ಬೆಂಗಳೂರು: ಮೈಸೂರಿನಲ್ಲಿ ದಸರಾ ಸಂಭ್ರಮಾಚರಣೆಯ ಸಮಯದಲ್ಲೇ ಬಾಲಕಿಯ ಅತ್ಯಾಚಾರವಾಗುವುದನ್ನು ತಡೆಗಟ್ಟಲು ಪೊಲೀಸರಿಗೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಆಕ್ರೋಶ ಹೊರಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಬಲೂನ್ ಮಾರುತ್ತಿದ್ದ ಕುಟುಂಬದ ಬಾಲಕಿಯ ಅತ್ಯಾಚಾರವಾಗಿರುವುದು ದೊಡ್ಡ ದುರಂತ. ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ಸೋತಿದೆ. ರಾಜ್ಯದಲ್ಲಿ ಮಕ್ಕಳು ನಿರ್ಭೀತಿಯಿಂದ ಓಡಾಡುವ ಪರಿಸ್ಥಿತಿ ಇಲ್ಲ. ಇಷ್ಟೆಲ್ಲ ಆದರೂ ರಾತ್ರಿ ಪೊಲೀಸರು ಎಲ್ಲಿ ಬೀಟ್ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇದರ ಬಗ್ಗೆ ಮಾತೇ ಆಡಿಲ್ಲ ಎಂದರು.
ಮೈಸೂರಿನಲ್ಲಿ ದಸರಾ ಸಮಯದಲ್ಲಿ ನಾಲ್ಕೈದು ಜಿಲ್ಲೆಗಳ ಪೊಲೀಸರನ್ನು ನಿಯೋಜಿಸಲಾಗಿತ್ತು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯಲ್ಲಿ ರಸ್ತೆ ಗುಂಡಿ ಕಂಡುಹಿಡಿಯಲು ಸಾಧ್ಯವಾಗುತ್ತದೆ. ಆದರೆ ಅತ್ಯಾಚಾರವಾಗುವುದನ್ನು ತಡೆಯುವುದು ಸಾಧ್ಯವಾಗುವುದಿಲ್ಲ.
ಸಿಎಂ ಸಿದ್ದರಾಮಯ್ಯ ತಮ್ಮ ತವರು ಜಿಲ್ಲೆಯಲ್ಲಿ ವಿಜೃಂಭಣೆಯಿಂದ ದಸರಾ ಮಾಡಿದ್ದಾರೆ. ಆದರೆ ದಸರಾ ಸಂದರ್ಭದಲ್ಲೇ ಇಂತಹ ದುರಂತ ನಡೆದಿದೆ. ಪರಪ್ಪನ ಅಗ್ರಹಾರದೊಳಗೆ ಬರ್ತ್ಡೇ ಪಾರ್ಟಿ ನಡೆಯುತ್ತದೆ. ಜೈಲಿನೊಳಗೆ ಮಾದಕ ವಸ್ತುಗಳು ಪೂರೈಕೆಯಾಗುತ್ತದೆ. ಕಾನೂನು ವ್ಯವಸ್ಥೆ ಇಷ್ಟು ಅಧೋಗತಿಗೆ ಹೋಗಿದೆ ಎಂದರು.
ಬಿಹಾರ ಚುನಾವಣೆಗೆ ಹಣ ಬಳಕೆ
ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಚಿನ್ನದ ಗಟ್ಟಿಗಳನ್ನು ಹಾಗೂ 300 ಕೋಟಿ ರೂ. ಗೂ ಅಧಿಕ ಹಣವನ್ನು ಬಿಹಾರ ಚುನಾವಣೆಗೆ ಕಳುಹಿಸಿದ್ದಾರೆ. ಕರ್ನಾಟಕ ಎಂದರೆ ಕಾಂಗ್ರೆಸ್ನ ಎಟಿಎಂ ಆಗಿದೆ. ಯಾವ ಶಾಸಕರು ಎಷ್ಟು ಹಣ ಕೊಡುತ್ತಾರೋ ಎಂದು ಲೆಕ್ಕಹಾಕಿ ಅಂತಹವರಿಗೆ ಸ್ಥಾನಮಾನ ನೀಡಲಾಗುತ್ತದೆ. ಪ್ರತಿ ಇಲಾಖೆಯಲ್ಲಿ ಎಷ್ಟು ಪ್ರಮಾಣದ ಹಗರಣ ನಡೆಯುತ್ತಿದೆ ಎಂದು ಉದ್ಯಮಿ ಮೋಹನ್ದಾಸ್ ಪೈ ಹೇಳಿದ್ದಾರೆ ಎಂದರು.
ಪ್ರವಾಹ ಹಾನಿ ಪರಿಹಾರವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರದಿಂದ ಎಷ್ಟು ಪರಿಹಾರ ನೀಡಲಾಗಿದೆ ಎಂದು ತಿಳಿಸಲಿ. ಬಜೆಟ್ಗೆ ಹೋಲಿಸುವುದಾದರೆ ಈಗಿನ ಸರ್ಕಾರ ಅತಿ ಹೆಚ್ಚು ಪರಿಹಾರ ನೀಡಬೇಕಾಗುತ್ತದೆ ಎಂದರು.
ಸಿಎಂ ಬದಲಾವಣೆ ಆಗುವುದು ಖಚಿತ. ಅದನ್ನು ಕಾಂಗ್ರೆಸ್ನ ಶಾಸಕರೇ ಹೇಳುತ್ತಿದ್ದಾರೆ. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕೂಡ ಆ ಬಗ್ಗೆ ಮಾತಾಡಿದ್ದಾರೆ. ನವೆಂಬರ್ ಕ್ರಾಂತಿಯ ಕಾರಣಕ್ಕಾಗಿಯೇ ಸಿಎಂ ಸಿದ್ದರಾಮಯ್ಯ ತರಾತುರಿಯಲ್ಲಿ ಜಾತಿ ಸಮೀಕ್ಷೆ ಮಾಡಿಸುತ್ತಿದ್ದಾರೆ ಎಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಯನ್ನು ನಾನು ಬಹಿಷ್ಕರಿಸುತ್ತೇನೆ. ಆದರೆ ವೋಟ್ ಚೋರಿ ಎಂಬ ಕಾಂಗ್ರೆಸ್ ಕೂಡ ಬಿಹಾರ ಚುನಾವಣೆಯನ್ನು ಬಹಿಷ್ಕಾರ ಮಾಡಲಿ. ಜಿಬಿಎದಲ್ಲಿ ಮೇಯರ್ಗೆ ಅಧಿಕಾರ ನೀಡದೆ, ಸಿಎಂಗೆ ಎಲ್ಲವನ್ನೂ ನೀಡಲಾಗಿದೆ.
ಪಾಲಿಕೆಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಇದು ಅಧಿಕಾರ ವಿಕೇಂದ್ರೀಕರಣ ಅಲ್ಲ, ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಅಭಿವೃದ್ಧಿ ಬಗ್ಗೆ ಮಾತಾಡುವುದಾದರೆ, ರಸ್ತೆ ಗುಂಡಿಗಳನ್ನು ಮುಚ್ಚಿಸಲಿ.
ಮಳೆ ಬಂದು ರಸ್ತೆಯಲ್ಲಿ ನೀರು ತುಂಬಿದ್ದರೆ ಅದರ ಮೇಲೆ ಡಾಂಬರು ಹಾಕುತ್ತಾರೆ. ಇಂತಹ ತಂತ್ರಜ್ಞಾನ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ತರಲು ಸಾಧ್ಯ. ಡಾಂಬರು ಬಿಸಿಯಾಗಿಯೇ ಇರಬೇಕು. ಕೋಲ್ಡ್ ಟಾರ್ ಬಗ್ಗ ನನಗೂ ತಿಳಿದಿದೆ. ಆದರೆ ನೀರು ನಿಂತಲ್ಲಿ ಇದನ್ನು ಹಾಕಲು ಸಾಧ್ಯವಿಲ್ಲ. ಆದರೂ ಅದು ತಾತ್ಕಾಲಿಕ ಎಂದರು.