ದೊಡ್ಡಬಳ್ಳಾಪುರ: ಇತ್ತೀಚೆಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಮುಗಿದಿದೆ. ಅಂದು ಒಂದು ದಿನ ಯೋಗ ಮಾಡಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್ ಮಾಡಿ ಮರೆತವರೇ ಹೆಚ್ಚು. ಆದರೆ ದೊಡ್ಡಬಳ್ಳಾಪುರ ಪೊಲೀಸರು ಇದಕ್ಕೆ ಅಪವಾದ..! ಏಕೆಂದರೆ ಅವರು ಯೋಗವನ್ನು ದೈನಂದಿನ ಭಾಗವಾಗಿಸಿಕೊಳ್ಳಲು ಮುಂದಾಗಿದ್ದಾರೆ.
ಹೌದು ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ ಹಾಗೂ ಮಹಿಳಾ ಪೊಲೀಸ್ ಠಾಣೆ ವತಿಯಿಂದ ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಡಾ.ಚಂದ್ರಶೇಖರ್ ಹಾಗೂ ಪುತ್ರಿ ಇಂದಿರಾ ಮತ್ತು ರೋಹಿತ್ ಅವರು ಯೋಗ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್ ಡಾ.ನವೀನ್ ಕುಮಾರ್ ಎಂ ಬಿ., ಯೋಗ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ಮೈಗೂಡಿಸಿಕೊಂಡಲ್ಲಿ ಉತ್ತಮ ಆರೋಗ್ಯ ಸಾಧ್ಯ ಎಂದರು.
ಇದೇ ವೇಳೆ ಕೆಲವರು ಕತ್ತೆಯನ್ನು ನೋಡುವ ಯೋಗ ಬರುತ್ತದೆ ಎನ್ನುತ್ತಾರೆ, ಕೆಲವರು ನರಿಯನ್ನು ನೋಡುವ ಯೋಗ ಬರುತ್ತದೆ ಎನ್ನುತ್ತಾರೆ. ಆದರೆ ವಾಸ್ತವವಾಗಿ ಯೋಗ ಮಾಡಿ ಯೋಗ ಬರುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ, ಸಬ್ ಇನ್ಸ್ಪೆಕ್ಟರ ಶುಭ ಚಂದ್ರಕಲಾ, ಕೃಷ್ಣಪ್ಪ ಮತ್ತು ಉಳಿದಂತೆ ನೂರು ಜನ ಸಿಬ್ಬಂದಿಗಳು ಯೋಗಾಭ್ಯಾಸ ತರಬೇತಿಯಲ್ಲಿ ಭಾಗವಹಿಸಿದ್ದರು.