ಬೆಂ.ಗ್ರಾಂ.ಜಿಲ್ಲೆ: ಹಿರಿಯ ನಾಗರಿಕರು (Senior citizens) ಅನುಭವದ ಗ್ರಂಥಗಳು ಅವರ ಜೊತೆ ಸಮಯ ಕಳೆಯಿರಿ ಅವರ ಆರೋಗ್ಯಕ್ಕೆ ಭದ್ರತೆ ಕೊಡಿ. ಹಿರಿಯರ ತ್ಯಾಗ ಪರಿಶ್ರಮದಿಂದ ಇಂದು ನಾವೆಲ್ಲರೂ ಸುಖ-ಸೌಕರ್ಯವನ್ನು ಅನುಭವಿಸುತ್ತಿದ್ದೇವೆ ಹಿರಿಯ ನಾಗರಿಕರನ್ನು ಪ್ರೀತಿಸಿ, ಗೌರವಿಸಿ ಅವರ ಆಶೀರ್ವಾದವನ್ನು ಪಡೆದು ಸಂತೋಷದ ವಾತಾವರಣ ನಿರ್ಮಿಸೋಣ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ (Syeda Aisha) ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ (Senior citizens) ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ (World Senior Citizens Day) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯರ ತ್ಯಾಗ ಸೇವೆ, ಜ್ಞಾನವನ್ನು ನೆನಪಿಸುವ ಮಹತ್ತರ ದಿನವಾಗಿದೆ. ಹಿರಿಯರು ನಮ್ಮ ಭೂತಕಾಲದ ನೆನಪುಗಳು ವರ್ತಮಾನದ ಆಸ್ತಿಗಳು ಮತ್ತು ಭವಿಷ್ಯದ ಪ್ರೇರಣೆ. ಅವರು ನಮ್ಮ ಸಮಾಜದ ಬೆನ್ನೆಲುಬು ತಮ್ಮ ಜೀವನವನ್ನು ಕುಟುಂಬ,ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಅರ್ಪಿಸಿದ್ದಾರೆ. ಹಿರಿಯರು ಸಂಸ್ಕೃತಿಯ ಸಾಗರ ಅನುಭವದ ವಿಶ್ವಕೋಶ. ಅವರ ಆಶೀರ್ವಾದವಿಲ್ಲದೆ ಯಾವ ಕುಟುಂಬ ಸಮೃದ್ಧಿ ಹೊಂದಲು ಸಾಧ್ಯವಿಲ್ಲ. ನಾವು ಹಿರಿಯರನ್ನು ಕೇವಲ ಕುಟುಂಬದ ಸದಸ್ಯರಾಗಿ ಕಾಣಬಾರದು ಅವರನ್ನು ಜ್ಞಾನಿಗಳಾಗಿ ಮಾರ್ಗದರ್ಶಕರಾಗಿ ಕಾಣಬೇಕು. ಅವರ ಪ್ರೀತಿ ಸಲಹೆ ಮಾರ್ಗದರ್ಶನಗಳು ನಮ್ಮ ಬದುಕಿಗೆ ದಾರಿ ತೋರುವ ದೀಪಗಳು ಎಂದರು.
1,12,236 ಜನ ಹಿರಿಯ ನಾಗರಿಕರು ಪಿಂಚಣಿ
ಜಿಲ್ಲೆಯಲ್ಲಿ 1,12,236 ಜನ ಹಿರಿಯ ನಾಗರಿಕರು ಪಿಂಚಣಿ ತೆಗೆದುಕೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರು ಓಡಾಡುವಾಗ ಕೆಲ ಸಂದರ್ಭದಲ್ಲಿ ಬಿದ್ದು ಪ್ರಾಣ ಹಾನಿಗಳು ಆಗಿವೆ ಕೆಲವರು ಕೈ ಕಾಲುಗಳನ್ನು ಕಳೆದು ಕೊಂಡಿದ್ದಾರೆ ಹೀಗೆ ಹಲವಾರು ರೀತಿ ಅನಾಹುತಗಳು ಆಗಿವೆ ಅದಕ್ಕಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗಲು ನಮ್ಮ ಊರುಗೋಲು ಎಂಬ ಕಾರ್ಯಕ್ರಮ ರೂಪಿಸಿ ಅದರಲ್ಲಿ 5000 ಹಿರಿಯ ನಾಗರಿಕರಿಗೆ ಊರಗೋಲನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ ಹಿರಿಯ ನಾಗರಿಕರು ಅನುಭವದಿಂದ ಪಾಠ ಕಲಿತಿರುತ್ತಾರೆ. ಹಿರಿಯರು ಹೇಳುವ ಕಥೆಯಲ್ಲಿ ನೈತಿಕತೆಯ ಸಾರಂಶ, ನೀತಿ ಪಾಠ ತುಂಬಿರುತ್ತದೆ. ಅವರು ಮಾನಸಿಕವಾಗಿ ಸಧೃಡರಾಗಿರುತ್ತಾರೆ. ಅವರು ವಿದ್ಯಾಭ್ಯಾಸ ಮಾಡಿರದಿದ್ದರು ಔಷಧೋಪಚಾರದ ಅರಿವಿರುತ್ತಿತ್ತು. ಅವರ ಅನುಭವದ ಸಾಮರ್ಥ್ಯ ಬಹಳ ದೊಡ್ಡದು ಹಾಗಾಗಿ ಅವರ ಮಾತನ್ನು ಕೇಳಬೇಕು. ಇಂದು ನಾನು ಅಧಿಕಾರಿಯಾಗಿ ಕೆಲಸ ನಿರ್ವಹಿಸಲು ಕಾರಣ ಹಿರಿಯರು ಎಂದು ನೆನಪಿಸಿಕೊಂಡರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೆಲಮಂಗಲ ತಾಲ್ಲೂಕಿನ ಎಂ.ಆರ್. ರುದ್ರೇಶ್ ವಯಸ್ಸು 69 ಪೋಲಿಸ್ ಇಲಾಖೆಯಲ್ಲಿ ಎ.ಎಸ್.ಐ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ, ಹೊಸಕೋಟೆಯ ಕೃಷ್ಣಮೂರ್ತಿ ವಯಸ್ಸು 87 ಇವರು 31 ವರ್ಷಗಳ ಕಾಲ ಅರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಹಿರಿಯ ಆರೋಗ್ಯ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದಾರೆ, ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಚ್ ಹನುಮಂತರಾಯಪ್ಪ ವಯಸ್ಸು 90 ನಿವೃತ್ತ ಗಾಮ ಲೆಕ್ಕಾಧಿಕಾರಿಗಳು, ದೇವನಹಳ್ಳಿ ತಾಲ್ಲೂಕಿನ ರಮೇಶ್ ವಯಸ್ಸು 61 ಕಲಾವಿದರು ಇವರುಗಳಿಗೆ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ನೀಡಿದರು. ಜೊತೆಗೆ ಬ್ಯಾಪ್ಟಿಸ್ಟ್ ಆಸ್ಪತ್ರೆಯವರ ವತಿಯಿಂದ ಇಬ್ಬರು ಅಂಗವಿಕಲರಿಗೆ ಕೃತಕ ಕಾಲುಗಳನ್ನು ನೀಡಲಾಯಿತು
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸತೀಶ್ ಪಾಣಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕರ ಮುದ್ದಣ ಎಂ, ಹಾಗೂ ಇಲಾಖೆ ಅಧಿಕಾರಿ ಜಗದೀಶ್ ಎನ್. ಎಂ, ಹಿರಿಯ ನಾಗರಿಕರ ನಿವೃತ್ತ ಸಂಘದ ಕಾರ್ಯದರ್ಶಿ ಪ್ರಭಾಕರ್ ಹಾಗೂ ಜಿಲ್ಲೆಯ ಹಿರಿಯ ನಾಗರಿಕರು ಉಪಸ್ಥಿತರಿದ್ದರು.