ದೊಡ್ಡಬಳ್ಳಾಪುರ: ಯಾವುದೇ ನೋವು ನಿವಾರಕ ಔಷಧಿ, ಮಾತ್ರೆಗಳನ್ನು (Medicines and pills) ವೈಧ್ಯರ ಅಧಿಕೃತ ಸಲಹಾ ಚೀಟಿ ಇಲ್ಲದೆ ಗ್ರಾಹಕರಿಗೆ ನೀಡುವಂತಿಲ್ಲ. ಎಲ್ಲಾ ರೀತಿಯ ನೋವು ನಿವಾರಕ ಔಷಧಿಗಳು ಮಾದಕದ್ರವ್ಯ ನಿಷೇಧ ಕಾಯ್ದೆ ವ್ಯಾಪ್ತಿಗೆ ಬರಲಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಔಷಧ ನಿಯಂತ್ರಣ ಸಹಾಯಕ ನಿರ್ದೇಶಕ ಸಿ.ಗಣೇಶಬಾಬು (C. Ganeshbabu) ಹೇಳಿದರು.
ಅವರು ನಗರದಲ್ಲಿ ನಡೆದ ತಾಲ್ಲೂಕಿನ ಔಷಧಿ ವ್ಯಾಪಾರಿಗಳ ಕ್ಷೇಮಾಭವೃದ್ದಿ ಸಂಘದ ವಾರ್ಷಿಕ ಮಹಾ ಸಭೆ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ನೋವು ನಿವಾರಕ ಮಾತ್ರೆ,ಔಷಧಿಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಮಾದಕ ಧ್ರವ್ಯದಷ್ಟೇ ಪರಿಣಾಮವನ್ನು ದೇಹದ ಮೇಲೆ ಬೀರಲಿದೆ. ಹಾಗಾಗಿ ಔಷಧ ಮಾರಾಟಗಾರರು ಯಾವುದೇ ಔಷಧಿ,ಮಾತ್ರೆಗಳನ್ನು ಕೊಡುವಾಗ ಕಡ್ಡಾಯವಾಗಿ ವೈದ್ಯರ ಚೀಟಿಯನ್ನು ನೋಡಿಯೇ ನೀಡಬೇಕು. ಹಾಗೆಯೇ ಹಳೇಯ ದಿನಾಂಕ ಇರುವ ಔಷಧಿ ಚೀಟಿಗಳನ್ನು ಸಹ ಮಾನ್ಯ ಮಾಡುವಂತಿಲ್ಲ ಎಂದರು.
ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಡೆದ ಭ್ರೂಣಹತ್ಯೆ ಪ್ರಕರಣಗಳ ನಂತರ ಗರ್ಭಪಾತದ ಮಾತ್ರೆಗಳನ್ನು ಔಷಧಿ ಅಂಗಡಿಗಳಲ್ಲಿ ಮಾರಾಟ ಮಾಡುವುದಕ್ಕೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.
ಗರ್ಭಪಾತದ ಮಾತ್ರೆಗಳನ್ನು ಗ್ರಾಹಕರಿಗೆ ನೀಡುವಾಗ ಕಡ್ಡಾಯವಾಗಿ ವೈದ್ಯರು ಬರೆದುಕೊಡುವ ಚೀಟಿ, ದಿನಾಂಕ ಹಾಗೂ ವೈದ್ಯರ ಕರ್ನಾಟಕ ಮೆಡಿಕಲ್ ಕೌನ್ಸಿಲ್ ಸದಸ್ಯತ್ವ ಸಂಖ್ಯೆಯನ್ನು ಒಳಗೊಂಡ ಶಿಪಾರಸ್ಸು ಪತ್ರವನ್ನು ಪಡೆದುಕೊಂಡೇ ನೀಡಬೇಕು. ಹಾಗೆಯೇ ಗ್ರಾಹಕರ ಮೊಬೈಲ್ ಸಂಖ್ಯೆಯನ್ನು ಪಡೆಯಬೇಕು.
ಈ ನಿಯಮಗಳನ್ನು ಪಾಲಿಸದೇ ಇದ್ದರೆ ಔಷಧಿ ಮಾರಾಟ ಮಳಿಗೆಯ ಪರವಾನಿಗಿ ರದ್ದುಗೊಳಿಸುವುದಲ್ಲದೆ, ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದರು.
ವಾರ್ಷಿಕ ಸರ್ವ ಸದಸ್ಯ ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕಿನ ಔಷಧಿ ವ್ಯಾಪಾರಿಗಳ ಕ್ಷೇಮಾಭವೃದ್ದಿ ಸಂಘದ ಅಧ್ಯಕ್ಷ ಶಾಮಸುಂದರ್ ವಹಿಸಿದ್ದರು.
ಸಭೆಯಲ್ಲಿ ಸಂಘದ ರಾಜ್ಯ ಸಮಿತಿ ನಿರ್ದೇಶಕ ಎನ್.ಸಿ.ಪಟೇಲ್, ತಾಲ್ಲೂಕು ಗೌರವ ಅಧ್ಯಕ್ಷ ಡಿ.ಎಸ್.ಸಿದ್ದಣ್ಣ, ಉಪಾಧ್ಯಕ್ಷ ಜಿ.ಎಸ್.ಶಿವಕುಮಾರ್, ಕಾರ್ಯದರ್ಶಿ ಸಿ.ರಜನೀಶ್, ಖಜಾಂಚಿ ರಹೀಂಖಾನ್ ಹಾಗೂ ಸಂಘದ ಸದಸ್ಯರು, ಪದಾಧಿಕಾರಿಗಳು ಇದ್ದರು.