ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶಾಲೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೊಡ್ಡಬಳ್ಳಾಪುರ ನಗರಸಭೆ ಮಾಜಿ ಅಧ್ಯಕ್ಷೆ, ಹಾಲಿ ಸದಸ್ಯೆ ಸುಧಾರಾಣಿ ಲಕ್ಷ್ಮಿನಾರಾಯಣ ಅವರು ಭಾಗವಹಿಸಿದ್ದರು.

ಶಾಲಾ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಪುಟಾಣಿ ಮಕ್ಕಳು ಪ್ರದರ್ಶಿಸಿದ ಶ್ರೀ ವಿಷ್ಣುವಿನ ದಶಾವತಾರ ಕಾರ್ಯಕ್ರಮ ಗಮನ ಸೆಳೆಯಿತು.

ಕೃಷ್ಣನ ಹಾಗೂ ಅವನ ತುಂಟಾಟದ ಕುರಿತಾದ ಹಾಡು, ನೃತ್ಯಗಳು ನೆರೆದಿದ್ದ ಪೋಷಕರ ಮನಸೂರೆಗೊಂಡವು.

ಕೃಷ್ಣ ಹಾಗೂ ರಾಧೆಯ ವೇಷಧಾರಿಗಳಿಂದ, ಕೃಷ್ಣನ ಮಂಟಪ, ಉಯ್ಯಾಲೆ, ಬಣ್ಣಬಣ್ಣದ ರಂಗೋಲಿ ಹಾಗೂ ಕೃಷ್ಣನ ಹೆಜ್ಜೆಗುರುತುಗಳಿಂದ ಶಾಲಾ ಆವರಣ ಬೃಂದಾವನದಂತೆ ಕಂಗೊಳಿಸುತ್ತಿತ್ತು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಬೆಣ್ಣೆ ಕದ್ದ ಕೃಷ್ಣನ ರೀತಿ ಶಾಲೆಯ ಮುದ್ದು ಮಕ್ಕಳು ಎಲ್ಲರ ಮನ ಗೆದ್ದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಎಂಎಸ್‌ವಿ ಪಬ್ಲಿಕ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಎ ಸುಬ್ರಮಣ್ಯ ಮಾತನಾಡಿ, ಗೊಲ್ಲರ ಗೊಲ್ಲ, ಗೋಪಿಲೋಲ, ಮುರಾರಿ, ಮಧುಸೂದನ, ಕೇಶವ, ಅಚ್ಯುತ, ಆದಿನಾರಾಯಣ ಎಂದು ನಾಮಾಂಕಿತನಾದ ಜಗದೊಡೆಯನಾದ ಶ್ರೀಕೃಷ್ಣನ ಲೀಲೆಗಳು ಅಪಾರ ಎಂದು ಬಣ್ಣಿಸಿದರು.

ಶ್ರೀಕೃಷ್ಣನ ಲೀಲೆಗಳಿಗೆ ಎಣೆಯಿಲ್ಲ. ಆತನ ಶೌರ್ಯ, ಸಾಹಸಕ್ಕೆ ಆತನೇ ಸರಿಸಾಟಿ. ಬಾಲ್ಯದಿಂದಲೂ ತನ್ನ ಲೀಲೆಗಳ ಮೂಲಕ ಜಗತ್ತಿನ ಅಜ್ಞಾನಿಗಳ ಅಜ್ಞಾನವನ್ನು ತೊಳೆದು, ಜ್ಞಾನದ ಬೀಜವನ್ನು ಬಿತ್ತಿದ ಮಹಾನ್ ಚೇತನ. ನಮ್ಮ ಈ ಪೋರ ಕೃಷ್ಣ. ಭೂಲೋಕಕ್ಕೆ ಮಾರಕವಾಗಿದ್ದ ಅನೇಕ ಅಸುರರನ್ನು ಸಂಹರಿಸಿ, ಶಾಂತಿ ನೆಮ್ಮದಿಯನ್ನು ಒದಗಿಸಿಕೊಟ್ಟ ಮುರಾರಿಯ ಲೀಲೆ ಅಪಾರವಾದದ್ದು ಎಂದರು.
ಶ್ರೀಕೃಷ್ಣನ ಯಾರೂ ಶ್ರದ್ಧಾಭಕ್ತಿಯಿಂದ ಪೂಜೆಗೈಯುತ್ತಾರೋ, ಭಜಿಸುತ್ತಾರೋ ಅಂತಹವರ ಬಾಳಲ್ಲಿ ಸನ್ಮಂಗಳವನ್ನು ಉಂಟುಮಾಡುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ, ಸುಧಾರಾಣಿ ಲಕ್ಷ್ಮೀನಾರಾಯಣ ಅವರು ಮಾತನಾಡಿ, ಶ್ರೀ ಕೃಷ್ಣ ಜನನದ ದಿನ ಚಂದ್ರಮಾನ ಕೃಷ್ಣ ಪಕ್ಷದಂದು. ರಾಕ್ಷಸನ ಸಂಹಾರಕ್ಕೆ ಜನ್ಮ ತಾಳಿ, ಭಗವದ್ಗೀತೆಯ ಮೂಲಕ ಮಾನವನ ಬದುಕನ್ನು ಸಾರ್ಥಕ ಪಡಿಸುವ ಬಗ್ಗೆ ತಿಳಿಸಿಕೊಟ್ಟವರು. ಬಾಲ್ಯದಿಂದಲೂ ತುಂಟಾಟಗಳ ಮೂಲಕ ಮನುಷ್ಯನಿಗೆ ಮುಕ್ತಿಯನ್ನು ಪಡೆಯುವ ದಾರಿ ತೋರಿದ ಪುಣ್ಯಾತ್ಮ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಎಸ್. ಸ್ವರೂಪ್, ಆಡಳಿತಾಧಿಕಾರಿ ನಯನಾ ಸ್ವರೂಪ್, ಪ್ರಾಂಶುಪಾಲರಾದ ರೆಮ್ಯ.ಬಿ.ವಿ. ಹಾಗೂ ಶಿಕ್ಷಕ ವೃಂದ ಹಾಜರಿದ್ದರು.