ಬೆಂ.ಗ್ರಾ.ಜಿಲ್ಲೆ: ರಾಜ್ಯದ ದಕ್ಷಿಣ ಭಾಗದಲ್ಲಿ ಮುಂದಿನ 3 ದಿನಗಳ ಕಾಲ (ಮೇ 20 ರಿಂದ 23 ವರೆಗೆ) ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ (Rain) ಸಾಧ್ಯತೆಯಿದೆಯೆಂದು ಭಾರತೀಯ ಹವಾಮಾನ ಇಲಾಖೆ / ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚಿಸಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.
ಕೃಷಿಕರು ಮಳೆ/ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ದೂರವಿರುವುದು ಸಾರ್ವಜನಿಕರು/ಮಕ್ಕಳು/ಕಾರ್ಮಿಕರು ಸಿಡಿಲು ಬಡಿಯುವ ಸಂದರ್ಭದಲ್ಲಿ ಹೊರಗೆ ತಿರುಗಾಡದೆ, ಸೂಕ್ತ ಕಟ್ಟಡದಲ್ಲಿ ಆಶ್ರಯ ಪಡೆಯುವುದು.
ಈ ಸಂದರ್ಭದಲ್ಲಿ ಮಕ್ಕಳು/ಸಾರ್ವಜನಿಕರು ಅಪಾಯಕಾರಿ ಮರ/ವಿದ್ಯುತ್ಕಂಬದ ಹತ್ತಿರ ಸುಳಿಯಬಾರದು ಮತ್ತು ತುಂಡಾದ ವಿದ್ಯುತ್ ತಂತಿಗಳಿಂದ ದೂರವಿರುವುದು. ದುರ್ಬಲವಾದ / ಹಳೆಯ ಕಟ್ಟಡ ಅಥವಾ ಮರಗಳ ಹತ್ತಿರ / ಮರಗಳ ಕೆಳಗೆ ನಿಲ್ಲಬಾರದು.
ಮೇಲಿನ ಅಂಶಗಳನ್ನು ಗುಡುಗು ಸಿಡಿಲು/ ಮಳೆ ಗಾಳಿಯಂತಹ ಸಂದರ್ಭಗಳಲ್ಲಿ ಚಾಚು ತಪ್ಪದೇ ಕಡ್ಡಾಯವಾಗಿ ಪಾಲಿಸಿ.
ಸಾರ್ವಜನಿಕರು ಅಗತ್ಯವಿದ್ದಲ್ಲಿ ಮುಂಜಾಗೃತ ಕ್ರಮವಾಗಿ ಹತ್ತಿರದ ಕಾಳಜಿ ಕೇಂದ್ರದಲ್ಲಿ ಉಳಿಯಬಹುದು.
ಹೆಚ್ಚಿನ ಮಾಹಿತಿಗಾಗಿ ವಿಪತ್ತು ನಿರ್ವಹಣಾ ಕಂಟ್ರೋಲ್ ರೂಂ ಸಂಖ್ಯೆ 1077 ಅಥವಾ ಜಿಲ್ಲಾ ಸಹಾಯವಾಣಿ ಸಂಖ್ಯೆ- 080-28388005 ಕರೆ ಮಾಡಿ. ಅಥವಾ ಆಯಾ ತಾಲ್ಲೂಕು ತಹಶೀಲ್ದಾರರ ಕಛೇರಿಗೆ ಕರೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.