ಬೆಂಗಳೂರು: ನೆರೆಹಾನಿ ಪ್ರದೇಶಗಳ ರೈತರು, ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಸೆ.9 ರಿಂದ ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದರು.
ರಾಜ್ಯದಲ್ಲಿ ಮುಂಗಾರು ಮಳೆಯ ಅತಿವೃಷ್ಟಿಯಿಂದ ಲಕ್ಷಾಂತರ ಹೆಕ್ಟರ್ ಪ್ರದೇಶದಲ್ಲಿ ರೈತರ ಬೆಳೆ ನಷ್ಟವಾಗಿದ್ದು, ನೆರೆಹಾನಿಯಿಂದ ಜನಸಾಮಾನ್ಯರು ಸಹ ಮನೆಗಳನ್ನು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನೆರವಿಗೆ ಧಾವಿಸದೆ, ಪರಿಹಾರಗಳನ್ನು ಒದಗಿಸಿದೆ ನಿರ್ಲಕ್ಷ್ಯವಹಿಸಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಈ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಲು ಜನತಾದಳ ಜಾತ್ಯತೀತ ಪಕ್ಷದ ವತಿಯಿಂದ ರಾಜ್ಯ ಪ್ರವಾಸ ಕೈಗೊಳ್ಳಲಾಗಿದ್ದು, ಬೆಳೆ ಹಾನಿ, ಮನೆ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಿದ್ದೇವೆಂದು ಹೇಳಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳೆ ನಷ್ಟದಿಂದ ರೈತರು ಕಣ್ಣೀರಿಡುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸದೇ ಉಸ್ತುವಾರಿ ಮಂತ್ರಿಗಳು ಇಡೀ ಸರ್ಕಾರ ಕಾಣೆಯಾಗಿದೆ. ಜಿಲ್ಲೆಗಳಿಗೆ ತೆರಳಿ ನಿರಾಶ್ರಿತರಿಗೆ ಪರಿಹಾರ ಕಲ್ಪಿಸಿ ಎಂದು ನಿಖಿಲ್ ಅವರು ಅಗ್ರಹಿಸಿದರು.
ಈ ತಿಂಗಳಿಂದ ಮುಂಗಾರು ಹೆಚ್ಚಾಗಿದೆ.ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ರಾಜ್ಯದಲ್ಲಿ 1ಲಕ್ಷದ 42 ಸಾವಿರ ಹೆಕ್ಟರ್ ಪ್ರದೇಶ ಹಾಳಾಗಿದೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆ ಹಾನಿಯಾಗಿದೆ ಎಂದು ಹೇಳಿದರು.
ಹತ್ತಿ, ಮೆಕ್ಕೆಜೋಳ, ತೊಗರಿ ಎಲ್ಲಾ ಬೆಳೆ ನಾಶವಾಗಿದೆ. ಸರ್ಕಾರ, ಸಚಿವರು ತುರ್ತು ಪರಿಹಾರ ನೀಡಿಲ್ಲ. ಆಯಾ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಕೃಷಿ ಸಚಿವರು ಇದ್ದಾರೋ, ಇಲ್ಲವೋ ಅನ್ನೋ ಪ್ರಶ್ನೆ ಉದ್ಬವವಾಗಿದೆ. 266₹ ಚೀಲದ ಗೊಬ್ಬರ ಇತ್ತು, ಬ್ಲಾಕ್ ಮಾರ್ಕೆಟ್‌ಗೆ ಹೋಗಿ 1000₹ ಕೊಟ್ಟು ಖರೀದಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಮೈಸೂರಿಗೆ ಬಾಡೂಟಕ್ಕೆ ಹೋಗಲು ಚಾಪರ್ ಬಳಕೆ ಮಾಡ್ತಾರೆ. ಅದಕ್ಕಾಗಿ 80 ಕೋಟಿ ಕೊಟ್ಟು ಪ್ರೈವೆಟ್ ಚಾಪರ್ ಖರೀದಿ ಮಾಡೋ ಬಗ್ಗೆ ಮಾಹಿತಿ ಇದೆ. ಇದಕ್ಕೆ ಸಿಎಂಗೆ ಸಮಯ ಇದೆ. ಆದ್ರೆ ರೈತರ ಸಮಸ್ಯೆ ಬಗ್ಗೆ ಎಲ್ಲೂ ಕೂಡ ಅವರಿಗೆ ಸಮಯ ಇಲ್ಲ ಎಂದು ಕಿಡಿಕಾರಿದರು.
20-25 ಸಾವಿರ ಹೆಕ್ಟೇರ್ ಜಮೀನಿಗೆ ಪರಿಹಾರ ನೀಡುವಂತೆ ಕೇಳಿದ್ದಾರೆ. ಲಕ್ಷಾಂತರ ರೂ ಬೆಳೆ ಬೆಳೆಯಲು ಸಾಲ ಪಡೆದಿದ್ದಾರೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಕಿಂಚಿತ್ತಾದ್ರೂ ಕಾಳಜಿ ಇದ್ರೆ ಸ್ಥಳ ಪರಿಶೀಲನೆ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕದಲ್ಲಿ ಬಹಳಷ್ಟು ಹಾನಿಯಾಗಿದೆ. ಜೆಡಿಎಸ್ ಎಲ್ಲಾ ನಾಯಕರು ಚರ್ಚೆ ಮಾಡಿದ್ದೇವೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಪ್ರವಾಸ ಮಾಡಲಿದ್ದೇವೆ. ಇದಕ್ಕಾಗಿ ಎರಡು ತಂಡ ಮಾಡಿದ್ದೇವೆ. ರೈತರ ಭೇಟಿ ಮಾಡಿ ಅವರಿಂದ ಮಾಹಿತಿ ಪಡೆಯಲಿದ್ದೇವೆ ಎಂದು ತಿಳಿಸಿದರು.
ಕುಮಾರಸ್ವಾಮಿ ಎಂಪಿ ಆಗಿ ಮಂಡ್ಯಕ್ಕೆ ಬಂದಿಲ್ಲ ಅಂತ ಸಚಿವ ಚಲುವರಾಯಸ್ವಾಮಿ ಆರೋಪ ವಿಚಾರ. ಕೃಷಿ ಸಚಿವರ ಹೇಳಿಕೆ ನಾನೂ ನೋಡಿದ್ದೇನೆ. ಕುಮಾರಣ್ಣ ಮಂಡ್ಯ ಎಂಪಿ ಆಗಿ ಸುಮ್ಮನೆ ಕುಳಿತಿಲ್ಲ. ಕೇಂದ್ರ ಸಾರಿಗೆ ಸಚಿವ ಗಡ್ಕರಿ ಜೊತೆ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಅಭಿವೃದ್ಧಿ ಬಗ್ಗೆ ನಿರಂತರ ಚರ್ಚೆಯಲ್ಲಿದ್ದಾರೆ ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರನ್ನ ಜನ ಕೂಡ ಆರಿಸಿದ್ದಾರೆ. ಕುಮಾರಣ್ಣ ಅವರಿಗೆ ಮಿಸ್ ಡಯಾಗ್ನಾಸಿಸ್ ಆಗಿತ್ತು. ಈಗ ಸರಿಯಾದ ಡಯಾಗ್ನಾಸಿಸ್ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣಮುಖರಾಗಲಿದ್ದಾರೆ.ಬಳಿಕ ಮಂಡ್ಯಕ್ಕೂ ಪ್ರವಾಸ ಮಾಡಲಿದ್ದಾರೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಬೆಳೆದುಬಂದ ಹಾದಿ ಮರೆತಿದ್ದಾರೆ. ದೇವೇಗೌಡರು ಸಿದ್ದರಾಮಯ್ಯ ಅವರನ್ನ ಹಣಕಾಸು ಸಚಿವರಾಗಿ ಮಾಡಿದ್ರು. ಅವರಪ್ಪರಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ಹೇಳಿದ್ದನ್ನೂ ನೋಡಿದ್ದೇನೆ. ನಮ್ಮ ಬಗ್ಗೆ ಯೋಚನೆ ಮಾಡಿ ನೀವು ಯಾಕೆ ಸಮಯ ವ್ಯರ್ಥ ಮಾಡ್ತಿದ್ದೀರಿ.? ಎಂದು ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು
ಬಿಜೆಪಿ ಬಿಟ್ಟು, ಜೆಡಿಎಸ್ ಪ್ರವಾಸ ವಿಚಾರ
ಬಿಜೆಪಿ ಒಂದು ರಾಜಕೀಯ ಪಕ್ಷ, ಜೆಡಿಎಸ್ ಕೂಡ ಒಂದು ರಾಜಕೀಯ ಪಕ್ಷ ಇದೆ. ಯಾವುದನ್ನ ಒಟ್ಟಾಗಿ ಹೋರಾಡಬೇಕು, ಯಾವುದರಲ್ಲಿ ಪ್ರತ್ಯೇಕವಾಗಿ ಹೋರಾಟ ಮಾಡಬೇಕು ಅಂತ ಹಿರಿಯರು ತೀರ್ಮಾನ ಮಾಡ್ತಾರೆ. ಧರ್ಮಸ್ಥಳ ವಿಚಾರದಲ್ಲಿ ಕೂಡ ಹೋರಾಟ ಮಾಡುವಾಗ ಬಿಜೆಪಿ ನೆನಪಿಸಿಕೊಂಡಿದ್ದೇವೆ ಎಂದು ಹೇಳಿದರು.
ನಮ್ಮ ಹೋರಾಟದ ಬಗ್ಗೆ ಕಾಂಗ್ರೆಸ್ ಆಲೋಚಿಸಬಹುದು ಅಷ್ಟೇ. ಕೇಂದ್ರ ಮತ್ತು ರಾಜ್ಯದ ನಾಯಕರ ಜೊತೆಯಲ್ಲಿ ಒಟ್ಟಾಗಿ ಹೋಗ್ತೇವೆ. ಧಾರ್ಮಿಕ ಕ್ಷೇತ್ರದ ಪರವಾಗಿ ನಿಲ್ಲುವ ಕೆಲಸ ನಾವು ಮಾಡಬೇಕಿದೆ. ಹಾಗಾಗಿ ನಾವು ಹೋರಾಟ ಮಾಡ್ತಿದ್ದೇವೆ ಎಂದು ತಿಳಿಸಿದರು.
ಬಾನು ಮುಷ್ತಾಕ್ ಕವಿಯತ್ರಿ , ಬೂಕರ್ ಪ್ರಶಸ್ತಿ ಪಡೆದಿದ್ದಾರೆ. ಬಾನು ಮುಷ್ತಾಕ್ ಅವರು ತಾಯಿ ಭುವನೇಶ್ವರಿ ವಿಚಾರ, ಹರಿಶಿಣ ಕುಂಕುಮ ಬಗ್ಗೆ ಮಾತಾಡಿದ್ದಾರೆ. ನಮ್ಮ ಧರ್ಮದ ಬಗ್ಗೆ ಎಷ್ಟು ತಾತ್ಸರದಿಂದ ನೋಡ್ತಿದ್ದಾರೆ ಅನ್ನೋದನ್ನ ಅವರಿಗೆ ಬಿಟ್ಟಿದ್ದೇವೆ ಎಂದು ಉತ್ತರಿಸಿದರು.
ಬೋವಿ ನಿಗಮದ ಅಧ್ಯಕ್ಷ ಕಮೀಷನ್ ಕೇಳಿದ್ದಾರೆ. SCPTSP ಹಣ ಮೀಸಲಿಟ್ಟಿದ್ದಾರೆ, ದಲಿತರ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಬೋವಿ ನಿಗಮದ ಅಧ್ಯಕ್ಷರು ಹಣ ಕೇಳಿರೋದು ನೋಡಿದ್ದೇವೆ. ದಲಿತರಿಗೆ ನೀವು ನ್ಯಾಯ ಕೊಟ್ಟಿದ್ದೀರಾ.? ಸಚಿಬರೊಬ್ಬರು ಜೈಲಿಗೆ ಹೋಗಿ ಬಂದಿದ್ದಾರೆ.
ಹಣದ ವರ್ಗಾವಣೆ ಆದಾಗ ಅದರ ಬಗ್ಗೆ ಚರ್ಚೆ ಬರಲಿದೆ. ಕಮೀಷನ್ ಏಜೆಂಟ್ ಆಗಿ ವರ್ತನೆ ಮಾಡ್ತಿದ್ದಾರೆ.ಇವರ ಬೆನ್ನು ತಟ್ಟುತ್ತಿರೋದು ಯಾರು.? ಇಷ್ಟು ದಿನ ಬೇಕಾ ಸಿಎಂ ಆದವರು ಕ್ರಮ ತೆಗೆದುಕೊಳ್ಳಲು. ಪಕ್ಷದಲ್ಲಿ ಯಾರಾದ್ರೂ ವಾಸ್ತವವಾಗಿ ಮಾತಾಡಿದ್ರೆ, ಪಕ್ಷದಿಂದ ವಜಾ ಮಾಡ್ತೀರಿ. ಮತ್ತೊಬ್ಬರನ್ನ ಜೈಲಿಗೆ ಕಳಿಸಿದ್ರಿ.
ಅಂಬೇಡ್ಕರ್ ಅವರು ಸಂವಿಧಾನ ಪುಸ್ತಕ ಬರೆದಿದ್ದಾರೆ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಸಂವಿಧಾನ ಪುಸ್ತಕ ಹಿಡಿದು ಹೋಗ್ತಾರೆ. ಅದರಲ್ಲಿ ಏನಿದೆ ಅಂತ ತಿಳಿಯೋ ಕೆಲಸ ಮಾಡಿದ್ದಾರಾ.? ಪ್ರಶ್ನಿಸಿದರು.