ದೊಡ್ಡಬಳ್ಳಾಪುರ: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ 132 ಮಂದಿ ಶಿಕ್ಷಕರ (Teachers) ಹುದ್ದೆ ಖಾಲಿಯಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮೇಲೆ ತೀವ್ರತರವಾದ ಆತಂಕ ಎದುರಾಗಿರುವುದರಿಂದ ಬೇಸತ್ತ ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಪೋಷಕರು ಶಾಲಾ ಮಕ್ಕಳೊಂದಿಗೆ ಪ್ರತಿಭಟನೆಯ ಹಾದಿ ತುಳಿದಿದ್ದಾರೆ.
ಹೌದು ದೊಡ್ಡಬಳ್ಳಾಪುರ ತಾಲೂಕಿನ ಐಯ್ಯನಹಳ್ಳಿ ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ಸರಿಯಾಗಿ ಶಾಲೆಗೆ ಶಿಕ್ಷಕರು ಬರುತ್ತಿರಲಿಲ್ಲ ಹಾಗೂ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಶಾಲಾ ಮಕ್ಕಳೊಂದಿಗೆ ಎಸ್‌ಟಿಎಂಸಿ ಆಡಳಿತ ಮಂಡಳಿ, ಪೋಷಕರು ಹಾಗೂ ಗ್ರಾಪಂ ಸದಸ್ಯರು, KRS ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 132, ಪ್ರೌಢಶಾಲೆಗಳಲ್ಲಿ 40 ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದ್ದು, ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಪಾಠ ಮಾಡಿಸಲಾಗುತ್ತಿದೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತೊಂದೆಡೆ ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ಕರ್ತವ್ಯ ನಿರ್ವಹಿಸಬೇಕಾದ ಕೆಲ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹಾಜರಾಗದ ಕಾರಣ ಮಕ್ಕಳನ್ನು ಹೇಳುವವರು ಕೇಳುವರು ಇಲ್ಲವಾಗಿದೆ.
ಈ ಕುರಿತು ಹಿರಿಯ ಅಧಿಕಾರಿಗಳು ಪ್ರಶ್ನಿಸಿದರೆ, ಶಿಕ್ಷಕರ ಸಂಘದ ಪ್ರಮುಖರಿಂದ ಒತ್ತಡ ಹೇರಿಸುವ ತಂತ್ರ ಬಳಸುತ್ತಿದ್ದಾರೆ.
ಇದರ ನಡುವೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಸರ್ಕಾರಿ ಶಿಕ್ಷಕರನ್ನು ಶಾಲಾ ಅವಧಿಯಲ್ಲಿ ಅನಗತ್ಯ ಕಾರ್ಯಗಳಿಗೆ ಬಳಸಿಕೊಳ್ಳದಂತೆ, ಕರ್ತವ್ಯ ಲೋಪವಾಗದಂತೆ ಆದೇಶಿಸಿದೆ. ಆದಾಗ್ಯೂ ನೂತನವಾಗಿ ವರ್ಗಾವಣೆಯಾಗಿ ಬಿಇಒ ಶಂಕರಯ್ಯ ಅವರ ಅಭಿನಂದನೆ ಸಲ್ಲಿಸಲು ಶಿಕ್ಷಕರು ಶಾಲಾ ಅವಧಿಯಲ್ಲಿಯೇ ತೆರಳಿದ್ದಾರೆ ಎಂಬ ಆರೋಪ ವ್ಯಕ್ತವಾಗಿದ್ದು, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.