ಕೆ.ಎಂ. ಸಂತೋಷ್, ಆರೂಢಿ: ತೀವ್ರ ಜಿದ್ದಾಜಿದ್ದಿಯಿಂದ ನಡೆದ ದೊಡ್ಡಬಳ್ಳಾಪುರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ (TAPMCS) ಭಾನುವಾರ ನಡೆದ ಚುನಾವಣಾ ಫಲಿತಾಂಶ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದಿದ್ದಾರೆ. ಆದಾಗ್ಯೂ ಬಿ.ತರಗತಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ತೀವ್ರ ಸ್ಪರ್ಧೆ ನೀಡಿದೆ.
ಚುನಾವಣೆಯಲ್ಲಿ 93.98 ರಷ್ಟು ಮತದಾನ ನಡೆದಿದೆ. ‘ಬಿ’ ತರಗತಿಯಿಂದ ಜೆಡಿಎಸ್, ಬಿಜೆಪಿ ಮೈತ್ರಿ ಬೆಂಬಲಿತ ಐವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಮೂವರು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ.
‘ಎ’ ತರಗತಿಯ ಫಲಿತಾಂಶ ನ್ಯಾಯಾಲಯ ಆದೇಶದ ನಂತರ ಪ್ರಕಟಿಸುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಭ್ಯರ್ಥಿಗಳು ಪಡೆದಿರುವ ಮತಗಳ ಆಧಾರದಲ್ಲಿ ಕಾಂಗ್ರೆಸ್ ಬೆಂಬಲಿತ ನಾಲ್ಕು ಅಭ್ಯರ್ಥಿಗಳು ಹಾಗೂ ಒಬ್ಬರು ಮೈತ್ರಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
4 ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ ಗಂಟೆಗೆ ಮುಕ್ತಾಯವಾಗುವವರೆಗೂ ರೈತರು ಉತ್ಸಾಹದಿಂದಲೇ ಮತ ಚಲಾಯಿಸಿದರು. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನಿರ್ವಹಣೆ ಮಾಡುವ ಸಲುವಾಗಿಯೇ 20 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ.
ಮತ ಚಲಾವಣೆಗೆ ಕೊಠಡಿಗಳ ಮತಚಲಾವಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ಕೊಠಡಿಯಲ್ಲೂ ಏಕ ಕಾಲಕ್ಕೆ ಎಂಟು ಜನರು ಪ್ರತ್ಯೇಕವಾಗಿ ಮತಪತ್ರಗಳ ಮೂಲಕ ಗುಪ್ತ ಮತದಾನ ಮಾಡಿದರು ಎನ್ನಲಾಗಿದೆ. ಆದರೂ ಫಲಿತಾಂಶದ ಬಳಿಕ ಇದರಲ್ಲಿ ಅಕ್ರಮ ನಡೆದಿದೆ ಎಂಬ ಆಕ್ಷೇಪದ ಮಾತುಗಳು ಕೇಳಿಬಂದಿದೆ.
ಸಂಜೆ 4 ಗಂಟೆಯ ನಂತರ ಮತಗಳ ಎಣಿಕೆ ಆರಂಭಿಸಲಾಯಿತು. ಮತದಾನ ನಡೆದ ಸರ್ಕಾರಿ ಕಾಲೇಜಿನ ಸುತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪೆಂಡಾಲ್‌ಗಳನ್ನು ಹಾಕಿಕೊಂಡು ಮತಯಾಚನೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಟಿಎಪಿಎಂಸಿಎಸ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಿಧಾನಸಭಾ ಚುನಾವಣಾ ಮಾದರಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಮತಗಟ್ಟೆ ಸಮೀಪವೇ ಇನ್ನು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು.
‘ಎ’ ತರಗತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದಿರುವ ಮತಗಳು
ಅಪ್ಪಣ್ಣಪ್ಪ: 7
ಕೆ.ಎಂ. ಅಂಬರೀಶ್; 10
ಎಸ್.ಬಿ. ಕೆಂಪೇಗೌಡ; 9
ಎಂ. ಗೋವಿಂದರಾಜು; 11+2
ಎನ್. ಜಗನ್ನಾಥ್; 12+2
ಜೆ.ವೈ. ಮಲ್ಲಪ್ಪ; 7
ಎಂ. ವೆಂಕಟೇಶ್; 12+2
ಬಿ.ಎನ್. ಶ್ರೀನಿವಾಸಮೂರ್ತಿ; 9+2
ಡಿ. ಸಿದ್ದರಾಮಯ್ಯ; 13+2
(ನ್ಯಾಯಾಲಯದ ಆದೇಶದ ಪ್ರತಿ ಈ ವರೆಗೆ ತೊರೆತಿಲ್ಲವಾಗಿದ್ದು, ಬಳಿಕ +2 ಸೇರಲಿದೆ)
‘ಬಿ’ ತರಗತಿಯಿಂದ ಆಯ್ಕೆಯಾದ ಅಭ್ಯರ್ಥಿಗಳು ಪಡೆದ ಮತ
ಪುರುಷೋತ್ತಮ; 2,602,
ವಿಶ್ವಾಸ್ ಹಮಂತೇಗೌಡ; 2,184
ಎಂ.ಆನಂದ; 2338
ಎ.ರಾಮಾಂಜಿನಪ್ಪ; 1876
ಲಕ್ಷ್ಮೀನಾಗೇಶ್; 2,176
ಚಂದ್ರಕಲಾ ಮಂಜುನಾಥ್; 1872
ವಿ.ಎಸ್.ರಮೇಶ್; 2,544
ಜಿ.ಕೆಂಪೇಗೌಡ; 2,295.
ಆಮಿಷ..?
ಈ ಮುಂಚೆ ಹೇಳಿದಂತೆ ಇತರೆ ಚುನಾವಣೆಯಂತೆ ಈ ಚುನಾವಣೆಯಲ್ಲಿ ಕೂಡ ಮತದಾರರ ಸೆಳೆಯಲು ಆಮಿಷ ಒಡ್ಡಿರುವ ಆರೋಪ ವ್ಯಾಪಕವಾಗಿದೆ, ಕೆಲವರು ಸಿಂಡಿಕೇಟ್ ಮಾಡಿಕೊಂಡು ಮತದಾರರಿಗೆ 2500, 1500 ರೂ ಹೊರತುಪಡಿಸಿ, ಕೆಲ ಅಭ್ಯರ್ಥಿಗಳು ಪ್ರತ್ಯೇಕವಾಗಿ 500, 300, ಸಾವಿರ ನೀಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಅಲ್ಲದೆ ಗ್ರಾಮಗಳಿಂದ ಮತದಾನ ಕೇಂದ್ರಕ್ಕೆ ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.
ಸೇಡು ತೀರಿಸಿಕೊಂಡ್ರಾ..?
ಬಿ ಕ್ಷೇತ್ರದ ಚುನಾವಣೆ ಜಿದ್ದಾಜಿದ್ದಿಯಿಂದ ನಡೆದಿದ್ದು, ಕೆಲ ಅಭ್ಯರ್ಥಿಗಳ ಪರ ಗೆಲುವಿಗಾಗಿ ಶ್ರಮಿಸಿದರೆ, ಮತ್ತೆ ಕೆಲವರು ಈ ಹಿಂದಿನ ಚುನಾವಣೆ ಫಲಿತಾಂಶಗಳನ್ನು ನೆನಪಲ್ಲಿ ಇಟ್ಟುಕೊಂಡು, ಈ ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳಲು ಕೆಲ ಅಭ್ಯರ್ಥಿಗಳ ಸೋಲಿಗಾಗಿ ಶ್ರಮಿಸಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿದೆ.
ಈ ಚುನಾವಣೆಯಲ್ಲಿ ದಿವಂಗತ ಹೆಚ್.ಅಪ್ಪಯಣ್ಣ ಅಭಿಮಾನಿಗಳ ಬಳಗ ತೀವ್ರಮಟ್ಟದಲ್ಲಿ ಹೋರಾಟ ನಡೆಸಿದ್ದು, ಅಪ್ಪಯ್ಯರ ಆತ್ಮಕ್ಕೆ ಈ ಫಲಿತಾಂಶ ಶಾಂತಿ ನೀಡಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಬಳಗ ಯಾರನ್ನ ಸೋಲಿಸಲು ಹೋರಾಟ ನಡೆಸಿತು..? ಯಾರಿಗೆ ಲಾಭವಾಯಿತು, ಯಾರಿಗೆ ನಷ್ಟವಾಯಿತು ಎಂಬುದು ಫಲಿತಾಂಶದಲ್ಲಿ ದಾಖಲಾಗಿದೆ.
NDA ಮೈತ್ರಿಯಲ್ಲಿ ಕಾಣದ ಒಗ್ಗಟ್ಟು
ಇನ್ನೂ ಟಿಎಪಿಎಂಸಿ ಚುನಾವಣೆಯ ಗದ್ದುಗೆ ಹಿಡಿಯಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸಿದ್ಧತೆ ನಡೆಸಿ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯ ಸಭೆ ನಡೆಸುತ್ತಿದ್ದವು.
ಈ ವೇಳೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡ ಅವರು ಗ್ರಾಮಪಂಚಾಯಿತಿಯಿಂದ ಲೋಕಸಭೆವರೆಗೆ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರಿಯಲಿದೆ ಎಂಬ ಹೇಳಿಕೆ ಪ್ರತ್ಯೇಕವಾಗಿ ಚುನಾವಣೆ ಎದುರಿಸಲು ಸಿದ್ದವಾಗುತ್ತಿದ್ದ ಬಿಜೆಪಿ-ಜೆಡಿಎಸ್ಗೆ ಒಲ್ಲದ ಮನಸ್ಸಿನಿಂದ ಮೈತ್ರಿ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡಬೇಕಾದ ಅನಿರ್ವಾರ್ಯತೆ ಎದುರಾಯಿತು.
ಇಲ್ಲಿ ಅಭ್ಯರ್ಥಿಗಳ ಆಯ್ಕೆ, ನಾ ಕೊಡೆ, ನೀ ಬಿಡೆ ಎಂಬಂತೆ ಮಾತುಕತೆ ದೀರ್ಘವಾಗಿ ಸಾಗಿ, ಅಭ್ಯರ್ಥಿಗಳ ಘೋಷಣೆ ವಿಳಂಭವಾಯಿತು.
ಇದರ ಜೊತೆಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸ್ಕೂರು ಆನಂದ್ ಅವರು ಮೈತ್ರಿ ಸಮರ್ಪಕವಾಗಿಲ್ಲ ಜೆಡಿಎಸ್ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡಿ ಎಂದ್ದು ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದ್ದು, ಹಿರಿಯ ಮುಖಂಡ ಹರೀಶ್ ಗೌಡ ಅವರು ಒತ್ತಾಯಕ್ಕೆಂಬಂತೆ ಕಂಡುಬಂದಿದ್ದು ಬಿಟ್ಟರೆ, ಸಕ್ರಿಯವಾಗಿ ಚುನಾವಣೆ ಬಗ್ಗೆ ಗಮನ ಹರಿಸದೇ ಹೋಗಿದ್ದು ಕಾಂಗ್ರೆಸ್ಗೆ ಲಾಭವಾಯಿತು ಎಂಬ ಮಾತುಗಳು ಕೇಳಿಬರುತ್ತಿದೆ.
ದೊಡ್ಡಬಳ್ಳಾಪುರ TAPMCS ಕಾಂಗ್ರೆಸ್ ತೆಕ್ಕೆಗೆ
ಒಟ್ಟಾರೆ ದೊಡ್ಡಬಳ್ಳಾಪುರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವನ್ನು (TAPMCS) ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಸಕ್ರಿಯ ಭಾಗವಹಿಸುವಿಕೆಯ ನಡುವೆಯೂ ಬಿ ತರಗತಿಯಲ್ಲಿ ಹಿನ್ನಡೆಯಾದರೂ ಕೂಡ, ಎ ತರಗತಿಯಲ್ಲಿ ತಂತ್ರಗಾರಿಕೆಯನ್ನು ಮಾಡಿ ತಮ್ಮ ಹಿಡಿತಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.