ದೊಡ್ಡಬಳ್ಳಾಪುರ: ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಾರಿಯಾದ (Hit And Run) ಪರಿಣಾಮ (Accident) ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಇಂದು ಸಂಜೆ ಹೊಸಹಳ್ಳಿ ಮೂಲಕ ದೊಡ್ಡಬಳ್ಳಾಪುರಕ್ಕೆ ತೆರಳುತ್ತಿದ್ದ ಕಾರು ಖಾಸಗಿ ವ್ಯಾಲಿ ಸಮೀಪ ದೊಡ್ಡಬಳ್ಳಾಪುರದಿಂದ ಹೊಸಹಳ್ಳಿ ಮಾರ್ಗವಾಗಿ ಬರುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಈ ಘಟನೆಯಲ್ಲಿ ದೊಡ್ಡಮಲ್ಲೇಕೆರೆ ನಿವಾಸಿ ಹರೀಶ್ (28 ವರ್ಷ) ಎನ್ನುವವರಿಗೆ ತೀವ್ರ ಗಾಯಗಳಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದೆ.
ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಟೈರ್ ಪಂಚರ್ ಆದ್ರೂ ರಸ್ತೆ ಬದಲಿಸಿ ಪರಾರಿಯಾಗುತ್ತಿದ್ದ ಕಾರಿನ ಬಗ್ಗೆ ಅನುಮಾನಗೊಂಡ ನಾಗಶೆಟ್ಟಿಹಳ್ಳಿ ಗ್ರಾಮದ ಯುವಕರು ಬೆನ್ನತ್ತಿದ್ದಾರೆ. ಈ ವೇಳೆ ಕಾರಿನ ಚಾಲಕ ಪರಾರಿಯಾಗಿದ್ದಾನೆ.
ಈ ಕುರಿತು ಪೊಲೀಸರಿಗೆ ಯುವಕರು ಮಾಹಿತಿ ನೀಡಿದ್ದು, ಹೊಸಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ.