ದೊಡ್ಡಬಳ್ಳಾಪುರ; ಜಾನಪದ ಕಲಾ ಪ್ರತಿಭೆಗಳನ್ನು ಪ್ರದರ್ಶಿಸಲು ಯುವಜನೋತ್ಸವ ಕಾರ್ಯಕ್ರಮ ಅತ್ಯಂತ ಅನುಕೂಲವಾಗಿವೆ. ಯುವ ಜನತೆ ಎಲ್ಲಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿ ಮುಂದಿನ ಯುವಪೀಳಿಗೆಗೂ ಪ್ರೇರಣೆಯಾಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಓ ಡಾ.ಕೆ.ಎನ್. ಅನುರಾಧ (CEO Dr. K.N. Anuradha) ಅವರು ತಿಳಿಸಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರು ಉತ್ತರ ವಿಶ್ವ ವಿದ್ಯಾನಿಲಯ ಟಮಕ ಕೋಲಾರ, ನೆಹರು ಯುವ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ದೊಡ್ಡಬಳ್ಳಾಪುರ ಇವರ ಸಹಯೋಗದೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕಲೆಗಳ ಬಗ್ಗೆ ಜನರಿಗೆ ಆತ್ಮ ವಿಶ್ವಾಸ ಕುಂದುತ್ತಿದೆ. ಮಕ್ಕಳು ಮತ್ತು ಯುವಜನರು ಮೊಬೈಲ್ ನ್ನು ಬದಿಗಿಟ್ಟು, ಶಿಕ್ಷಣಕ್ಕೆ ಪ್ರಧಾನ ಅದ್ಯತೆ ನೀಡಬೇಕು. ಅದರಲ್ಲೂ ಯುವ ಸಮೂಹದವರೂ ಶಿಕ್ಷಣ, ವಿವಿಧ ವೃತ್ತಿಪರ ಕೋರ್ಸ್ ಗಳೊಂದಿಗೆ ನಮ್ಮ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಜಾನಪದ ಕಲೆಗಳನ್ನು ಬೆಳೆಸುವಲ್ಲಿ ಮುಂದಾಗಬೇಕು.
ಈ ರೀತಿಯ ಕಾರ್ಯಕ್ರಮಗಳು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಮ್ಮ ಜಾನಪದ ಕಲೆ, ಸಂಸ್ಕೃತಿಯನ್ನು ದೇಶವ್ಯಾಪಿ ಪ್ರಚುರಪಡಿಸಲು ಯುವ ಪೀಳಿಗೆ ಶ್ರಮ ವಹಿಸಬೇಕು.
ನಿಮ್ಮ ಮುಂದಿನ ಭವಿಷ್ಯವನ್ನು ಮೊಬೈಲ್ ನೋಡುವುದರಿಂದ ವ್ಯರ್ಥ ಮಾಡದೆ, ಪ್ರತಿ ಗ್ರಾಮದಲ್ಲಿರುವ ಅರಿವು (ಗ್ರಂಥಾಲಯಗಳು) ಕೇಂದ್ರಗಳ ಪ್ರಯೋಜನ ಪಡೆದುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಿ ಎಂದರು.
ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರು ಸ್ಪರ್ಧೆಗಳು ಮತ್ತು ವಿಜ್ಞಾನ ಮೇಳವನ್ನು ವೀಕ್ಷಿಸಿ ಸ್ಪರ್ಧಾರ್ಥಿಗಳಿಗೆ ಶುಭಕೋರಿದರು.
ಕಾರ್ಯಕ್ರಮದಲ್ಲಿ ಜಾನಪದ ಗೀತೆ, ನೃತ್ಯ, ಚಿತ್ರಕಲೆ ಹಾಗೂ ಕವಿತೆ ಬರೆಯುವ ಸ್ಪರ್ಧೆ ಮತ್ತು ವಿಜ್ಞಾನ ಮೇಳ ಸೇರಿದಂತೆ ಇತರೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸುಮಾರು 100 ಜನ ಸ್ಪರ್ಧಿಗಳು ಭಾಗವಹಿಸಿದ್ದರು, ವಿಜೇತರಿಗೆ ಮತ್ತು ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದವರಿಗೆ ರಾಜ್ಯ ಮಟ್ಟಕ್ಕೆ ಕಳುಹಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಟಿ.ಜಯಲಕ್ಷ್ಮೀ , ದೊಡ್ಡಬಳ್ಳಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸದಾಶಿವ ರಾಮಚಂದ್ರಗೌಡ, ಜಾನಪದ ವಿದ್ವಾಂಸರಾದ ಗುರುವ ಬಸವರಾಜು, ಗಾಯಕ ಮೋಹನ್ ಕುಮಾರ್, ನೆಹರು ಯುವ ಕೇಂದ್ರದ ಸಹಾಯಕ ನಿರ್ದೇಶಕರು ಶ್ರೀವಾಣಿ ಸೇರಿದಂತೆ ಶಿಕ್ಷಕರು ಮತ್ತು ಸ್ಪರ್ಧಾರ್ತಿಗಳು ಉಪಸ್ಥಿತರಿದ್ದರು.