ಬೆಂ.ಗ್ರಾ.ಜಿಲ್ಲೆ: ಜಿಲ್ಲಾ ಮಟ್ಟದ 11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು (International Yoga Day) ಜೂನ್ 21 ರಂದು ದೇವನಹಳ್ಳಿ ಟೌನ್ ನಲ್ಲಿರುವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು (AB Basavaraju) ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ “11 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುವ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುವುದು.
ಆ ದಿನ ಬೆಳಗ್ಗೆ 7:00 ಗಂಟೆಯಿಂದ 7:45 ಗಂಟೆಯ ವರೆಗೆ ಯೋಗಾಭ್ಯಾಸ ನಡೆಯಲಿದೆ.
ಶಿಷ್ಟಾಚಾರದಂತೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮುದ್ರಿಸಿ, ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಕ್ರೀಡಾಂಗಣದ ಸ್ವಚ್ಛತೆ,ಕುಡಿಯುವ ನೀರು, ಲಘು ಉಪಹಾರದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಅಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಸಿದ್ಧತೆ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರನ್ನು ಒಳಗೊಂಡ ಯೋಗಾಭ್ಯಾಸ ನಡೆಯಲಿದೆ. ಜೊತೆಗೆ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಶಾಲಾ-ಕಾಲೇಜುಗಳು, ಹಾಸ್ಟೆಲ್ ಗಳಲ್ಲಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯಾ ಇಲಾಖೆಯ ಅಧಿಕಾರಿಗಳು ಕ್ರಮವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಆಯೋಜಕರಿಗೆ ಸೂಚಿಸಿದರು.
ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು,ಸಂಘ ಸಂಸ್ಥೆಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಶುಹಬುದ್ದೀನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಲಕ್ಕಾ ಕೃಷ್ಣಾ ರೆಡ್ಡಿ , ಅಯುಷ್ ಇಲಾಖೆಯ ಮುಖ್ಯ ವೈದ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
 
				 
															 
						 
						 
						 
						 
						 
						 
						 
						 
						 
						 
						 
						 
						 
						 
						 
						 
						 
					 
						 
						 
						 
						 
					 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
					 
						 
						 
						 
						 
						 
						 
						 
						 
						 
						 
						 
						 
					 
					 
					 
					 
					 
					 
					 
						 
						 
						 
						