ಬೆಂಗಳೂರು: ಪಾಕಿಸ್ತಾನದ ಉಗ್ರರ ದಾಳಿ ಹಿನ್ನಲೆ ನಡೆದ ಆಪರೇಷನ್ ಸಿಂಧೂರ (Operation Sindoora) ಕಾರ್ಯಾಚರಣೆಯನ್ನು ಕೇಂದ್ರ ಸರ್ಕಾರ ಏಕಾಏಕಿ ಕದನ ವಿರಾಮದ (Ceasefire) ಘೋಷಿಸಿರುವ ಬಗ್ಗೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ತೀವ್ರವಾದ ಮಾತಿನ ಸಮರ ನಡೆಯುತ್ತಿದೆ.
ಇದೇ ವಿಚಾರವಾಗಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಸಚಿವ ಸಂತೋಷ್ ಲಾಡ್ (Santosh lad), ಕದನ ವಿರಾಮದ ಕುರಿತು ಭಾರತೀಯರಲ್ಲಿನ ಅಸಮಾಧಾನ, ಟ್ರಂಪ್ ಮಧ್ಯಸ್ಥಿಕೆ ಸೇರಿದಂತೆ ಅಗತ್ಯ, ಅನಿವಾರ್ಯತೆ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಪ್ರಧಾನಿ ಮೋದಿ (Pm Modi) ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದರು.
ಇದಕ್ಕೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಟ್ವಿಟ್ ಮಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಚಾರಗಳ ಕುರಿತು ಭಾರತದ ಸಿರಿ ಕಿರೀಟ ಕಾಶ್ಮೀರವನ್ನು ಅಸ್ಥಿರಗೊಳಿಸಿದ್ದು ಯಾರು?
ರಕ್ಷಣೆ ಇಲ್ಲದ ಅಸಹಾಯಕ ಪರಿಸ್ಥಿತಿಯಲ್ಲಿ ಲಕ್ಷಾಂತರ ಮೂಲ ನಿವಾಸಿ ಕಾಶ್ಮೀರಿ ಪಂಡಿತರ ಕುಟುಂಬಗಳು ಕೊಲೆ, ಅತ್ಯಾಚಾರದ ದೌರ್ಜನ್ಯಗಳನ್ನು ಅನುಭವಿಸಿ ಕಾಶ್ಮೀರ ತೊರೆಯುವಂತಾಗಲು ಕಾರಣರಾದವರಾರು?
ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಬಿಟ್ಟುಕೊಟ್ಟವರಾರು? ಅವಕಾಶವಿದ್ದರೂ POK ಆಕ್ರಮಿಸಿಕೊಳ್ಳದೇ ಕೈಚೆಲ್ಲಿದವರಾರು? ಕಾಂಗ್ರೆಸ್ ಹಾಗೂ ಅದರ ಸ್ವಾರ್ಥ ಆಡಳಿತ ಇದಕ್ಕೆಲ್ಲ ಕಾರಣ ಎನ್ನುವುದು ದೇಶದ ಜನತೆಗೆ, ಜಗತ್ತಿಗೇ ತಿಳಿದ ಸತ್ಯ ಎಂದು ಹರಿಹಾಯ್ದಿದ್ದರು.
ಮತ್ತೆ ಈ ಟ್ವಿಟ್ಗೆ ಪ್ರತಿ ಟ್ವಿಟ್ ಮಾಡಿರುವ ಸಚಿವ ಸಂತೋಷ್ ಲಾಡ್, ಭಾರತದ ಸಿರಿ ಕಿರೀಟ ಕಾಶ್ಮೀರದ ಪೆಹೆಲ್ಗಾಮ್ ನ ಬೈಸನ್ ವ್ಯಾಲಿಯಲ್ಲಿ ಸರಿಯಾದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ ಬೇಜವಾಬ್ದಾರಿ ಮೆರೆದವರು ಯಾರು?
ಕಾಶ್ಮೀರಿ ಪಂಡಿತರ ಮೇಲಾದ ದೌರ್ಜನ್ಯಗಳನ್ನು ಕೇವಲ ಚುನಾವಣಾ ಪ್ರಚಾರದ ಸರಕಾಗಿಸಿಕೊಂಡು ಅವರ ಭಾವನೆಗಳೊಂದಿಗೆ ಆಟವಾಡುತ್ತಿರುವವರು ಯಾರು?
ಪಾಕ್ ಆಕ್ರಮಿತ ಕಾಶ್ಮೀರವನ್ನು ಪುನಃ ಪಡೆದುಕೊಳ್ಳುವ ಅವಕಾಶವಿದ್ದಾಗಲೂ ಕೈಚೆಲ್ಲಿದ ಮಹಾನುಭಾವ ಯಾರು ಎಂಬುದು ಇಡೀ ದೇಶ ಹಾಗೂ ಜಗತ್ತಿಗೇ ಬಟಾಬಯಲಾದ ಸತ್ಯ.
ಪ್ರಜಾಪ್ರಭುತ್ವದಲ್ಲಿ ಕುಟುಂಬ ರಾಜಕಾರಣದ ವಿರೋಧಿ ಎಂದು ಬಿಂಬಿಸುವ ರೀತಿಯಲ್ಲಿ ಮೆರೆದ ತಾವು ಇಂದಿಗೂ ನಿಮ್ಮ ತಂದೆಯ ಹೆಸರಿಲ್ಲದೇ ಚಲಾವಣೆಯಾಗದ ನಾಣ್ಯ ಎಂಬ ಸತ್ಯ ನಮಗಿಂತ ನಿಮ್ಮದೇ ಅಧ್ಯಕ್ಷಗಿರಿ ಸಹಿಸುತ್ತಿರುವ ಬಿಜೆಪಿ ಕರ್ನಾಟಕ ನಿರಾಶ್ರಿತರಿಗೆ ಚೆನ್ನಾಗಿ ಗೊತ್ತಿದೆ.
ಭಾರತದ ಸಾರ್ವಭೌಮತೆಯ ಪ್ರಶ್ನೆ ಬಂದಾಗೆಲ್ಲ ನಾವು ಹಾಗೂ ನಮ್ಮ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಜೊತೆ ಗಟ್ಟಿಯಾಗಿ ನಿಲ್ಲುತ್ತಲೇ ಬಂದಿದ್ದೇವೆ. ಈ ವಿಷಯದಲ್ಲಿ ನಮ್ಮ ದೇಶದ ವೀರ ಯೋಧೆ ಸೋಫಿಯಾ ಖುರೇಷಿಯವರನ್ನು ಪಾಪಿ ಪಾಕಿಸ್ತಾನಿಗಳೊಂದಿಗೆ ಹೋಲಿಸಿ, ವಿಕೃತವಾಗಿ ಉಡಾಫೆ ಮಾತಾಡುವ ನಿಮ್ಮ ಬಿಜೆಪಿ ಪಕ್ಷದವರಿಂದ ಕಲಿಯುವಂತಹ ಯಾವ ಹರಕತ್ತು ನಮ್ಮ ಕಾಂಗ್ರೆಸ್ ಪಕ್ಷಕ್ಕಿಲ್ಲ.
ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕುವ ಎಲ್ಲ ಶಕ್ತಿ ನಮ್ಮ ರಕ್ಷಣಾ ಪಡೆಗಳಿಗಿದ್ದರೂ ಸಹ ಯಾರದೋ ಅಪ್ಪಣೆಗೆ ತಲೆಬಾಗಿ ಶರಣಾದದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಶತಕೋಟಿ ಭಾರತೀಯರೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳುತ್ತಿದ್ದಾರೆ.
ದೇಶದ ಜನರ ಭಾವನೆಗಳಿಗೆ ವಿರುದ್ಧವಾಗಿ, ನಮ್ಮ ಅಮಾಯಕ ಸಹೋದರಿಯರ ಸಿಂಧೂರ ಅಳಿಸಿದ ಪಾಪಿಗಳನ್ನು ನಿರ್ಮೂಲನೆ ಮಾಡುವುದನ್ನು ಬಿಟ್ಟು ಕದನವಿರಾಮ ಘೋಷಿಸಿದ್ದನ್ನು ಸಹ ನಿಮ್ಮಂತಹ ಅಪ್ಪನ ಹೆಸರನ್ನು ಟ್ರಂಪ್ ಕಾರ್ಡ್ ಮಾಡಿಕೊಂಡು ಬದುಕುತ್ತಿರುವವರೆಲ್ಲ ಬಹುಪರಾಕ್ ಹೇಳಿಕೊಂಡು ತಿರುಗುತ್ತಿರುವುದನ್ನು ನೋಡಿದರೆ ಭಾರತೀಯರು ನಿಮಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂಬುದನ್ನು ಮೇಲಿನವರನ್ನು ಮೆಚ್ಚಿಸಲು ಒಟಗುಟ್ಟುವುದನ್ನು ಬಿಟ್ಟು ಅರ್ಥ ಮಾಡಿಕೊಳ್ಳುವುದು ಒಳಿತು.
ಕೊನೆಗೊಂದು ಮಾತು, ಆಪರೇಶನ್ ಸಿಂಧೂರದ ಹೆಸರಲ್ಲಿ ರೀಲ್ಸ್ ಶೋಕಿ ಮಾಡುತ್ತ, ಇಂತಹ ಸೂಕ್ಷ್ಮ ವಿಚಾರವನ್ನು ಸಹ ಚುನಾವಣೆ ಸರಕಾಗಿ ಬಳಸಿಕೊಳ್ಳುವ ನಿಮ್ಮ ಪಕ್ಷದ ನಾಚಿಕೆಗೇಡಿತನಕ್ಕೆ ನಿಮ್ಮ ಪಕ್ಷವೇ ಸಾಟಿ ಬಿಡಿ! ಎಂದಿದ್ದಾರೆ.