮಾಡಿರಲಿಲ್ಲ. ಬಳಿಕ ತೆರಿಗೆಗಳನ್ನು ಹೆಚ್ಚಿಸಲಾಯಿತು. ಈ ಬಾರಿಯೂ ಬಜೆಟ್ ನಂತರ ತೆರಿಗೆ ಏರಿಕೆ ಮಾಡಲಾಗುತ್ತದೆ ಎಂದು ನಾಗೇಶ್ ಆತಂಕ ವ್ಯಕ್ತಪಡಿಸಿದ್ದಾರೆ.