ರಾಮನಗರ: “ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದು ಕುಮಾರಸ್ವಾಮಿ ಅವರು. ಇದನ್ನು ನಾನು ಡಿನೋಟಿಫಿಕೇಷನ್ ಮಾಡಿ ಯಡಿಯೂರಪ್ಪ ಅವರಂತೆ ಜೈಲಿಗೆ ಹೋಗಲು ತಯಾರಿಲ್ಲ. ಕಾನೂನು ಚೌಕಟ್ಟಿನಲ್ಲಿ ರೈತರಿಗೆ ನೆರವಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ಅವರು ಹೇಳಿದರು.
ಭೂಸ್ವಾಧೀನ ವಿರೋಧಿಸಿ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಗುರುವಾರ ಸಂಜೆ ಮಾತನಾಡಿದರು.
“ನಾನು ಹೊರಗಡೆಯಿಂದ ಬಂದವನಲ್ಲ. ನಾನು ಕೂಡ ನಿಮ್ಮ ಜಿಲ್ಲೆಯವನೇ. ಬಿಡದಿ ಕೈಗಾರಿಕಾ ಪ್ರದೇಶ ಮಾಡಿದಾಗ ಯಾವ ಸರ್ಕಾರ ಅಧಿಕಾರದಲ್ಲಿತ್ತು ಎಂಬುದು ರೈತರಿಗೆ ತಿಳಿದಿದೆ. ಇದರಿಂದ 16 ಸಾವಿರ ಎಕರೆ ಭೂಮಿ ಹೋಯಿತು. ಟೊಯೋಟೊ ಸೇರಿದಂತೆ ಒಂದಷ್ಟು ಕಂಪನಿಗಳು ಈ ಭಾಗಕ್ಕೆ ಬಂದವು. ಈ ಹಿಂದೆ ಕೈಗಾರಿಕಾ ಪ್ರದೇಶವಾದಾಗ ನನ್ನದೂ ಸಹ 12 ಎಕರೆ ಜಮೀನು ಹೋಗಿದೆ. ಆಗ ಪರಿಹಾರವನ್ನು 8 ಲಕ್ಷಕ್ಕೆ ಮೀರಿ ನೀಡಿಯೇ ಇಲ್ಲ” ಎಂದರು.
“ನಿಮಗೆ ಉತ್ತಮ ಪರಿಹಾರ ನೀಡಲು ಸುಮಾರು 10 ಸಾವಿರ ಕೋಟಿ ರೂ. ಸಾಲ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಮ್ಮ ಒಂದು ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಸ್ವಾಧೀನವಾಗಿರುವ ಭೂಮಿಯನ್ನು ಕಾನೂನು ಚೌಕಟ್ಟು ಮೀರಿ ಕೈ ಬಿಡುವ ಹಂತದಲ್ಲಿ ನಾನಿಲ್ಲ” ಎಂದರು.
“ಕುಮಾರಸ್ವಾಮಿ ಅವರ ಧರ್ಮಪತ್ನಿಯವರು ಹಾಗೂ ಮಗ ಸೇರಿದಂತೆ ಶೇ.70 ರಷ್ಟು ಮಂದಿ ಪರಿಹಾರ ನೀಡಿ ಎಂದು ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಶೇ.30 ರಷ್ಟು ಮಂದಿ ಮಾತ್ರ ಒಪ್ಪಿಗೆ ನೀಡಿಲ್ಲ. ಆದರೆ ನಾನು ನಿಮ್ಮ ಪರವಾಗಿ ಏನು ತೀರ್ಮಾನ ತೆಗೆದುಕೊಳ್ಳಬೇಕು. ಯಾವ ರೀತಿ ಸಹಾಯ ಮಾಡಬೇಕು ಎಂದು ಚರ್ಚೆ ನಡೆಸುತ್ತೇನೆ” ಎಂದು ತಿಳಿಸಿದರು.
“ನಾನು ಕೇವಲ ಬಿಡದಿ ಪ್ರದೇಶಕ್ಕೆ ಮಾತ್ರ ವಿಶೇಷವಾಗಿ ತೀರ್ಮಾನ ತೆಗೆದುಕೊಳ್ಳಲು ಕಾನೂನಿನಲ್ಲಿ ಸಾಧ್ಯವಿಲ್ಲ. ತೀರ್ಮಾನ ತೆಗೆದುಕೊಂಡರೆ ಇಡೀ ರಾಜ್ಯದ ಎಲ್ಲಾ ಭೂ ಸ್ವಾಧೀನಗಳ ಮೇಲೆ ಪರಿಣಾಮ ಬೀರಲಿದೆ. ಈ ಪ್ರದೇಶವನ್ನು ಕೈ ಬಿಡಬೇಕು ಎನ್ನುವ ಒತ್ತಡ ಕೂಡ ಇತ್ತು. ಆದರೆ ಕಾನೂನಿನ ಚೌಕಟ್ಟಿನಲ್ಲಿ ಡಿನೋಟಿಫಿಕೇಷನ್ ಮಾಡಲು ಆಗುವುದಿಲ್ಲ ಎನ್ನುವ ಅಭಿಪ್ರಾಯಗಳು ಬಂದಿವೆ” ಎಂದರು.
“ಬಿಡದಿಯ ರೈತರಿಗೆ ಸಹಾಯ ಮಾಡಬೇಕು ಎಂದು ಮಾಜಿ ಸಂಸದರಾದ ಡಿ.ಕೆ.ಸುರೇಶ್ ಅವರು, ಶಾಸಕರಾದ ಬಾಲಕೃಷ್ಣ ಅವರು ಹಲವಾರು ಸಭೆಗಳನ್ನು ನಡೆಸಿದ್ದಾರೆ. ನಿಮ್ಮ ಪರವಾಗಿ ಅವರಿಗೂ ಜವಾಬ್ದಾರಿಯಿದೆ” ಎಂದರು.
ಶಾಸಕ ಬಾಲಕೃಷ್ಣ ನಿಮ್ಮ ಪರವಾಗಿದ್ದಾರೆ
ಈ ವೇಳೆ ಶಾಸಕ ಬಾಲಕೃಷ್ಣ ಅವರು ರೈತರ ಪರವಿಲ್ಲ ಎಂದು ಪ್ರತಿಭಟನಾ ನಿರತ ರೈತರು ಆಕ್ಷೇಪ ವ್ಯಕ್ತಪಡಿಸಿದಾಗ, “ಬಾಲಕೃಷ್ಣ ಅವರು ನಿಮ್ಮ ಪರವಾಗಿ ಎಷ್ಟು ಹೋರಾಟ ಮಾಡಿದ್ದಾರೆ ಎಂಬುದು ನನಗೆ ತಿಳಿದಿದೆ. ನನ್ನ ಹಿಂದೆ ಬಿದ್ದು ರೈತರ ಪರವಾಗಿ ಮಾತನಾಡಿದ್ದಾರೆ. ನಿಮ್ಮ ಭೂಮಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಹಿಂದೆ ಸಹಿ ಹಾಕಿದವರು ನಿಮ್ಮ ಪರವಾಗಿದ್ದಾರಾ? ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ರೂ.1 ಕೋಟಿ ಪರಿಹಾರ ನಿಗದಿ ಮಾಡಿದವರು ನಿಮ್ಮ ಪರವಾಗಿದ್ದಾರಾ? ಅವರುಗಳು ಯಾರೂ ನಿಮ್ಮ ಪರವಾಗಿಲ್ಲ. ರೈತರಿಗೆ ಉತ್ತಮ ಪರಿಹಾರ ದೊರೆಯಬೇಕು ಎಂದು ಹೋರಾಟ ಮಾಡುತ್ತಿರುವ ಶಾಸಕ ಬಾಲಕೃಷ್ಣ ನಿಮ್ಮ ಪರವಾಗಿದ್ದಾರೆ. ನಿಮ್ಮ ಪರವಾಗಿ ಇವರಷ್ಟು ಹೋರಾಟವನ್ನು ಬೇರೆ ಯಾರೂ ಸಹ ಮಾಡಿಲ್ಲ” ಎಂದರು.
ಈ ಹಿಂದೆ ಹೋರಾಟ ಮಾಡಲಿಲ್ಲ
“ಡಿಎಲ್ ಎಫ್ ಕಂಪೆನಿಯವರು ಈ ಪ್ರದೇಶವನ್ನು ತೆಗೆದುಕೊಂಡರು. ಆ ನಂತರ ಇಲ್ಲಿನ ವೃಷಭಾವತಿ ನೀರು ಸೇರಿದಂತೆ ಇತರೇ ಸಂಗತಿಗಳನ್ನು ಗಮನಿಸಿ ನಮ್ಮಿಂದ ಟೌನ್ ಶಿಪ್ ಮಾಡಲು ಸಾಧ್ಯವಿಲ್ಲ ಎಂದು ಯೋಜನೆ ಕೈ ಬಿಟ್ಟರು. 9,600 ಎಕರೆ ಪ್ರದೇಶದಲ್ಲಿ ಸುಮಾರು 912 ಎಕರೆ ಪ್ರದೇಶವನ್ನು ಕೈಗಾರಿಕೆಗೆ ಎಂದು ನೀಡಲಾಯಿತು. ಎಕರೆಗೆ ರೂ.1 ಕೋಟಿ ಹಾಗೂ ಅದಕ್ಕಿಂತ ಹೆಚ್ಚು ಪರಿಹಾರ ಹಣವನ್ನು ನಿಗದಿ ಪಡಿಸಲಾಯಿತು. ಆಗ ಯಾರೂ ಸಹ ವಿರೋಧ ಮಾಡಲಿಲ್ಲ. ಈಗ ಏಕೆ ವಿರೋಧ ಮಾಡುತ್ತಿದ್ದೀರಿ” ಎಂದು ಪ್ರಶ್ನಿಸಿದರು.
ಪೆರಿಫೆರಲ್ ರಿಂಗ್ ರಸ್ತೆಗೆ 27 ಸಾವಿರ ಕೋಟಿ
“ಬಿಡದಿಯ ಭೂಸ್ವಾಧೀನದ ಬಗ್ಗೆ ಮಾತ್ರ ನಾವು ಯೋಚನೆ ಮಾಡುತ್ತಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ, ಮೇಕೆದಾಟು ಯೋಜನೆಯ ಭೂಸ್ವಾಧೀನದ ಬಗ್ಗೆಯೂ ನಾವು ಆಲೋಚನೆ ಮಾಡುತ್ತಿದ್ದೇವೆ. ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ದಿನಾಂಕದ ಅನ್ವಯದಂತೆ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ ಇತ್ತೀಚೆಗೆ ನೈಸ್ ರಸ್ತೆಯ ಉತ್ತರ ಭಾಗದಲ್ಲಿ ಹೋಗಿರುವ ಪೆರಿಫೆರಲ್ ರಿಂಗ್ ರಸ್ತೆಗೆ ಭೂಮಿ ನೀಡಿರುವವರಿಗೆ ನ್ಯಾಯಾಲಯದ ಆದೇಶವನ್ನೂ ಮೀರಿ ಪರಿಹಾರ ನಿಗದಿ ಮಾಡಲಾಗಿದೆ. ವಾಣಿಜ್ಯ ಉದ್ದೇಶಕ್ಕೆ ಇಂತಿಷ್ಟು, ವಾಸಸ್ಥಾನಗಳಿಗೆ ಪ್ರತ್ಯೇಕ ದರ ನಿಗದಿ ಮಾಡಿ ಸುಮಾರು 27 ಸಾವಿರ ಕೋಟಿ ಹಣವನ್ನು ಸಾಲ ತೆಗೆದುಕೊಂಡು ಯೋಜನೆ ಕಾರ್ಯಗತಗೊಳಿಸಲಾಗಿದೆ. ಈಗಾಗಲೇ ಸಂತ್ರಸ್ತರು ಪರಿಹಾರದ ಹಣ ಪಡೆದುಕೊಳ್ಳುತ್ತಿದ್ದಾರೆ” ಎಂದು ವಿವರಿಸಿದರು.
ಕುಮಾರಸ್ವಾಮಿ ಅವರು ಕೃಷ್ಣಾದಲ್ಲಿ ಸಭೆ ನಡೆಸಿ ಭೂಸ್ವಾಧೀನ ಕೈ ಬಿಡುವುದಾಗಿ ತಿಳಿಸಿದ್ದರು, ಅದರಂತೆ ನೀವು ಮಾಡಿ ಎಂದು ರೈತರು ಹೇಳಿದಾಗ, “ಅವೆಲ್ಲ ಸುಳ್ಳು. ಯಾರೂ ಸಹ ಭೂಸ್ವಾಧೀನ ಕೈಬಿಡಲಿಲ್ಲ. ಈಗ ಅವರು ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅವರಿಂದಲೇ ಭೂಸ್ವಾಧೀನವನ್ನು ಬಿಡಿಸಿಕೊಳ್ಳಿ” ಎಂದರು.
“ಬಿಡಿಎಗೆ ಎಂದು ಭೂಸ್ವಾಧೀನ ಮಾಡಿಕೊಳ್ಳಲಾಯಿತು. ಈ ಪ್ರಕರಣ ಸುಪ್ರೀಂ ಕೋರ್ಟಿಗೆ ಹೋಗಿದೆ. ಆ ನಂತರ ಯಾವುದೇ ಬೆಳವಣಿಗೆ ಆಗಿಲ್ಲ. ನಾನು ಹೊಸದಾಗಿ ಭೂಸ್ವಾಧೀನ ಮಾಡಿಕೊಳ್ಳುತ್ತಿಲ್ಲ. ನೈಸ್ ಯೋಜನೆಯ ಭೂಮಿಯನ್ನು ಏಕೆ ವಜಾ ಮಾಡಲು ಆಗಲಿಲ್ಲ.? ಏಕೆಂದರೆ ಕಾನೂನಿನ ಪ್ರಕಾರವೇ ನಾವು ಮುಂದುವರೆಯಬೇಕಾಗುತ್ತದೆ” ಎಂದು ಸ್ಪಷ್ಟಪಡಿಸಿದರು.