ದೊಡ್ಡಬಳ್ಳಾಪುರ: ನಗರದ ಸರಸ್ವತಿ ಶಾಲೆಯಲ್ಲಿ (Saraswati School) ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯಅತಿಥಿಗಳಾಗಿ ಪ್ರಸಿದ್ಧ ಹೆರಿಗೆ ಮತ್ತು ಪ್ರಸೂತಿ ತಜ್ಞರಾದ ಡಾ.ಗೀತಾ ಭಾಗವಹಿಸಿದ್ದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಕೃಷ್ಣ ವಿಷ್ಣುವಿನ ಐದನೇ ಅವತಾರ, ಧರ್ಮ ಅಧರ್ಮಗಳ ಹೋರಾಟದಲ್ಲಿ ಅಂತಿಮವಾಗಿ ಗೆಲ್ಲುವುದು ಧರ್ಮ. ಹಾಗೆ ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂಬ ಶ್ಲೋಕದೊಂದಿಗೆ ಮಕ್ಕಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಡಾ. ಎಸ್ ಮೃದುಲ ಅವರು, ಕೃಷ್ಣ ಭಗವದ್ಗೀತೆಯಲ್ಲಿ ಹೇಳಿರುವ ವಿಚಾರಗಳು ಕೇವಲ ಅರ್ಜುನನಿಗೆ ಮಾತ್ರ ಅಲ್ಲ, ಅದು ನಮ್ಮ ಜೀವನಕ್ಕೂ ಅನ್ವಯವಾಗುವ ಪಾಠಗಳು. ಹೀಗಾಗಿ ನಾವು ಅವುಗಳನ್ನು ಪಾಲಿಸುತ್ತಾ ಸನ್ಮಾರ್ಗದಲ್ಲಿ ಸಾಗಬೇಕು ಎಂದು ತಿಳಿಸಿದರು.

ಇದೇ ವೇಳೆ ಪೋಷಕರು ತಮ್ಮ ಮಕ್ಕಳಿಗೆ ಜಂಕ್ ಫುಡ್ ನೀಡುವುದರ ಬದಲು ಹೆಚ್ಚು ಹಣ್ಣು ತರಕಾರಿಗಳನ್ನು ನೀಡಬೇಕು. ಮಕ್ಕಳ ಆರೋಗ್ಯಕ್ಕೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಶಾಲೆಯ ಕಾರ್ಯದರ್ಶಿ ಮಂಜುಳಾಸುಬ್ರಮಣ್ಯ ಅವರು ಮಕ್ಕಳನ್ನು ರಾಧಾಕೃಷ್ಣರನ್ನಾಗಿ ಅಲಂಕರಿಸಿ ಕರೆತಂದಿರುವ ಪೋಷಕರನ್ನು ಅಭಿನಂದಿಸಿದರು. ಹಾಗೆಯೇ ಮಕ್ಕಳು ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲೂ ಹೀಗೆಯೇ ಭಾಗವಹಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕ ಬಿ.ಕೆ.ಸಂಪತ್ ಕುಮಾರ್ ಮಾತನಾಡಿ, ಶಾಲೆ ಎಂದರೆ ಕೇವಲ ಓದು ಬರಹ ಕಲಿಯುವುದಲ್ಲ, ಇಲ್ಲಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ವಿಚಾರಗಳನ್ನು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಅರಿಯಲು ಸಹಾಯವಾಗುತ್ತದೆ. ಹಾಗೆಯೇ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ಕೊಡಬೇಕು.
ವಯಕ್ತಿಕ ಜಂಜಾಟಗಳನ್ನು ನಡುವೆಯೂ ಮಕ್ಕಳ ಲಾಲನೆ ಪೋಷಣೆಗಳ ಮೂಲಕ ಸಂತಸ ಪಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಿಂದ ರಾಧೇ ಕೃಷ್ಣರ ಕುರಿತು ಹಾಡು ಗೀತಾಪಠಣ ಮತ್ತು ನೃತ್ಯಗಳು ನಡೆದವು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.