ಬೆಂಗಳೂರು: ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ಅನೇಕ ವಿಚಾರಗಳ ಕುರಿತು ಸಮಗ್ರವಾಗಿ ಚರ್ಚೆ ಮಾಡಿದ್ದೇವೆ. ಮುಂದಿನ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ಪ್ರವಾಸ ಆಯೋಜಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಕೋರ್ ಕಮಿಟಿ ಸಭೆ ಕುರಿತು ವಿವರಿಸಿದರು. ಬಿಬಿಎಂಪಿ ಚುನಾವಣೆ, ಗ್ರೇಟರ್ ಬೆಂಗಳೂರು ಕುರಿತಂತೆ ಚರ್ಚೆ ನಡೆದಿದೆ ಎಂದರು.
ರಾಜ್ಯ ಸರಕಾರವು ಜಾತಿ ಜನಗಣತಿ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಇವೆಲ್ಲದರ ಕುರಿತು ಸಭೆ ಚರ್ಚೆ ನಡೆಸಿದೆ. ಕೋರ್ ಕಮಿಟಿ ಸದಸ್ಯರ ನೇತೃತ್ವದಲ್ಲಿ ಒಂದೊಂದು ತಂಡ ಮಾಡಲಿದ್ದೇವೆ. 3 ಅಥವಾ 4 ಜನರ ತಂಡ ರಚಿಸಲಾಗುವುದು. ಒಬ್ಬೊಬ್ಬ ಕೋರ್ ಕಮಿಟಿ ಸದಸ್ಯರಿಗೆ ಒಂದು ವಿಭಾಗದ ಜವಾಬ್ದಾರಿ ನೀಡುತ್ತೇವೆ. ನಮ್ಮ ಸಂಘಟನೆಯಲ್ಲಿ 3ರಿಂದ 4 ಜಿಲ್ಲೆಗಳು ಒಂದು ವಿಭಾಗದಡಿ ಬರುತ್ತವೆ. ರಾಜ್ಯದಲ್ಲಿ ನಮ್ಮ ಸಂಘಟನೆಯಡಿ 10 ವಿಭಾಗಗಳಿವೆ ಎಂದು ವಿವರ ನೀಡಿದರು.
ಜಿಲ್ಲೆಯ ಸಮಸ್ಯೆಗಳು, ಸ್ಥಳೀಯ ಸಂಸ್ಥೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವುದು, ಇವೆಲ್ಲದರ ಕುರಿತು ತಂಡವು ಗಮನಿಸಲಿದೆ. ಪ್ರವಾಸವನ್ನೂ ಮಾಡಲಿದೆ. ರಾಜ್ಯದಲ್ಲಿ ಇವತ್ತು ಅತಿವೃಷ್ಟಿ ಉಂಟಾಗಿದೆ. ರಾಜ್ಯ ಸರಕಾರ ನಿದ್ರೆ ಮಾಡುತ್ತಿದೆ. ಜಿಲ್ಲಾ ತಂಡಗಳು ಈಗಾಗಲೇ ಓಡಾಡಿವೆ ಎಂದು ತಿಳಿಸಿದರು.
ನಾನು, ಛಲವಾದಿ ನಾರಾಯಣಸ್ವಾಮಿ, ಪಕ್ಷದ ಇತರ ಮುಖಂಡರು, 3 ಮತ್ತು 4ರಂದು ರಾಯಚೂರು, ಗುಲ್ಬರ್ಗ ಜಿಲ್ಲಾ ಪ್ರವಾಸ ಮಾಡುತ್ತೇವೆ. ವಿಜಯಪುರ ಮತ್ತಿತರ ಜಿಲ್ಲೆಗಳ ಪ್ರವಾಸವನ್ನೂ ಆಯೋಜಿಸಲಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನಡುವೆ ಗೊಂದಲಗಳು ಹಲವಾರು ತಿಂಗಳುಗಳಿಂದ ನಡೆದಿವೆ. ಮೈಸೂರಿನಲ್ಲಿ ಕೆಲವು ತಿಂಗಳ ಹಿಂದೆ ಸಿದ್ದರಾಮಯ್ಯನವರು ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ಅಲ್ಲಿನ ವೇದಿಕೆಯಿಂದ ಡಿ.ಕೆ.ಶಿವಕುಮಾರ್ ಅವರು ಅಚಾನಕ್ಕಾಗಿ ಕೆಳಗಿಳಿದು ದೆಹಲಿಗೆ ದೌಡಾಯಿಸಿದ್ದನ್ನು ನೋಡಿದ್ದೀರಿ. ಆಡಳಿತ ಪಕ್ಷವಾದ ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಗೊಂದಲಗಳಿವೆ. ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆಯುತ್ತದೆ ಎಂದು ಕಾದು ನೋಡಬೇಕಿದೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.