ನವದೆಹಲಿ: ಇತ್ತೀಚೆಗಷ್ಟೇ ಭಾರತದಿಂದ ರಪ್ತಾಗುವ ವಸ್ತುಗಳ ಮೇಲೆ ಶೇ.50 ತೆರಿಗೆಯ ಬರೆ ವಿಧಿಸಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಿತ್ರ ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump), ಈಗ H-1B ವೀಸಾ ಶುಲ್ಕ 6 ಲಕ್ಷದಿಂದ ಭಾರತದ ರೂಪಾಯಿ ಮೌಲ್ಯದಲ್ಲಿ 88 ಲಕ್ಷಕ್ಕೆ ಹೆಚ್ಚಳ ಮಾಡಿದ್ದು, ಭಾರತೀಯ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಪೋಷಕರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಹೌದು ಭಾರತದ ಐಟಿ ಸೆಕ್ಟರ್ ಮೇಲೆ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ದೊಡ್ಡ ಮಟ್ಟದ ಹೊಡೆತ ನೀಡಿದ್ದಾರೆ, ಇದು ಯಾವ ಮಟ್ಟದ್ದು ಎಂದರೆ ಅಮೇರಿಕಾದಿಂದ ಹಿಡಿದು ಭಾರತದವರೆಗೆ ಇಂಜಿನಿಯರ್‌ಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ.
ಭಾರತದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುವ ಲಕ್ಷಾಂತರ ವಿದ್ಯಾರ್ಥಿಗಳ ಮೇಲೆ ಟ್ರಂಪ್ ಆದೇಶ ಪರಿಣಾಮ ಬೀರಲಿದೆ. ಭಾರತದ ಲಕ್ಷಾಂತರ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲವನ್ನು ಪಡೆದು ಅಮೇರಿಕಾದಲ್ಲಿ ವ್ಯಾಸಂಗ ಮಾಡಲು ತೆರಳುತ್ತಾರೆ. ಏಕೆಂದರೆ ಅಲ್ಲಿ ಉದ್ಯೋಗ ಸಿಗುತ್ತದೆ, ಬಳಿಕ ಸಾಲ ತಿರಿಸಬಹುದು ಎಂಬ ನಂಬಿಕೆಯಿಂದ. ಆದರೆ ಟ್ರಂಪ್ ಸರ್ಕಾರದ ಈ ನೀತಿಯಿಂದಾಗಿ ಅಂತಹ ವಿದ್ಯಾರ್ಥಿಗಳಿಗೆ ಅಮೇರಿಕಾದ ಬಾಗಿಲು ಮುಚ್ಚಿಹೋಗುವ ಪರಿಸ್ಥಿತಿ ಉಂಟಾಗಿದೆ.
ಮೊದಲೇ ಭಾರತದಲ್ಲಿ ಐಟಿ ಸೆಕ್ಟರ್‌ನಲ್ಲಿ ಉದ್ಯೋಗಗಳು ಕಡಿಮೆಯಾಗುತ್ತಿದೆ. ಇದರ ಬೆನ್ನಲ್ಲೇ ಅಮೇರಿಕಾದಲ್ಲಿ ಕೆಲಸ ಮಾಡುವುದು ಕಷ್ಟ ಎಂದಾದರೆ ಭಾರತದ ಇಂಜಿನಿಯರ್ ಗಳ ಮೇಲೆ ದೊಡ್ಡಮಟ್ಟದ ಪರಿಣಾಮ ಎದುರಿಸಬೇಕಾದ ಆತಂಕ ಕಾಡುತ್ತಿದೆ.
ಟ್ರಂಪ್ ಈ ಕಠಿಣ ನಿಯಮಕ್ಕೆ ತಿರುಗೇಟು ನೀಡುತ್ತೇವೆ, ಅಮೇರಿಕಾದಲ್ಲಿರುವವರ ಭಾರತ ಪ್ರತಿಭಾ ಶಾಲಿಗಳನ್ನು ವಾಪಸ್ ಕರೆತರುತ್ತೇವೆ, ಎಂಬ ಅವಿವೇಕದ ಮನಸ್ಥಿತಿಯಲ್ಲಿ ನೋಡಲು ಸಾಧ್ಯವಿಲ್ಲ. ಆದರೆ ಭಾರತದ ವಿದೇಶಾಂಗ ನೀತಿ ಕೇವಲ ಚಪ್ಪಾಳೆ ಅಥವಾ ತಬ್ಬಿಕೊಳ್ಳುವುದರಿಂದ ಗಟ್ಟಿಯಾಗುವುದಿಲ್ಲ ಎಂಬ ಅರಿವು ಸ್ಪಷ್ಟವಾಗಿದೆ.
ಏಕೆಂದರೆ ಕೆಲ ವರ್ಷಗಳ ಹಿಂದಷ್ಟೇ ಅಮೇರಿಕಾ ಪ್ರವಾಸ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ವಾಷಿಂಗ್ಟನ್‌ನಲ್ಲಿ ಆನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವ ವೇಳೆ H-1B ವೀಸಾ ನವೀಕರಣಕ್ಕೆ ಭಾರತಕ್ಕೆ ಬರುವ ಅವಶ್ಯಕತೆ ಇಲ್ಲ, ಇದಕ್ಕೆ ಪೈಲೆಟ್ ಪ್ರಾಜೆಕ್ಟ್ ತಯಾರಾಗುತ್ತಿದೆ, ಅಮೇರಿಕಾದಲ್ಲಿ ಆಗುತ್ತದೆ ಎಂದು ಹೇಳಿದ್ದರು. ಆ ವೇಳೆ ಅಲ್ಲಿನ ಆನಿವಾಸಿ ಭಾರತೀಯರು ಚಪ್ಪಾಳೆ ಹೊಡೆದರು, ಮೋದಿ, ಮೋದಿ ಘೋಷಣೆ ಕೂಗಿದ್ದರು. ಆದರೆ ಈಗ H-1B ವೀಸಾದ ಅಡಿಯಲ್ಲಿ ಅಮೇರಿಕಾದಲ್ಲಿ ವಾಸಿಸುತ್ತಿರುವ ಅಥವಾ ಅಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶುಕ್ರವಾರ ಸಂಜೆ ಹೊಸ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಕುರಿತು ಈಗಾಲೇ ಚರ್ಚೆಯಲ್ಲಿತ್ತು ಟ್ರಂಪ್ ಭಾರತದ ಐಟಿ ಸೆಕ್ಟರ್‌ಮೇಲೆ ಟಾರ್ಗೆಟ್ ಮಾಡುತ್ತಾರೆ ಎಂದು. ಆದರೆ ಯಾವಾಗ ಟ್ರಂಪ್ ನೂತನ ಕಾಯ್ದೆ ಮೇಲೆ ಸಹಿ ಹಾಕಿದರೋ, ಅಮೇರಿಕಾದಲ್ಲಿ ವಾಸಿಸುತ್ತಿರುವ ಲಕ್ಷಾಂತರ ವಿದೇಶಿಗಳ ಮೊಬೈಲ್ ರಿಂಗಣಿಸಲು ಆರಂಭವಾಗಿದೆ. ಅಂತೆಯೇ ಭಾರತದಲ್ಲಿ ಅಮೇರಿಕಾದಲ್ಲಿ ವಾಸಿಸುತ್ತಿರುವ ಪೋಷಕರ ಆತಂಕ ತೀವ್ರಗೊಂಡಿದ್ದು, ಈಗೇನ್ ಆಗುತ್ತೆ, ಕೆಲಸ ಕಳೆದುಕೊಳ್ಳುತ್ತಾರೆಯೇ..? ಎಂಬ ಕುರಿತು ಚರ್ಚೆ ತೀವ್ರವಾದೆ.
ಟ್ರಂಪ್ ಆದೇಶ ಪರಿಣಾಮ ಪಾಟ್ನಾದಿಂದ, ಬೆಂಗಳೂರು ವರೆಗೂ ತಟ್ಟುವ ಆತಂಕ ಎದುರಾಗಿದೆ.
ಮೊದಲು H-1B ವೀಸಾ ನವೀಕರಣಕ್ಕೆ 6 ಲಕ್ಷ ನೀಡಿದರೆ ಸಾಕಿತ್ತು. ಆದರೆ ಟ್ರಂಪ್ ಜಾರಿಗೆ ತಂದಿರುವ ನೂತನ ಕಾಯ್ದೆ ಅನ್ವಯ ವರ್ಷಕ್ಕೆ 1 ಲಕ್ಷ ಡಾಲರ್ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಭಾರತೀಯ ರೂಪಾಯಿ ಮೌಲ್ಯದ ಅನ್ವಯ 88 ಲಕ್ಷಕ್ಕೂ ಹೆಚ್ಚು ಫೀಸ್ ನೀಡಬೇಕಾದ ಪರಿಸ್ಥಿತಿ ಎದುರಾಗಿದೆ.
ಇದು ಒಂದು ವರ್ಷಕ್ಕೋ ಅಥವಾ ಹಲವು ವರ್ಷಗಳಿಗೂ ಎಂಬ ಕುರಿತು ಸ್ಪಷ್ಟನೆ ದೊರೆತಿಲ್ಲ. ಬದಲಿಗೆ ಈ ಫೀಸ್ ಕಂಪನಿ ನೀಡುತ್ತದೆ..? ಅಥವಾ ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿರುವ ಆನಿವಾಸಿಗಳು ನೀಡಲು ಸಾಧ್ಯವೇ..? ಈ ಕಾರಣವೇ ಅಮೇರಿಕಾದಲ್ಲಿ ಉದ್ಯೋಗ ಮಾಡುತ್ತಿರುವ ಲಕ್ಷಾಂತರ ಮಂದಿ ಭಾರತಿಯರು ಉದ್ಯೋಗ ಕಳೆದುಕೊಳ್ಳುವ ಆತಂಕ ಕಾಡಲು ಮುಖ್ಯ ಕಾರಣ.
ಕೂಡಲೇ ಭಾರತದ ವಿದೇಶಾಂಗ ಸಚಿವಾಲಯ ಸುದ್ದಿಗೋಷ್ಠಿ ನಡೆಸಬೇಕಿದೆ. ಏಕೆಂದರೆ ಈ ಕಾಯ್ದೆಯಿಂದ ಭಾರತೀಯ ಇಂಜಿನಿಯರ್‌ಗಳಿಗೆ ಎಷ್ಟು ಪರಿಣಾಮ ಬೀರುತ್ತದೆ, ವಿದೇಶಾಂಗ ಸಚಿವಾಲಯದಿಂದ ಯಾವ ರೀತಿ ನೆರವು ನೀಡಲಾಗುತ್ತದೆ ಎಂಬ ಕುರಿತು ಭಾರತೀಯರಿಗೆ ಸ್ಪಷ್ಟನೆ ನೀಡಬೇಕಿದೆ.
ಅಲ್ಲದೆ H-1B ಬಿ ವಿಸಾದ ಅಡಿಯಲ್ಲಿ ಅಮೇರಿಕಾದಲ್ಲಿ ವಾಸಿಸುತ್ತಿರುವ ಭಾರತೀಯರಿಂದ ಅಮೇರಿಕಾಗೆ ಆಗುತ್ತಿರುವ ಅನುಕೂಲಗಳೇನು ಎಂಬುದನ್ನು ಮನದಟ್ಟು ಮಾಡಬೇಕಿದೆ. ಏಕೆಂದರೆ ಲಕ್ಷಾಂತರ ಭಾರತೀಯರಿಂದ ಅಮೇರಿಕಾದ ಆರ್ಥಿಕತೆ ಮೇಲೆ ಎಷ್ಟು ಪರಿಣಾಮ ಬೀರುತ್ತದೆ. ಈಗಾಗಲೇ ಲಕ್ಷಾಂತರ ಟ್ಯಾಕ್ಸ್ ಕಟ್ಟುವುದು, ಅಲ್ಲಿನ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು, ರಿಯಲ್ ಎಸ್ಟೇಟ್ ವಹಿವಾಟು, ಶಾಲೆಗಳಿಗೆ ಮಕ್ಕಳ ಫೀಸ್ ಕಟ್ಟಿರುವುದು, ಡಾಕ್ಟರ್‌ಗಳು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಭಾರತೀಯ ಪ್ರತಿಭೆಗಳಿಂದ ಅಮೇರಿಕಾದ ಆಸ್ಪತ್ರೆಗಳು ಸೇರಿದಂತೆ ಅನೇಕ ಕಂಪನಿಗಳು ನಡೆಯುತ್ತಿವೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಕನಿಷ್ಠ ಭಾರತೀಯರಿಂದ ಅಮೇರಿಕಾಗೆ ಅನುಕೂಲವೇ ಹೊರತು, ನಷ್ಟವಾಗಿಲ್ಲ ಎಂಬ ಕುರಿತು ವಿದೇಶಾಂಗ ಸಚಿವಾಲಯ ಹೇಳುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ನೇರವಾಗಿ ಹೇಳುವುದಾದರೆ ಟ್ರಂಪ್ ನೂತನ ನೀತಿಯಿಂದಾಗಿ ಐಟಿ ಸೆಕ್ಟರ್ ಗಳಲ್ಲಿ ದುಡಿಯುತ್ತಿರುವ ಭಾರತೀಯರನ್ನು ಉದ್ಯೋಗದಿಂದ ತೆಗೆಸಿ, ಅಮೇರಿಕಾದವರಿಗೆ ಮಾತ್ರ ಉದ್ಯೋಗ ಕೊಡಿಸುವ ಹುನ್ನಾರ ಅಡಗಿದೆ.
ಟ್ರಂಪ್ ಆದೇಶದಿಂದ ಭಾರತೀಯ ಸಾಫ್ಟ್‌ವೇರ್ ಇಂಜಿನಿಯರ್ ಗಳ ಬದುಕಿನಲ್ಲಿ ಬಿರುಗಾಳಿ ಎದ್ದಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಕಳಪೆ ವಿದೇಶಾಂಗ ನೀತಿ ಕಾರಣ ಎನ್ನಲಾಗುತ್ತಿದೆ. ಏಕೆಂದರೆ ಭಾರತದ ವಿರುದ್ಧ ಟ್ರಂಪ್ ಪದೇ ಪದೇ ಪರೋಕ್ಷ ದಾಳಿ ನಡೆಸುತ್ತಿದ್ದರು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾತನಾಡುತ್ತಿಲ್ಲ. ಬದಲಾಗಿ ಭಾರತ ನಮ್ಮ ಸ್ನೇಹಿತ ಎಂದು ಟ್ರಂಪ್ ಬರೆಯುವ ಲವ್ ಲೆಟರ್ಗೆ (ಟ್ವೀಟ್) ಉತ್ತರ ಮಾತ್ರ ನೀಡುತ್ತಾ ಕುಳಿತಿದ್ದಾರೆ ಎಂಬ ಆಕ್ರೋಶ ನೆಟ್ಟಿಗರದ್ದಾಗಿದೆ.
ಅಮೇರಿಕಾದ ಜೊತೆ ಉತ್ತಮ ಸಂಬಂಧದ ಕಾರಣ ಭಾರತೀಯರಿಗೆ ಅನುಕೂಲವಾಗಿದೆ. ಸಾಧಾರಣ ಕುಟುಂಬದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಬಳಿಕ ಅಮೇರಿಕಾದಲ್ಲಿ ಉದ್ಯೋಗಕ್ಕೆ ತೆರಳು ಕುಟುಂಬವನ್ನು ಪೋಷಿಸುತ್ತಿದ್ದಾರೆ. ಇದರಿಂದ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಆದರೆ ಟ್ರಂಪ್ ನೂತನ ಆದೇಶದಿಂದ ಈ ಇಂಜಿನಿಯರ್‌ಗಳು ಕೆಲಸ ಕಳೆದುಕೊಂಡು ಭಾರತಕ್ಕೆ ವಾಪಸ್ ಬರಬೇಕಾದ ಅನಿವಾರ್ಯತೆ ಉಂಟಾಗಿರುವುದು ಆ ಕುಟುಂಬವನ್ನು ಸಂಕಷ್ಟಕ್ಕೆ ದೂಡಲಿದೆ. ಏಕೆಂದರೆ ಅಮೇರಿಕಾದಲ್ಲಿ ದೊರೆತಂತೆ ಉತ್ತಮ ಸಂಬಳ, ಉದ್ಯೋಗ ಭಾರತದಲ್ಲಿ ದೊರಕುವುದು ಕಷ್ಟ ಸಾಧ್ಯ.
ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಸಂಪೂರ್ಣವಾಗಿ ನೆಲಕಚ್ಚಿರುವುದಕ್ಕೆ ಇಂತಹ ಬೆಳವಣಿಗೆ ಸಾಕ್ಷಿಯಾಗಿದೆ. ಇದರ ಪರಿಣಾಮ ಜನಸಾಮಾನ್ಯರಿಗೆ ತಟ್ಟಲಾರಂಭಿಸಿದ್ದು, ಅವರ ಮಕ್ಕಳ ಭವಿಷ್ಯ ಮತ್ತು ಕನಸಿನ ಮೇಲೆ ಅಂಧಾಕಾರ ಕವಿಯುತ್ತಿರುಚ ಸತ್ಯವನ್ನು ಅರಿತುಕೊಳ್ಳಬೇಕೆಂದು ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು H-1B ವೀಸಾ ದಿಂದ ಭಾರತದ ಮೇಲೆ ಉಂಟಾಗಲಿರುವ ಪರಿಣಾಮವನ್ನು ವಿವರಿಸಿದ್ದಾರೆ.