ಬೆಂಗಳೂರು (ದೊಡ್ಡಬಳ್ಳಾಪುರ): ಗೀತಮ್ ಡೀಮ್ಡ್ ಯೂನಿವರ್ಸಿಟಿ (Geetam Deemed University) ಇಂದು ತನ್ನ ಬೆಂಗಳೂರು ಕ್ಯಾಂಪಸ್ ನಲ್ಲಿ ಅದ್ದೂರಿಯಾಗಿ ಪದವಿ ಪ್ರದಾನ ಸಮಾರಂಭವನ್ನು ಆಯೋಜಿಸಿತ್ತು.
ಈ ಸಮಾರಂಭದಲ್ಲಿ 1,310 ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿಗಳನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೋಯಿಂಗ್ ಸಂಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಸೀನಿಯರ್ ಟೆಕ್ನಿಕಲ್ ಫೆಲೋ ಆಗಿರುವ ಡಾ. ಸೀಮಾ ಚೋಪ್ರಾ ಅವರು ಪದವೀಧರರನ್ನು ಉದ್ದೇಶಿಸಿ ಮಾತನಾಡಿದರು. ಉತ್ಯುತ್ತಮ ಕಾರ್ಯ ಪಡೆಯನ್ನು ರೂಪಿಸುವಲ್ಲಿ ಬುದ್ಧಿವಂತ ವ್ಯವಸ್ಥೆಗಳ ಪಾತ್ರ ಮಹತ್ವದ್ದು ಎಂದು ಹೇಳಿದ ಅವರು, ವಿದ್ಯಾರ್ಥಿಗಳಿಗೆ ತಮ್ಮ ವೃತ್ತಿಜೀವನದಲ್ಲಿ ನಿರಂತರ ಕಲಿಕೆ, ಸ್ಪಷ್ಟ ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿ ಪಾಲಿಸಲು ಸಲಹೆ ನೀಡಿದರು.
ಮುಂದುವರೆಸಿ ಮಾತನಾಡಿದ ಅವರು, “ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ತಿಳಿದಿರದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ. ಸರಿಯಾದ ಸಮಸ್ಯೆಗಳನ್ನು ಬಗೆಹರಿಸಿ. ಅದರಲ್ಲೂ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿ. ಆಗ ಮನ್ನಣೆ ಮತ್ತು ಪುರಸ್ಕಾರಗಳು ತಾವಾಗಿಯೇ ಹುಡುಕಿಕೊಂಡು ಬರುತ್ತವೆ. ನೆಟ್ ವರ್ಕಿಂಗ್ ನ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ. ನಿಮ್ಮ ಸ್ನೇಹಿತರು ಮತ್ತು ಸಹಪಾಠಿಗಳು ನಿಮಗೆ ಯಾವಾಗಲೂ ಮುಖ್ಯವಾಗಿರಬೇಕು. ಕೆಲಸ ಎಷ್ಟೇ ಒತ್ತಡದಿಂದ ಕೂಡಿದ್ದರೂ, ಯಾವಾಗಲೂ ಕುಟುಂಬಕ್ಕೆ ಆದ್ಯತೆ ನೀಡಿ” ಎಂದು ಹೇಳಿದರು.
ಬೆಂಗಳೂರಿನ ಗೀತಮ್ ವಿಶ್ವವಿದ್ಯಾನಿಲಯದ ಪ್ರೊ ವೈಸ್-ಚಾನ್ಸೆಲರ್ ಪ್ರೊಫೆಸರ್ ಕೆಎನ್ಎಸ್ ಆಚಾರ್ಯ ಅವರು ವಿದ್ಯಾರ್ಥಿಗಳು ಮತ್ತು ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿ, “ಗೀತಮ್ ವಿಶ್ವವಿದ್ಯಾನಿಲಯದಲ್ಲಿ ನಾವು ಶಿಕ್ಷಣವನ್ನು ಸಾಮಾಜಿಕ ಪ್ರಸ್ತುತತೆ ಮತ್ತು ಉದ್ದೇಶದ ಜೊತೆಗೆ ಸಂಯೋಜಿತಗೊಳಿಸಿ ಶಿಕ್ಷಣ ವ್ಯವಸ್ಥೆಯನ್ನು ಮರುರೂಪಿಸುವ ದಿಕ್ಕಿನೆಡೆಗೆ ಸಾಗುತ್ತಿದ್ದೇವೆ. ನಮ್ಮ ಕೋರ್ಸ್ ಗಳನ್ನು ಉದ್ಯಮದ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ವಾಸ್ತವ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನಮ್ಮ ಸಂಶೋಧನೆಗಳು ನಡೆಯುತ್ತವೆ. ನಮ್ಮ ವಿದ್ಯಾರ್ಥಿಗಳನ್ನು ನಿರ್ದಿಷ್ಟ ಉದ್ದೇಶದ ಹಿನ್ನೆಲೆಯಲ್ಲಿ ಯೋಚಿಸಲು, ಒಂದು ಪರಿಹಾರ ನಿರ್ಮಿಸಲು ಮತ್ತು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಈ ಸಮಾರಂಭವು ಕೇವಲ ಕೋರ್ಸ್ ನ ಅಂತ್ಯ ಮಾತ್ರವೇ ಅಲ್ಲ, ಹೊಸ ಜವಾಬ್ದಾರಿಯ ಆರಂಭವಾಗಿದೆ. ಜ್ಞಾನವನ್ನು ಸಮಗ್ರತೆಯೊಂದಿಗೆ ಅನ್ವಯಿಸುವ, ಸದಾ ಕುತೂಹಲದಿಂದಿರುವ ಮತ್ತು ಪ್ರಪಂಚದಲ್ಲಿ ಅರ್ಥಪೂರ್ಣ ವ್ಯತ್ಯಾಸವನ್ನು ತರುವ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳು ಹೊರಟಿದ್ದಾರೆ, ಅವರಿಗೆ ಶುಭವಾಗಲಿ” ಎಂದು ಹೇಳಿದರು.
ಪದವಿ ಪ್ರದಾನ ಮತ್ತು ಪುರಸ್ಕಾರ ಗೌರವ
ಜುಲೈ 27 ರಂದು ನಡೆದ ಗೀತಮ್ ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ಪ್ರದಾನ ಸಮಾರಂಭದಲ್ಲಿ ಒಟ್ಟು 1,310 ಮಂದಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 1,239 ಮಂದಿ ಪದವಿ, 54 ಮಂದಿ ಸ್ನಾತಕೋತ್ತರ ಪದವಿ ಮತ್ತು 17 ಮಂದಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ. ತಮ್ಮ ಕೋರ್ಸ್ ಗಳಲ್ಲಿ ಅತ್ಯುನ್ನತ ಶ್ರೇಣಿಯನ್ನು ಗಳಿಸಿದ 18 ವಿದ್ಯಾರ್ಥಿಗಳಿಗೆ ಅಧ್ಯಕ್ಷರ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.

ಗೀತಮ್ ಸ್ಕೂಲ್ ಆಫ್ ಬಿಸಿನೆಸ್ ನ ಅಸೋಸಿಯೇಟ್ ಪ್ರೊಫೆಸರ್ ಡಾ. ಜೆ. ಪಿ. ಸೆಂಥಿಲ್ ಕುಮಾರ್ ಅವರಿಗೆ ಅಕೌಂಟಿಂಗ್, ಫೈನಾನ್ಸ್ ಮತ್ತು ಅಪ್ಲೈಡ್ ಬಿಸಿನೆಸ್ ವಿಭಾಗದಲ್ಲಿ ನಡೆಸಿದ ಅದ್ಭುತ ಸಂಶೋಧನಾ ಕಾರ್ಯಕ್ಕಾಗಿ ಶ್ರೇಷ್ಠ ಸಂಶೋಧಕ ಪ್ರಶಸ್ತಿಯನ್ನು ನೀಡಲಾಯಿತು.
ಗೀತಮ್ ವಿಶ್ವವಿದ್ಯಾನಿಲಯದ ವಿಶೇಷತೆಗಳು
ಗೀತಮ್ ಬೆಂಗಳೂರು ಉದ್ಯಮದ ಒಳನೋಟಗಳಿಂದ ರೂಪಿಸಲಾದ ಅಪ್ಲೈಡ್ ಎಜುಕೇಷನ್ ವ್ಯವಸ್ಥೆಯ ಮೂಲಕ ಬೆಳವಣಿಗೆ ಹೊಂದುತ್ತಾ ಬಂದಿದೆ. ಇದರ ಎಂಜಿನಿಯರಿಂಗ್ ಮತ್ತು ಬಿಸಿನೆಸ್ ಪಠ್ಯಕ್ರಮಗಳನ್ನು ವೃತ್ತಿಪರರ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಪ್ರಸ್ತುತ ಮತ್ತು ಉದಯೋನ್ಮುಖ ಕಾರ್ಯಕ್ಷೇತ್ರದ ಅಗತ್ಯಗಳಿಗೆ ಪೂರಕವಾಗಿ ಈ ಪಠ್ಯಕ್ರಮಗಳು ಇರುವಂತೆ ನೋಡಿಕೊಳ್ಳಲಾಗಿದೆ. ಕ್ಯಾಂಪಸ್ ನಲ್ಲಿ ಆಹಾರ ವಿಜ್ಞಾನ, ಜೈವಿಕ ತಂತ್ರಜ್ಞಾನ, ಕೋರ್ ಎಂಜಿನಿಯರಿಂಗ್ ಮತ್ತು ಡೇಟಾ ಸೈನ್ಸ್ ಮುಂತಾದ ವಿಭಾಗಗಳಲ್ಲಿ ಸಂಶೋಧನಾ ಚಟುವಟಿಕೆಯನ್ನು ನಡೆಸಲಾಗುತ್ತದೆ. ಜೊತೆಗೆ ಪ್ರಾಯೋಗಿಕ ಅಂಶಗಳು ಮತ್ತು ಸಾಮಾಜಿಕ ಪರಿಣಾಮ ಬೀರುವ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.
ಮೂಲಸೌಕರ್ಯ ಅಭಿವೃದ್ಧಿ
ಸಂಸ್ಥೆಯಲ್ಲಿ ನಡೆದಿರುವ ಇತ್ತೀಚಿನ ಮೂಲಸೌಕರ್ಯ ಬೆಳವಣಿಗೆಗಳು ಅಭಿವೃದ್ಧಿ ದಿಕ್ಕಿನಲ್ಲಿ ಸಾಗಿವೆ. ಸ್ಮಾರ್ಟ್ ಕ್ಲಾಸ್ರೂಮ್ ಗಳು, ಸುಧಾರಿತ ವಿದ್ಯಾರ್ಥಿ ವಸತಿಗೃಹಗಳು ಮತ್ತು ಹೊಸ ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಸೆಂಟ್ರಲ್ ಇನ್ ಸ್ಟ್ರುಮೆಂಟ್ ಫೆಸಿಲಿಟಿ, ಟೆಕ್ನಾಲಜಿ ಎಕ್ಸ್ ಪ್ಲೋರೇಶನ್ ಮತ್ತು ಪ್ರಾಡಕ್ಟ್ ಎಂಜಿನಿಯರಿಂಗ್ ಲ್ಯಾಬ್ ಹಾಗೂ ಮೇಕರ್ ಸ್ಪೇಸ್ ನಂತಹ ಪ್ರಯೋಗಾಲಯಗಳು ಅನುಭವಾತ್ಮಕ ಕಲಿಕೆಯನ್ನು ಸಾಧ್ಯವಾಗಿಸುತ್ತವೆ. ಸಂಶೋಧನಾ ವಿಭಾಗಗಳಲ್ಲಿ ಮಹತ್ವದ ಬದಲಾವಣೆ ತರಲು ಮೂರ್ತಿ ಲ್ಯಾಬ್ ಮತ್ತು ಸೆರೆನಾ ಟೆಕ್ನಾಲಜೀಸ್ ನ ಎಐ ಮತ್ತು ರೋಬೊಟಿಕ್ಸ್ ಆರ್ & ಡಿ ಕೇಂದ್ರವನ್ನು ರೂಪಿಸಲಾಗಿದೆ. ಡ್ರೋನ್ ತಂತ್ರಜ್ಞಾನಗಳು ಮತ್ತು ಕಂಪ್ಯೂಟರ್ ನೆಟ್ವರ್ಕಿಂಗ್ ಗಾಗಿ ಹೆಚ್ಚುವರಿ ಪ್ರಯೋಗಾಲಯಗಳು ಇನ್ನೇನು ಕಾರ್ಯಾರಂಭ ಮಾಡಲಿವೆ.
ತನ್ನ ಅಪೂರ್ವ ಸಂಶೋಧನೆ, ಉದ್ದೇಶ ಪೂರ್ವಕ ಶಿಕ್ಷಣ ವ್ಯವಸ್ಥೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮೇಲೆ ನಿರಂತರ ಗಮನ ಹರಿಸುವುದರ ಮೂಲಕ ಗೀತಮ್ ಬೆಂಗಳೂರು ವಿಶ್ವ ವಿದ್ಯಾನಿಲಯವು ಉದ್ಯಮಕ್ಕೆ ಪೂರಕವಾದ ಶಿಕ್ಷಣ ಒದಗಿಸುವ ವಿಚಾರದಲ್ಲಿ ರಾಷ್ಟ್ರಕ್ಕೆ ಮಾದರಿಯಾಗಿ ಮುನ್ನಡೆಯುತ್ತಿದೆ.