ದೊಡ್ಡಬಳ್ಳಾಪುರ: ಕಳೆದ ಕೆಲ ದಿನಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ Rain ಯಾಗುತ್ತಿದ್ದು, ಇನ್ನೂ ಕೆಲ ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು, ಸಂಜೆ ಆರಂಭವಾಗುವ ಮಳೆಯು ಮಧ್ಯರಾತ್ರಿ ಕಳೆಯುವವರೆಗೂ ಸುರಿಯುತ್ತಿದೆ.
ಗುರುವಾರವೂ ನಗರದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಸಂಜೆಯಾಗುತ್ತಿದ್ದಂತೆಯೇ ಆರಂಭವಾಗುತ್ತಿದೆ. ತಾಲೂಕಿನಾಧ್ಯಂತ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಸಂಜೆ 6ರ ಬಳಿಕ ಸುರಿಯಲು ಆರಂಭಿಸಿದ ಮಳೆ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ಜನ ಸಂಚಾರಕ್ಕೆ ಅಡಚಣೆಯುಂಟಾಯಿತು.
ರಸ್ತೆಗಳಲ್ಲಿ ಬಿದ್ದ ಗುಂಡಿಗಳ ತುಂಬ ನೀರು ತುಂಬಿದ್ದು, ವಾಹನ ಸವಾರರು ಪರದಾಡಿದರು. ಇದನ್ನು ಕೆಲ ನೆಟ್ಟಿಗರು ಇದೇ ನವ ದೊಡ್ಡಬಳ್ಳಾಪುರ ಎಂದು ಲೇವಡಿ ಮಾಡಿದರೆ, ಕಾಮಗಾರಿ ಪ್ರಗತಿಯಲ್ಲಿ ಸಹಕರಿಸಿ ಎಂದು ಮತ್ತೆ ಕೆಲವರು ತಿರುಗೇಟು ನೀಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದೆ.