ಬೆಂಗಳೂರು: ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣೆ ಆಯೋಗ ವೋಟ್ ಚೋರಿ (Vote chori) ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ತೀವ್ರ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇವಿಎಂಗೆ (EVM) ಕೊಕ್ ನೀಡುವ ಮಹತ್ವದ ನಿರ್ಣಯ ಕೈಗೊಂಡಿದೆ.
ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸುವ ರಾಜ್ಯ ಸರಕಾರದ ತೀರ್ಮಾನದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದರೆ, ಕಾಂಗ್ರೆಸ್ ನಾಯಕರು ಸರಕಾರದ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.
ಪರ-ವಿರೋಧದ ಚರ್ಚೆಯ ಹೊರತಾಗಿಯೂ, ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಬ್ಯಾಲೆಟ್ ಪೇಪರ್ನಲ್ಲಿ ನಡೆಸಲು ಅಗತ್ಯ ಕಾನೂನನ್ನು ಜಾರಿಗೊಳಿಸಿದರೆ ನಡೆಸಲು ಅವಕಾಶವಿದೆ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡುವ ಮೂಲಕ ಸರಕಾರದ ತೀರ್ಮಾನಕ್ಕೆ ಮತ್ತಷ್ಟು ‘ಬಲ’ ಸಿಕ್ಕಿದೆ.
ಕಳೆದ ಮೂರು ಲೋಕಸಭಾ ಚುನಾವಣೆ ಯಿಂದಲೂ ಇವಿಎಂ ವಿರುದ್ಧ ಕಿಡಿಕಾರುತ್ತಿರುವ ಕಾಂಗ್ರೆಸ್ ನಾಯಕರು ಸ್ಥಳೀಯ ಸಂಸ್ಥೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಯ ಮೂಲಕ ‘ನ್ಯಾಯ ಸಮ್ಮತ’ ಚುನಾವಣೆ ನಡೆಸುವ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ‘ಆಧುನಿಕ’ ಚುನಾವಣಾ ಪದ್ಧತಿಯನ್ನು ಬಿಟ್ಟು, ಪುರಾತನ ಚುನಾವಣಾ ಪ್ರಕ್ರಿಯೆ ಹೋಗುತ್ತಿರುವುದು ಏಕೆ ಎಂದು ಬಿಜೆಪಿಗರು ಪ್ರಶ್ನಿಸಿದ್ದಾರೆ.
ರಾಜಕೀಯ ಹೇಳಿಕೆಗಳ ಹೊರತಾಗಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಯಾವ ರೀತಿ ನಡೆಸಬೇಕು ಎನ್ನುವ ತೀರ್ಮಾನ ರಾಜ್ಯ ಚುನಾವಣಾ ಆಯೋಗ ಹಾಗೂ ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದರಿಂದ, ಸೂಕ್ತ ತಿದ್ದುಪಡಿಗಳೊಂದಿಗೆ ಬ್ಯಾಲೆಟ್ ಪೇಪರ್ ಬಳಸುವುದು ಕಾನೂನಾತ್ಮ ಕವಾಗಿ ಬಹುದೊಡ್ಡ ಸಮಸ್ಯೆಯಲ್ಲ ಎನ್ನುವ ಮಾತುಗಳನ್ನು ಅಧಿಕಾರಿಗಳು ಹೇಳುತ್ತಿದ್ದಾರೆ.
ಇನ್ನೂ ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ನಮ್ಮ ಅನುಭವದ ಮೇಲೆ ನಾವು ಈ ತೀರ್ಮಾನ ಮಾಡಿದ್ದೇವೆ. ಈಗಾಗಲೇ ಅನೇಕ ದೇಶಗಳು ಇವಿಎಂ ಬಳಸಿ ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಮಾಡುತ್ತಿದ್ದಾರೆ ಎಂದಿದ್ದಾರೆ.