ವಿಜಯಪುರ: ರಾಷ್ಟ್ರಪಿತ ಮಹಾತ್ಮಗಾಂಧೀಜಿ ಯವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ವಿರುದ್ಧ ನಗರದ ಆದರ್ಶ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್ ಐಆರ್ ದಾಖಲಾಗಿದೆ.
ಇಲ್ಲಿನ ಇಬ್ರಾಹಿಂ ರೋಜಾ ಪ್ರದೇಶದ ವ್ಯಾಪಾರಿ ಅಲ್ಲಾಭಕ್ಷ ಡೋಗರಿಸಾಬ ಬಡೇಘರ್ ಎಂಬುವರು ನೀಡಿದ ದೂರಿನ ಮೇರೆಗೆ ಪೊಲೀಸರು ಯತ್ನಾಳ್ ವಿರುದ್ದ ಕೇಸ್ ದಾಖಲಿಸಿಕೊಂಡಿದ್ದಾರೆ.
ಮೇ 12ರಂದು ಆದರ್ಶ ನಗರದಲ್ಲಿ ಬಸವೇಶ್ವರ ದೇವಸ್ಥಾನದ ಗುದ್ದಲಿ ಪೂಜೆಗೆ ಬಂದಂತಹ ಸಂದರ್ಭದಲ್ಲಿ ಮಾತನಾಡುತ್ತಾ ಶಾಸಕ ಯತ್ನಾಳ್, ಮಹಾತ್ಮ ಗಾಂಧಿ ಹುಟ್ಟಿಸಿದ ಕೂಸೇ ಪಾಕಿಸ್ತಾನ. ಗಾಂಧಿ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ ಮತ್ತು ಗಾಂಧಿ ದೇಶ ಒಡೆದವರು ಎಂಬಂತಹ ಆಧಾರ ರಹಿತ ಆರೋಪಗಳನ್ನು ಮಾಡಿ ರಾಷ್ಟ್ರ ನಾಯಕರಿಗೆ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೇ, ಗಾಂಧಿಯವರ ಬಗ್ಗೆ ಯತ್ನಾಳ್ ಏಕವಚನದಲ್ಲಿ ಸಂಭೋದಿಸಿ, ಗಾಂಧಿ ಮುಸಲ್ಮಾನರಿಗೆ ಪಾಕಿಸ್ತಾನ ಮಾಡಿಕೊಟ್ಟ, ನಮ್ಮ ದೇಶದ ಒಡೆದವರ ಮೂರ್ತಿಯನ್ನು ಬೀದಿ-ಬೀದಿಗಳಲ್ಲಿ ಸ್ಥಾಪನೆ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.
ಈ ಮೂಲಕ ಬಸನಗೌಡ ಪಾಟೀಲ್ ತನ್ನ ಹಳೆಯ ಚಾಳಿಯಂತೆ ಸಮಾಜ ಒಡೆಯುವ ಹಾಗೂ ಸಮಾಜದಲ್ಲಿ ದಂಗೆ ಎಬ್ಬಿಸುವ ಉದ್ದೇಶ, ಜಾತಿ-ಜಾತಿಯಲ್ಲಿ ವೈಮನಸ್ಸು ಹಾಗೂ ಅಶಾಂತಿ ಹುಟ್ಟಿಸುವ ಉದ್ದೇಶದಿಂದ ಮಹಾತ್ಮಾ ಗಾಂಧಿಯವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.