ದೊಡ್ಡಬಳ್ಳಾಪುರ: ಲೋಕಸಭೆ ಚುನಾವಣೆಯಲ್ಲಿ ವೋಟ್ ಚೋರಿ (Vote Chori) ನಡೆದಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಚುನಾವಣೆ ಆಯೋಗ ವಿರುದ್ಧ ಗಂಭೀರ ಆರೋಪ ಮಾಡಿರುವುದು ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.

ಇದರ ಬೆನ್ನಲ್ಲೇ ಕಾರ್ಯನಿರತ ಪತ್ರಕರ್ತರ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪತ್ರಕರ್ತರ ಸಂಘದ ಚುನಾವಣೆಯಲ್ಲಿಯೂ (Journalists’ Association elections..!) ವೋಟ್ ಚೋರಿ ನಡೆಯುತ್ತಿದೆ ಎಂಬಂತೆ ಆರೋಪಿಸಿ ಕಾರ್ಯ ನಿರತ ಪತ್ರಕರ್ತರ ಸಂಘದ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಚಂದ್ರಶೇಖರ ಡಿ ಚುನಾವಣೆ ಅಧಿಕಾರಿಗೆ ದೂರು ನೀಡಿದ್ದಾರೆ.
ಚಂದ್ರಶೇಖರ್.ಡಿ ನೀಡಿರುವ ದೂರಿನ ಅನ್ವಯ ದೊಡ್ಡಬಳ್ಳಾಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷನಾದ ನನ್ನ ಗಮನಕ್ಕೆ ಬಾರದಂತೆ, ಪತ್ರಕರ್ತರಲ್ಲದ, ಕನಿಷ್ಠ ಕಾರ್ಯನಿರತ ಪತ್ರಕರ್ತರಿಗೆ ಪರಿಚಯವೂ ಇಲ್ಲದಂತಹ ಅನಾಮಿಕರು ಒಂದಿಷ್ಟು ಜನ ಅಕ್ರಮವಾಗಿ. ಪತ್ರಕರ್ತರ ಹೆಸರಿನಲ್ಲಿ ಗುರುತಿನ ಚೀಟಿಪಡೆದಿದ್ದಾರೆ.

ಇವರುಗಳು ನವೆಂಬರ್09 ರಂದು ನಡೆಯಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಮತದಾನ ಮಾಡುವ ಉದ್ದೇಶದಿಂದ ಅಡ್ಡದಾರಿಯಲ್ಲಿ ಗುರುತಿನಚೀಟಿ ಗಿಟ್ಟಿಸಿಕೊಂಡಿರುವ ಈ ನಕಲೀಗಳು ಎಂದು ಆರೋಪಿಸಿದ್ದಾರೆ.
ಅಲ್ಲದೆ ಮತಚಲಾಯಿಸಲು ಹುನ್ನಾರ ನಡೆಸುತ್ತಿದ್ದು, ಇವರಿಗೆ ಈ ಚುನಾವಣೆಯಲ್ಲಿ ಮತಚಲಾಯಿಸಲು ಅವಕಾಶ ನೀಡದೆ ಪಾರದರ್ಶಕ ಚುನಾವಣೆ ನಡೆಸಿಕೊಡುವಂತೆ ಮನವಿ ಮಾಡಿದ್ದಾರೆ.
ಶತಮಾನದತ್ತ ದಾಪುಗಾಲಿಡುತ್ತಿರುವ ಅಂದರೆ 1932 ದಶಕಗಳ ಹಿಂದೆ ರಾಜ್ಯದ ಡಿ.ವಿ.ಗುಂಡಪ್ಪ ಅವರು ಸ್ಥಾಪಿಸಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ)ಗೆ ವಂಚನೆ ಮಾಡುತ್ತಿದ್ದಾರೆ.
ಪತ್ರಕರ್ತರ ಗುರುತಿನಚೀಟಿ ಪಡೆದಿರುವ ಇವರ ವಿದ್ಯಾಭ್ಯಾಸ, ಮಾದ್ಯಮ ಕ್ಷೇತ್ರದಲ್ಲಿನ ಅನುಭವ, ಇವರ ವೃತ್ತಿ? ಅಕ್ರಮವಾಗಿ ಪತ್ರಕರ್ತರ ಹೆಸರಿನಲ್ಲಿ ಗುರುತಿನ ಚೀಟಿ ಪಡೆದಿದ್ದು ಯಾವ ಕಾರಣಕ್ಕಾಗಿ? ಇವರಿಗೆ ಗುರುತಿನ ಚೀಟಿ ನೀಡಿದವರು ಯಾರು? ಇವರು ಗುರುತಿನ ಚೀಟಿಪಡೆದ ಉದ್ದೇಶವೇನು? ಎಂದು ಇವರನ್ನು ವಿಚಾರಣೆಗೆ ಒಳಪಡಿಸಿ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವಂಚನೆ ಮಾಡಿರುವವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಕೋರಿದ್ದಾರೆ.
ಅಕ್ರಮವಾಗಿ ಪಡೆದುಕೊಂಡಿರುವ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡು, ಸಾಮಾಜಿಕ ಕಾಳಜಿಯೊಂದಿಗೆ ಸೇವಾಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನೈಜ ಕಾರ್ಯನಿರತ ಪತ್ರಕರ್ತರಿಗೆ ಸಮಾಜದಲ್ಲಿ ಗೌರವ ಉಳಿಸಿಕೊಡುವಂತೆ ಮನವಿ ಮಾಡಿದ್ದಾರೆ.