ಕೆ.ಎಂ.ಸಂತೋಷ್, ಆರೂಢಿ: ನಾಳೆಯಿಂದ (ನ.13) ದೊಡ್ಡಬಳ್ಳಾಪುರ (Doddaballapura) ನಗರದ ರಂಗಪ್ಪ ವೃತ್ತದಿಂದ ಡಾ. ರಾಜಕುಮಾರ್ ವೃತ್ತದವರೆಗೆ ಒಳಚರಂಡಿ ಕಾಮಗಾರಿ ನಡೆಸಲಾಗುತ್ತಿದೆ.
ಈ ಕುರಿತು ದೊಡ್ಡಬಳ್ಳಾಪುರ ನಗರಸಭೆಯಿಂದ ಜನರಿಗೆ ತಲುಪುತ್ತಿಲ್ಲ ಎಂಬ ದಿನ ಪತ್ರಿಕೆಗಳಿಗೆ ಮಾತ್ರ ಜಾಹೀರಾತು ನೀಡಿ, ಸಾವಿರಾರು ರೂ ಹಣ ಲಪಟಾಯಿಸುತ್ತಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ.
ಈ ಕಾಮಗಾರಿ ಕುರಿತಂತೆ ಹರಿತಲೇಖನಿ ಓದುಗರ ಮಾಹಿತಿ ಮೇರೆಗೆ ಗಮನಿಸಿದಾಗ, ನಾಳೆಯಿಂದ (ನ.13) ಎನ್.ಜಿ.ಟಿ ಪರಿಸರ ಪರಿಹಾರ ನಿಧಿಯಡಿ ಭಜನೆಹಟ್ಟಿರಂಗಪ್ಪ (ರಂಗಪ್ಪ ಸರ್ಕಲ್) ವೃತ್ತದಿಂದ ಡಿ-ಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೂ ಒಳಚರಂಡಿ ಪೈಪ್ ಲೈನ್ ಕಾಮಗಾರಿಯ ಜಾಹೀರಾತಿನ ಪ್ರತಿಯನ್ನು ಪೊಲೀಸ್ ಇಲಾಖೆ ಪೊಸ್ಟ್ ಮಾಡಿದೆ.
ಈ ಕಾಮಗಾರಿ ಹಿನ್ನೆಲೆ ದೊಡ್ಡಬಳ್ಳಾಪುರ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಮತ್ತು ಬೆಂಗಳೂರಿನಿಂದ ದೊಡ್ಡಬಳ್ಳಾಪುರ ನಗರಕ್ಕೆ ಬಂದು ಹೋಗುವ ಬಸ್, ಲಾರಿ, ಕಾರು ಮತ್ತು ಆಟೋಗಳು (ದ್ವಿಚಕ್ರ ವಾಹನ ಹೊರತುಪಡಿಸಿ) ಡಿ ಕ್ರಾಸ್ ಮುಖಾಂತರ ಸಂಚರಿಸಬೇಕಿದೆ.
ನೆಲಮಂಗಲ ಕಡೆ ತೆರಳುವ ವಾಹನಗಳು ಡಿ ಕ್ರಾಸ್, ಐಬಿ ಸರ್ಕಲ್, ತಾಲೂಕು ಕಚೇರಿ, ಕೊಂಗಾಡಿಯಪ್ಪ ಕಾಲೇಜು ರಸ್ತೆ ಮುಖಾಂತರ ಸಂಚರಿಸುವುದು.
ಯಾವುದೇ ರೀತಿಯಾದ ಸಂಚಾರಕ್ಕೆ ಅಡೆತಡೆಯಾಗದೆ ಕಾರ್ಯಚರಣೆ ಮಾಡುವಂತೆ ಈ ಮೂಲಕ ವಿನಂತಿಸಲಾಗಿದೆ ಎಂದು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಮಾಹಿತಿ ನೀಡಿದೆ.
ದೊಡ್ಡಬಳ್ಳಾಪುರದ ಚಿಂತಕನ ಪ್ರಶ್ನೆ
ಈ ಕುರಿತಂತೆ ದೊಡ್ಡಬಳ್ಳಾಪುರದ ಚಿಂತಕ, ದೊಡ್ಡಬಳ್ಳಾಪುರದ ಸಾರಿಗೆ ಅವ್ಯವಸ್ಥೆ ಕುರಿತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೂ ದೂರು ನೀಡಿ, ದೊಡ್ಡಬಳ್ಳಾಪುರಕ್ಕೆ ಅಶ್ವಮೇಧ ಬಸ್‌ಗಳನ್ನು ನೀಡುವಂತೆ ಪಟ್ಟುಹಿಡಿದು, ಸಾಧಿಸಿದ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ನಾಗ್ ಅವರು ಈ ಕಾಮಗಾರಿಗೆ ಬೆಂಬಲ ನೀಡಿದ್ದರೂ, ರಸ್ತೆ ಗುಂಡಿಗಳ ಕುರಿತು ಪ್ರಶ್ನೆ ಮಾಡಿದ್ದಾರೆ.
ಈ ಕುರಿತಂತೆ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಖಾತೆಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ರಸ್ತೆ ಅವ್ಯವಸ್ಥೆ, ಗುಂಡಿಗಳ ಸಮಸ್ಯೆ ಕುರಿತು ಪರೋಕ್ಷವಾಗಿ ಪ್ರಶ್ನೆ ಮಾಡಿದ್ದಾರೆ.
ಆರೋಪ
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ಗ್ಯಾರಂಟಿ ಯೋಜನೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ ಎಂಬುದು ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಆರೋಪ.
ಇದರ ನಡುವೆಯೂ ದೊಡ್ಡಬಳ್ಳಾಪುರ ಬಿಜೆಪಿ ಶಾಸಕ ಧೀರಜ್ ಮುನಿರಾಜು ಅವರ ಅವಧಿಯಲ್ಲಿ ಕೆಲ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ.
ಶಾಸಕರ ಭಾವಚಿತ್ರಕ್ಕೆ ಗೌರವ ನೀಡಿ
ವಿಪರ್ಯಾಸವೆಂದರೆ ಕಾಮಗಾರಿ ಗುತ್ತಿಗೆ ಪಡೆದವರು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಅವರ ಫೋಟೋವನ್ನ ರಸ್ತೆ ಕಾಮಗಾರಿ ನಡೆಯುತ್ತಿದೆ ಎಂದು ಫ್ಲೆಕ್ಸ್ ಮುದ್ರಿಸಿ, ಸಾರ್ವಜನಿಕರಿಗೆ ಮುಜುಗರ ತರುವಂತೆ ಬೇಕಾಬಿಟ್ಟಿಯಾಗಿ ಬಳಸುತ್ತಿದ್ದಾರೆ.
ಈ ರೀತಿ ದೊಡ್ಡಬಳ್ಳಾಪುರ ಶಾಸಕರ ಫೋಟೋ ಬಳಸಿ ಓಲೈಕೆಗೆ ಸೀಮಿತವಾಗದೇ, ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಗುಂಡಿ ಮುಕ್ತ ದೊಡ್ಡಬಳ್ಳಾಪುರ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.