ದೊಡ್ಡಬಳ್ಳಾಪುರ: ಕಾಡು ಹಂದಿಯ ಬೇಟೆಯಾಡಲು ಅರಣ್ಯ ಪ್ರದೇಶದಲ್ಲಿ ಇಡಲಾಗಿದ್ದ ನಾಡ ಬಾಂಬ್ ಸ್ಪೋಟಿಸಿ (Nada bomb blast) ಮಹಿಳೆಗೆ ಗಂಭೀರ ಪೆಟ್ಟಾಗಿರುವ ಘಟನೆ ತಾಲೂಕಿನ ಗುಮ್ಮನಹಳ್ಳಿ ಸಮೀಪದಲ್ಲಿ ಸಂಭವಿಸಿದೆ.
ಘಟನೆಯಲ್ಲಿ ಗುಮ್ಮನಹಳ್ಳಿ ಗ್ರಾಮದ ರಂಗಮ್ಮ (45ವರ್ಷ ) ಎನ್ನುವವರ ಕೈಗೆ ಗಂಭೀರ ಪೆಟ್ಟಾಗಿದೆ.
ಇಂದು ಮೇಕೆ ಮೇಯಿಸಲೆಂದು ಗುಮ್ಮನಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದ ಹೊರವಲಯಕ್ಕೆ ತೆರಳಿದ್ದ ವೇಳೆ, ಮೇಕೆಯೊಂದು ನಾಡ ಬಾಂಬ್ ಕಟ್ಟಿದ್ದ ದಾರಕ್ಕೆ ಸಿಲುಕಿದ್ದು, ಈ ವೇಳೆ ಮೇಕೆಯನ್ನು ಬಿಡಿಸುವ ವೇಳೆ ಬಾಂಬ್ ಸ್ಪೋಟಿಸಿದ್ದು, ರಂಗಮ್ಮ ಅವರ ಕೈಗಳಿಗೆ ಗಂಭೀರ ಪೆಟ್ಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕೂಡಲೇ ರಂಗಮ್ಮ ಅವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಇನ್ಸ್ಪೆಕ್ಟರ್ ಕಲ್ಲಪ್ಪ ಕರಾತ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)