ದೊಡ್ಡಬಳ್ಳಾಪುರ: ರಾಜ್ಯದ ಎಲ್ಲ ಸಮುದಾಯಗಳ ಸ್ಥಿತಿಗತಿಯನ್ನು ತಿಳಿಯುವ ಸಲುವಾಗಿ ರಾಜ್ಯ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದ್ದು, ಸಮೀಕ್ಷೆಗೆ ಬರುವ ಗಣತಿದಾರರಿಗೆ ತಾಲೂಕಿನ ಒಕ್ಕಲಿಗ (Vokkaliga) ಸಮುದಾಯದವರು ಸೂಕ್ತ ಮಾಹಿತಿ ಕೊಡುವ ಮೂಲಕ ಸಹಕರಿಸಬೇಕು ಎಂದು ಜೆಡಿಎಸ್ ಹಿರಿಯ ಮುಖಂಡ ಹರೀಶ್ ಗೌಡ (Harish Gowda) ಮನವಿ ಮಾಡಿದರು.
ಈ ಕುರಿತಂತೆ ಹರಿತಲೇಖನಿಯೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಇದೇ ತಿಂಗಳ 22ರಿಂದ ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡಿರುವುದರಿಂದ ಗಣತಿದಾರರು ತಮ್ಮ ಮನೆಗೆ ಬಂದಾಗ ಒಕ್ಕಲಿಗ ಸಮಾಜದ ಬಂಧುಗಳು ಸರ್ಕಾರದಿಂದ ಸಾಮಾಜಿಕ, ಶಿಕ್ಷಣ, ಆರ್ಥಿಕ ಹಾಗೂ ಉದ್ಯೋಗ ಇತ್ಯಾದಿ ಸರ್ಕಾರದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ನಮ್ಮ ಸಮಾಜದ “ಜಾತಿ ಕಾಲಂ ನಂ.9 ರಲ್ಲಿ ಸರ್ಕಾರದ ಗೆಜೆಟ್ ನಂ. 1541 ಒಕ್ಕಲಿಗ” ಎಂಬುದಾಗಿ ಕಡ್ಡಾಯವಾಗಿ ನಮೂದಿಸಬೇಕು ಎಂದರು.
ಉಪಜಾತಿ ಕಾಲಂನಲ್ಲಿ ಉಪಪಂಗಡ ತಿಳಿದಿದ್ದರೆ ನಮೂದಿಸಿ ಇಲ್ಲವಾದಲ್ಲಿ “ಒಕ್ಕಲಿಗ” ಎಂದು ಜಾತಿಯನ್ನು ನಮೂದಿಸಬೇಕು. ಇನ್ನಿತರ ಯಾವುದೇ ಪರ್ಯಾಯ ಜಾತಿಗಳ ಪದನಾಮಗಳನ್ನು ಬರೆಯಿಸಬಾರದು.
ಸಮಾಜದ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಕುಟುಂಬಗಳ ವಿವರವನ್ನು ಸಮೀಕ್ಷೆದಾರರಿಗೆ ನೀಡಿ, ನಮ್ಮ ಜನಸಂಖ್ಯೆಯ ನಿಖರವಾದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಿ ನಮ್ಮ ಜನಸಂಖ್ಯೆಯ ಅನುಗುಣವಾಗಿ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಕೋರಿದರು.
ನಾಳೆ ನಿರ್ಮಲಾನಂದ ಸ್ವಾಮೀಜಿ ದೊಡ್ಡಬಳ್ಳಾಪುರದಲ್ಲಿ ಸಭೆ
ರಾಜ್ಯ ಸರ್ಕಾರ ನೆಡೆಸಲಿರುವ ಸಮೀಕ್ಷೆಯಲ್ಲಿ ಸಮುದಾಯದ ಜನತೆ ಭಾಗವಹಿಸುವಿಕೆ ಹಾಗೂ ಮಾಹಿತಿ ನೀಡುವ ಕುರಿತು ಅರಿವು ಮೂಡಿಸುವ ಸಲುವಾಗಿ ಸೋಮವಾರ (ಸೆ. 15)ದಂದು ಆದಿಚುಂಚನಗಿರಿ ಮಹಾಸ್ವಾಮಿಗಳಾದ ಶ್ರೀ ನಿರ್ಮಲಾನಂದ ಸ್ವಾಮೀಜಿ ಒಕ್ಕಲಿಗರ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದು ತಾಲೂಕಿನ ಒಕ್ಕಲಿಗ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಇದೇ ವೇಳೆ ಮನವಿ ಮಾಡಿದರು.
ಸಮೀಕ್ಷೆಯಲ್ಲಿ 60 ಪ್ರಶ್ನೆಗಳಿದ್ದು, ಕುಟುಂಬದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಕೇಳಲಾಗುತ್ತದೆ. ಒಕ್ಕಲಿಗ ಸಮುದಾಯದ ಹೆಸರನ್ನು ಸರಿಯಾಗಿ ನಮೂದಿಸಬೇಕು. ಸಮುದಾಯ ಬಂಧುಗಳು ಸೂಕ್ತ ರೀತಿಯಲ್ಲಿ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಹರೀಶ್ ಗೌಡ ಕೋರಿದರು