ಬೆಂಗಳೂರು: ಗೆಳತಿಗೆ ಅಶ್ಲೀಲ ಸಂದೇಶ ಕಳಹಿಸಿದ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ನಟ ದರ್ಶನ್ (Darshan) ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹತ್ಯೆ ಆರೋಪದ ಬೆನ್ನಲ್ಲೇ ಕೆಲ ಖಾಸಗಿ ಸುದ್ದಿವಾಹಿನಿಗಳು ದರ್ಶನ್ ವಿರುದ್ಧ ಮಾಡಿದ ವರದಿ, ಹೈಕೋರ್ಟ್ ನೀಡಿದ್ದ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ದರ್ಶನ್ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಗಾಗುವಂತೆ ಮಾಡಿರುವ ಹಿಂದೆ ಕೆಲ ಪ್ರಭಾವಿಗಳ ಹುನ್ನಾರ ಅಡಗಿದೆ ಎಂಬ ಅನುಮಾನ ದರ್ಶನ್ ಅಭಿಮಾನಿಗಳದ್ದಾಗಿದೆ.
ಇದರ ಬೆನ್ನಲ್ಲೇ ಇಂದು ಮತ್ತೆ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರನ್ನು ಮತ್ತಷ್ಟು ತೊಂದರೆಗೆ ಸಿಲುಕಿಸಲು ಕಿಡಿಗೇಡಿಗಳು ಕರಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಈ ಕುರಿತಂತೆ ದರ್ಶನ್ ಅಭಿಮಾನಿಗಳು ಸ್ಪಷ್ಟನೆ ನೀಡಿದ್ದು, ಈ ಕರಪತ್ರ ಕಿಡಿಗೇಡಿಗಳ ಕೃತ್ಯ ಎಂದು ಪೋಸ್ಟ್ ಮಾಡಿದ್ದಾರೆ.
ವೈರಲ್ ಆಗುತ್ತಿರುವ ಪತ್ರದಲ್ಲಿ ದರ್ಶನ್ ಅಭಿಮಾನಿಗಳ ಹೆಸರನ್ನು ದುರುಪಯೋಗ ಪಡಿಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗಿದೆ. ಅಲ್ಲದೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ದರ್ಶನ್ ವಿರುದ್ಧ ಎತ್ತಿಕಟ್ಟುವ ಹುನ್ನಾರ ಮಾಡಿದ್ದಾರೆ ಎಂಬುದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತಂತೆ ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡುತ್ತಿದ್ದು, ದರ್ಶನ್ ಅವರ ಹೆಸರನ್ನು ಕೆಲವು ಕಿಡಿಗೇಡಿಗಳು ದುರ್ಬಳಕೆ ಮಾಡುತ್ತಿದ್ದಾರೆ. ದರ್ಶನ್ ಅವರ ಅಧಿಕೃತ ಯಾವ ಸಂಘವಾಗಲಿ, ವ್ಯಕ್ತಿಯಾಗಲಿ ಯಾವುದೇ ಪ್ರಕಟಣೆ ನೀಡಿರುವುದಿಲ್ಲ.
ದರ್ಶನ್ ಅವರ ಹೆಸರಿಗೆ ಧಕ್ಕೆ ತರಲು, ಯಾರೋ ಮಾಡಿರುವ ಹುನ್ನಾರವಿದು.
ಡಿ ಬಾಸ್ ಅಭಿಮಾನಿಗಳ ಗಮನಕ್ಕೆ: ದರ್ಶನ್ ಸರ್ ಕುಟುಂಬ ನೀಡುವ ಮಾಹಿತಿ ಮಾತ್ರ ಅಧಿಕೃತ, ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡಬೇಡಿ, ನಮಗೆ ಯಾವುದೇ ರಾಜಕೀಯ ಬೇಕಿಲ್ಲ, ನಮಗೆ ಕಾನೂನಿನ ಮೇಲೆ ಸಂಪೂರ್ಣ ಗೌರವವಿದೆ ದರ್ಶನ್ ಅಣ್ಣನಿಗೆ ಒಳ್ಳೆಯದಾಗಲಿ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.