ವಿಜಯಪುರ: ಕಬ್ಬು ಕಾರ್ಖಾನೆಗಳು ಹಾಗೂ ರಾಜ್ಯ ಸರಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ (Farmers’ protest) ಬುಧವಾರ 7ನೇ ದಿನಕ್ಕೆ ಕಾಲಿಟ್ಟಿದೆ.
ತೀವ್ರ ಸ್ವರೂಪ ಪಡೆದ ಪ್ರತಿಭಟನೆಗೆ ಸಾಕ್ಷಿಯಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಮೇಲೆ ರೈತರು ಕಲ್ಲು ತೂರಾಟ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರೊಬ್ಬರು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರ ನಂತರ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದೆ. ಗುರ್ಲಾಪುರದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೇಯಂದ್ರ ಭಾಗವಹಿಸಿ, ರೈತರಿಗೆ ಬೆಂಬಲ ನೀಡಿದ್ದಾರೆ.
ಬೆಳಗಾವಿಯ ಜಿಲ್ಲೆಯ ಬಹುತೇಕ ತಾಲೂಕುಗಳಿಗೆ ಪ್ರತಿಭಟನೆ ವ್ಯಾಪಿಸಿದೆ. ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ನ್ಯಾಯವಾದಿಗಳು ಮಾನವ ಸರಪಳಿ ನಿರ್ಮಿಸಿ ರೈತರಿಗೆ ಬೆಂಬಲ ಘೋಷಿಸಿದ್ದಾರೆ. ಅಥಣಿ ತಾಲೂಕಿನಲ್ಲಿ ಕನ್ನಡಪರ ಸಂಘಟನೆಗಳು ರೈತರನ್ನು ಬೆಂಬಲಿಸಿ ಪಟ್ಟಣ ಬಂದ್ ಮಾಡಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.
ಗೋಕಾಕ್ ಅಥಣಿ ರಸ್ತೆ ವಿವಿಧ ಸ್ಥಳಗಳಲ್ಲಿ ಬಂದ್ ಮಾಡಲಾಗಿದೆ. ದರೂರ ಸೇತುವೆ ಮೇಲಿನ ಸಂಚಾರ ಬಂದ್ ಮಾಡಿ ರೈತರು ಪ್ರತಿಭಟನೆ ನಡೆಸುತ್ತಿದ್ದು ವಾಹನ ಸವಾರರು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲದೆ ಬೈಲಹೊಂಗಲ, ಸವದತ್ತಿ, ಯರಗಟ್ಟಿ, ಹುಕ್ಕೇರಿ, ಗೋಕಾ ಕ್, ರಾಮದುರ್ಗ ಸೇರಿದಂತೆ ಬೆಳಗಾವಿಗೆ ಹೊಂದಿಕೊಂಡ ಉತ್ತರ ಕನ್ನಡ, ವಿಜಯಪುರ, ಬಾಗಲ ಕೋಟೆ ಗಡಿ ಭಾಗದಲ್ಲಿ ರೈತರ ಪ್ರತಿಭಟನೆ ಕಿಚ್ಚು ವ್ಯಾಪಿಸಿದೆ.
ಇನ್ನು ಅಥಣಿಯಲ್ಲಿ ಪ್ರತಿಭಟನೆ ನಡೆಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಮಹಾದೇವ ಮಡಿವಾಳ, ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಕೆಲವು ಕಡೆ ಹೆದ್ದಾರಿ ಬಂದ್ ಆಗಿರುವ ಕಾರಣ ಬೆಳಗಾವಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಬೇಡಿಕೆಗಳೇನು?
- ಮಹಾರಾಷ್ಟ್ರದಲ್ಲಿ ಟನ್ ಕಬ್ಬಿಗೆ 3600 ರು. ಬೆಲೆಯಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಬೆಲೆ ಹೆಚ್ಚಳವಾಗಬೇಕು.
- ಕಬ್ಬಿನ ಕಾರ್ಖಾನೆಗಳೇ ಸ್ವತಃ ಕಬ್ಬನ್ನು ಕಟಾವು ಮಾಡಿಕೊಳ್ಳಬೇಕು.
- ಕಾರ್ಖಾನೆಯಲ್ಲಿನ ಡಿಜಿಟಲ್ ತೂಕ ಯಂತ್ರದಲ್ಲಾಗುತ್ತಿರುವ ಮೋಸ ನಿಲ್ಲಬೇಕು.
- ಕಬ್ಬನ್ನು ನುರಿದಾಗ ಸಿಗುವ ಉಪ ಉತ್ಪನ್ನ ಗಳಲ್ಲೂ ರೈತರಿಗೆ ಸೂಕ್ತ ಹಣ ಸಿಗಬೇಕು.
- ಕಬ್ಬು ಹಂಗಾಮು ಆರಂಭಕ್ಕೆ ಮುನ್ನವೇ ಸೂಕ್ತ ದರ ನಿಗದಿಯಾಗಬೇಕು.
- ರೈತರಿಗೆ ಸರಕಾರದಿಂದ ಅಗತ್ಯ ನೆರವು ಸಿಗಬೇಕು, ವೈಜ್ಞಾನಿಕ ವ್ಯವಸ್ಥೆ ಬೇಕು ಎಂಬುದಾಗಿದೆ.
ಸರ್ಕಾರದ ನಿರ್ಲಕ್ಷ್ಯದ ಆರೋಪ
ರೈತರು ಬೀದಿಗಿಳಿದು ನಡೆಸುತ್ತಿರುವ ಈ ಹೋರಾಟ ಮೇಲೆ ವಿವರಿಸಿದಂತೆ ಉಗ್ರ ಸ್ವರೂಪ ಪಡೆಯುತ್ತಿದೆ. ಇದಕ್ಕೆ ರಾಜಕೀಯ ಬೆಂಬಲ ದೊರಕಿದ್ದು, ಜೆಡಿಎಸ್, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಹೊಣೆ ನೀಡಿದೆಯೇ ಹೊರತು, ಸೂಕ್ತ ಕ್ರಮ ಕೈಗೊಳ್ಳದೆ ಬಿಹಾರ ಚುನಾವಣೆಯತ್ತ ಗಮನ ನೆಟ್ಟಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.
ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಆಕ್ರೋಶ
ಇನ್ನೂ ಅನ್ನದಾತ ರೈತರ ಬೀದಿಗಿಳಿದು 6 ಹೆದ್ದಾರಿಗಳು ಬಂದ್ ಆಗಿದ್ದರು, ನಾವೇ ಮೊದಲು, ನಮ್ಮಿಂದಲೇ ದೇಶದ ಉದ್ದಾರ ಎನ್ನುವ ಕೆಲ ಖಾಸಗಿ ಸುದ್ದಿವಾಹಿನಿಗಳ ಇತ್ತ ಗಮನಿಸುತ್ತಿಲ್ಲ ಎಂಬ ಆಕ್ರೋಶ ರೈತರದ್ದಾಗಿದೆ.
ಕಳೆದ ಎರಡೂ ವರೆ ವರ್ಷದಿಂದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಕಿಚ್ಚು ಹಚ್ಚಿ ಸರ್ಕಾರವನ್ನು ಕೆಡವಲು ವರದಿ ಪ್ರಸಾರ ಮಾಡುತ್ತಿವೆ ಎಂಬ ಆಕ್ರೋಶ ಕಾಂಗ್ರೆಸ್ ಬೆಂಬಲಿಗರದ್ದು.
ಇದರ ನಡುವೆ ನಟ ದರ್ಶನ್ ಪ್ರಕರಣದ ಕುರಿತು ಗಂಟೆಗೆ ಒಮ್ಮೆ ವರದಿ ಮಾಡುತ್ತಾ, ಊಹಾಪೋಹ ಕಥೆ ಎಣೆಯುತ್ತಿರುವ ಖಾಸಗಿ ಸುದ್ದಿ ವಾಹಿನಿಗಳು ಮೂಲ ಆದ್ಯತೆ ಮರೆಯುತ್ತಿದ್ದು, ಅಗತ್ಯ ಸುದ್ದಿಗಳನ್ನು ಪ್ರಸಾರ ಮಾಡದೆ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ಆಕ್ರೋಶ ವೀಕ್ಷಕರದ್ದಾಗಿದೆ.
ಈ ಕುರಿತಂತೆ ಖಾಸಗಿ ಚಾನಲ್ಗಳ ವಿರುದ್ಧ ಪ್ರತಿಭಟನೆಯಲ್ಲಿ ರೈತರು ಆಡಿರುವ ಆಕ್ರೋಶದ ನುಡಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜವಬ್ದಾರಿ ಮರೆತವರಿಗೆ ಚಾಟಿ ಏಟು ನೀಡಿದಂತಿದೆ.
ಬೆಳಗಾವಿಯ ಮೂಡಲಗಿ ನಗರದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟವನ್ನು ಪ್ರಸಾರ ಮಾಡದ ಮಾಮ ಮಾಧ್ಯಮಕ್ಕೆ ಕ್ಯಾಕರಿಸಿ ಉಗಿಯುತ್ತಿರುವ ರೈತರು pic.twitter.com/pQ3fR9BshO
— Goudrusarkar – ಗೌಡ್ರುಸರ್ಕಾರ್ (@Gs_0107) November 4, 2025