ದೊಡ್ಡಬಳ್ಳಾಪುರ: ಬೆಳಕಿನ ಹಬ್ಬವಾದ ದೀಪಾವಳಿಯನ್ನು ಪರಿಸರಸ್ನೇಹಿಯಾಗಿ (Eco-friendly Deepavali) ಆಚರಿಸುವಂತೆ ಕರೆ ನೀಡಿ, ತಾಲೂಕಿನ ಪ್ರತಿಷ್ಠಿತ ಎಂ.ಎಸ್.ವಿ ಪಬ್ಲಿಕ್ ಶಾಲೆಯ (MSV Public School) ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ “ಪರಿಸರ ಸ್ನೇಹಿ ದೀಪಾವಳಿ – ಜಾಗೃತಿ ಜಾಥಾ” ನಡೆಸಿದರು.
ಶಾಲೆಯ ಅಧ್ಯಕ್ಷ ಸುಬ್ರಮಣ್ಯ ಜಾಗೃತಿ ಜಾಥಾಗೆ ಚಾಲನೆ ನೀಡಿದ ಬಳಿಕ ಮಾತನಾಡಿ, “ದೀಪಾವಳಿ ಬೆಳಕಿನ ಹಬ್ಬ. ಕತ್ತಲೆಯ ಮೇಲೆ ಬೆಳಕಿನ ವಿಜಯ, ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಂಕೇತಿಸುತ್ತದೆ.

ಇದು ಹಿಂದೂ, ಜೈನ್, ಸಿಖ್ ಮತ್ತು ಬೌದ್ಧ ಧರ್ಮಗಳಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬವಾಗಿದೆ. ಆದರೂ ಪ್ರತಿಯೊಂದು ಧರ್ಮದಲ್ಲೂ ವಿಭಿನ್ನ ಕಥೆಗಳನ್ನು ಒಳಗೊಂಡಿದೆ. ಈ ಹಬ್ಬದಂದು ಮನೆಗಳನ್ನು ದೀಪಗಳು ಮತ್ತು ರಂಗೋಲಿಗಳಿಂದ ಅಲಂಕರಿಸಲಾಗುತ್ತದೆ. ಹೊಸ ಬಟ್ಟೆಗಳನ್ನು ಧರಿಸಲಾಗುತ್ತದೆ ಮತ್ತು ಸಿಹಿ ತಿಂಡಿಗಳನ್ನು ಹಂಚಿಕೊಳ್ಳಲಾಗುತ್ತದೆ.
“ದೀಪಾವಳಿ” ಎಂಬ ಸಂಸ್ಕೃತ ಪದವು ದೀಪ ಮತ್ತು ಅವಳಿ ಎಂಬ ಪದಗಳಿಂದ ಬಂದಿದೆ. ಇದರರ್ಥ “ದೀಪಗಳ ಸಾಲು”. ಇದು ವಿಕ್ರಮಶಕದ ವರ್ಷದ ಕೊನೆಯಲ್ಲಿ ಆಚರಿಸಲಾಗುವ ಕಾರಣ, ಉತ್ತರ ಭಾರತದಲ್ಲಿ ಇದನ್ನು ಹೊಸ ವರ್ಷದ ಹಬ್ಬವಾಗಿಯೂ ಆಚರಿಸುತ್ತಾರೆ” ಎಂದು ತಿಳಿಸಿದರು.
ಪ್ರಾಂಶುಪಾಲರಾದ ರೆಮ್ಯ ಬಿ ವಿ ಮಾತನಾಡಿ, “ದೀಪಾವಳಿ ಹಬ್ಬದ ಪ್ರಯುಕ್ತ ಜನರು ದೀಪಗಳನ್ನು ಹಚ್ಚಿ ಆಚರಿಸಬೇಕು. ಪಟಾಕಿಗಳನ್ನು ಹಚ್ಚಬಾರದು ಎಂಬ ಸಂದೇಶವನ್ನು ಸಾರುವ ಸಲುವಾಗಿ ನಮ್ಮ ಶಾಲೆಯ 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಜಾಥಾವನ್ನು ಹಮ್ಮಿಕೊಂಡಿದ್ದು, ಜನತೆ ಇದಕ್ಕೆ ಸ್ಪಂದಿಸಿ ಪರಿಸರ ಸ್ನೇಹಿ ದೀಪಾವಳಿಯ ಆಚರಣೆ ಮಾಡಬೇಕೆಂದು” ತಿಳಿಸಿದರು.
ಎಂ ಎಸ್‌ವಿ ಪಬ್ಲಿಕ್ ಶಾಲೆಯಿಂದ ಆರಂಭವಾದ ಜಾಗೃತಿ ಜಾಥಾ, ಮಾರ್ಕೆಟ್ ಸ್ಕೂಲ್ ಮಾರ್ಗದಲ್ಲಿ ತಾಲ್ಲೂಕು ಕಛೇರಿಯವರೆಗೂ ಸಾಗಿ, ಮಕ್ಕಳು ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗಿದರು.
ಪಟಾಕಿ ಹಚ್ಚುವುದರಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಿದರು. ಬಹುಮುಖ್ಯವಾಗಿ ಪಶುಪಕ್ಷಿ ಸಂಕುಲಕ್ಕೆ ಮಾರಕವಾದ ಪಟಾಕಿಗಳನ್ನು ತ್ಯಜಿಸಿ, ಹಣತೆಯ ಬೆಳಕಿನಿಂದ ನಮ್ಮ ಮನೆ ಮನಗಳನ್ನು ಬೆಳಗೋಣ ಎಂಬ ಸಂದೇಶವನ್ನು ನೀಡಿದರು.

ತಾಲೂಕು ಕಚೇರಿ ಬಳಿ ಶಿಕ್ಷಕರು ಮಕ್ಕಳಿಗೆ ಪ್ರತಿಜ್ಞಾ ವಚನ ಬೋಧಿಸಿದರು.
ಈ ವೇಳೆ ಸಾರ್ವಜನಿಕರಿಗೆ ಪರಿಸರ ಸ್ನೇಹಿ ದೀಪಾವಳಿಯ ಆಚರಣೆಯ ಮಹತ್ವದ ಕುರಿತಾದ ಕರಪತ್ರಗಳನ್ನು ವಿತರಿಸಿಲಾಯಿತು.
