Harithalekhani: ದೂರದೇಶಕ್ಕೆ ಪ್ರಯಾಣ ಹೊರಟ ಇಬ್ಬರು ಪ್ರಯಾಣಿಕರು ದಾರಿಯಲ್ಲಿ ಸಂಧಿಸಿದರು. ಇಬ್ಬರೂ ಮಾತನಾಡುತ್ತಾ ಕುಳಿತಿದ್ದಾಗ ಅವರಿಬ್ಬರೂ ಒಂದೇ ಜಾಗಕ್ಕೆ ಹೊರಟಿರುವುದು ತಿಳಿಯಿತು.
ಮೊದಲ ಪ್ರಯಾಣಿಕನೆಂದ, ‘ದಾರಿಯಲ್ಲಿ ಕಾಡು ಸಿಗುತ್ತದೆ. ಅಂಥ ಕಡೆ ಒಬ್ಬೊಬ್ಬರೇ ಹೋಗುವುದು ಕ್ಷೇಮವಲ್ಲ. ಏನೇ ಕಷ್ಟ ಬರಲಿ ನಾವಿಬ್ಬರೂ ‘ ಜೊತೆಯಾಗಿರೋಣ’.
‘ಆಗಲಿ, ಅದಕ್ಕೇನು?’ ಎಂದ ಎರಡನೇ ಪ್ರಯಾಣಿಕ.
ಅವರಿಬ್ಬರೂ ಜೊತೆಯಲ್ಲಿ ಮುಂದುವರಿದರು. ಆಗ ದಟ್ಟವಾದ ಕಾಡೊಂದು ಸಿಕ್ಕಿತು. ಅವರು ಮೆಲ್ಲನೆ ಹೆಜ್ಜೆಯಿಡುತ್ತಿದ್ದಾಗ ದೊಡ್ಡ ಕರಡಿಯೊಂದು ಎದುರಿನಿಂದ ಓಡಿ ಬಂತು. ಮರವೊಂದರ ಹತ್ತಿರವಿದ್ದ ಮೊದಲನೆಯ ಪ್ರಯಾಣಿಕ ತಕ್ಷಣ ಮರದ ಕೊಂಬೆ ಹಿಡಿದು ಮೇಲೇರಿದ.
ಮರ ಹತ್ತಲು ಸಮಯವಿಲ್ಲವೆಂದರಿತ ಎರಡನೆಯ ಪ್ರಯಾಣಿಕ ಉಸಿರು ಬಿಗಿ ಹಿಡಿದು ನೆಲದ ಮೇಲೆ ಮಲಗಿಬಿಟ್ಟ. ಕರಡಿ ಹತ್ತಿರ ಬಂದು ನೆಲದ ಮೇಲಿದ್ದವನನ್ನು ಮೂಸಿತು. ಅವನ ಕಿವಿಯ ಬಳಿ ತನ್ನ ಮೂತಿಯನ್ನಿಟ್ಟು ಮೂಸಿತು. ವಾಸನೆ ನೋಡಿತು. ಕಡೆಗೆ ಅವನು ಸತ್ತಿರಬೇಕೆಂದು ನಿರ್ಧರಿಸಿ ಮುಂದೆ ಹೊರಟು ಹೋಯಿತು.
ಮರದ ಮೇಲಿದ್ದವನು ಕೆಳಗಿಳಿದು ಬಂದ. ‘ಕರಡಿ ನಿನ್ನ ಕಿವಿಯಲ್ಲಿ ಏನು ಹೇಳಿತು?’ ಎಂದು ಅವನು ಹಾಸ್ಯ ಮಾಡುತ್ತಾ ಕೇಳಿದ. ಕೆಳಗಿದ್ದವನು ತಿರಸ್ಕಾರದಿಂದ, ‘ಮಾತಿಗೆ ತಪ್ಪುವ ಸಹ ಪ್ರಯಾಣಿಕನನ್ನು ನಂಬಿದ ನೀನು ಮೂರ್ಖ’ ಎಂದು ಕರಡಿ ಹೇಳಿತು ಎಂದ.
ನೀತಿ: ಕಷ್ಟ ಬಂದಾಗ ಬಿಟ್ಟುಹೋಗುವವರನ್ನು ನಂಬಲೇಬಾರದು.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.