Harithalekhani: ಒಂದು ಕಾಡು ಇತ್ತು. ಆ ಕಾಡಿಗೆ ಸಿಂಹವು (Lion) ರಾಜನಾಗಿತ್ತು. ಅದರ ಮಂತ್ರಿ ನರಿಯಾಗಿತ್ತು (fox).
ಆ ಕಾಡು ಸಮೃದ್ಧವಾಗಿತ್ತು. ಈ ಎರಡು ಪ್ರಾಣಿಗಳ ಮಧ್ಯೆ ಗೆಳೆತನವಿತ್ತು. ಆ ಕಾಡಿನಲ್ಲಿ ಕೆಲವು ನಿಯಮಗಳಿದ್ದವು. ಈ ನಿಯಮವು ಏನೆಂದರೆ ಎಲ್ಲ ಮಾಂಸಾಹಾರಿ ಪ್ರಾಣಿಗಳು ಒಂದು ನಿರ್ದಿಷ್ಟ ಎಂದರೆ ರಾಜನ ಆಜ್ಞೆಯಾದಾಗ ಮಾತ್ರ ಬೇಟೆಯಾಡಬಹುದು ಎಂದಾಗಿತ್ತು. ಇದನ್ನು ಮೀರಿದರೆ ಮರಣದಂಡನೆಯೇ ಶಿಕ್ಷೆಯಾಗಿತ್ತು.
ಒಂದು ದಿನ ಪ್ರಾಣಿಗಳು ರಾಜನ ಬಳಿಗೆ ಬಂದು ‘ಮಹಾರಾಜರೇ, ಒಂದು ಮೊಸಳೆಯು ಸದಾ ನೀರಿನಿಂದ ಹೊರಗೆ ಬಂದು ಬೇಟೆಯಾಡಿ ಪ್ರಾಣಿಗಳನ್ನು ತಿನ್ನುತ್ತದೆ. ಹೇಗಾದರೂ ಮಾಡಿ ಈ ಸಂಕಷ್ಟದಿಂದ ನಮ್ಮನ್ನು ಪಾರು ಮಾಡಿ’ ಎಂದವು. ‘ಸರಿ’ ಎಂದು ಸಿಂಹವು ಪ್ರಾಣಿಗಳಿಗೆ ಭರವಸೆ ನೀಡಿತು. ರಾಜನು ಇದಕ್ಕೆ ನರಿಯೇ ಸರಿಯಾದ ಪ್ರಾಣಿ ಎಂದು ಅದನ್ನೇ ಈ ಕೆಲಸಕ್ಕೆ ಕಳುಹಿಸಿತು.
ನರಿಯು ಒಂದು ಉಪಾಯ ಯೋಚಿಸಿತು. ಮೊಸಳೆಯ ಬಳಿ ‘ಅಣ್ಣಾ, ನಾನೊಂದು ದಷ್ಟಪುಷ್ಪ ಪ್ರಾಣಿಯನ್ನು ನೋಡಿದ್ದೀನಿ, ಬಾ’ ಎಂದಿತು. ಮೊಸಳೆಯು ಅದರ ಜೊತೆಗೆ ಬರುತ್ತಿರುವಾಗ ನರಿಯು ‘ಬೇಟೆಗಾರರು ಬಂದಿದ್ದಾರೆ. ನೋಡಣ್ಣಾ ನೀನು ಈ ಎಲೆಯ ರಾಶಿಯಲ್ಲಿ ಅಡಗಿಕೋ’ ಎಂದಿತು. ಮೊಸಳೆ ಹಾಗೇ ಮಾಡಿತು.
ನರಿಯು ಮನೆಗೆ ಹೋಗಿ ಬೆಂಕಿಪೆಟ್ಟಿಗೆ ಹಾಗೂ ಸೀಮೆಎಣ್ಣೆಯ ಡಬ್ಬಿಯನ್ನು ತೆಗೆದುಕೊಂಡು ಬಂದು ರಾಶಿಯಲ್ಲಿ ಸೀಮೆಎಣ್ಣೆ ಸುರಿಯಿತು. ಮೊಸಳೆಯು ‘ಏನದು?’ ಎಂದು ಕೇಳಿದಾಗ, ನರಿಯು ‘ಅಣ್ಣಾ ನಿನಗೆ ಎಲೆಯ ರಾಶಿಯಲ್ಲಿ ಇದ್ದು ಸೆಕೆಯಾಗುತ್ತಿರಬಹುದು ಅದಕ್ಕೆ’ ಎಂದಿತು. ಮೊಸಳೆ ‘ಸರಿ’ ಎಂದಿತು. ನರಿಯು ತತ್‌ಕ್ಷಣ ರಾಶಿಗೆ ಬೆಂಕಿ ಹಚ್ಚಿತು. ಮೊಸಳೆ ಸತ್ತುಹೋಯಿತು. ಪ್ರಾಣಿಗಳು ಔತಣ ಮಾಡಿದವು.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು. (ಸರ್ಕಾರಿ ಲೈಬ್ರರಿಯಿಂದ)