ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿರುವ ‘ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ 11 ಮತ್ತು 12ನೇ ತರಗತಿ ಮಕ್ಕಳಿಗೆ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು. ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಹಾಗೂ ಪಂಡಿತ್ ಜವಾಹರಲಾಲ್ ನೆಹರು ಅವರ ಜಯಂತಿ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜನಪ್ರಿಯ ಮುಖ್ಯಮಂತ್ರಿಗ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಆಯೋಜಿಸಿದ್ದ “ಮೆಗಾ ಪಿ.ಟಿ.ಎಂ (ಪೋಷಕರು-ಶಿಕ್ಷಕರ ಮಹಾಸಭೆ)” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಈ ವೇಳೆ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಮೌಲ್ಯ ಶಿಕ್ಷಣ’ ದ ಡಿಜಿಟಲ್ ಅವತರಣಿಕೆಯ ಪುಸ್ತಕವನ್ನು ಬಿಡುಗಡೆ ಮಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಗೌರವಿಸಲಾಯಿತು.
ಗೌರಿಬಿದನೂರಿನ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ಎನ್. ಸಂಕೇತ್ ರಾಜ್ JEE ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಭಾರತದ ಪ್ರತಿಷ್ಠಿತ ಇಂಜಿನಿಯರಿಂಗ್ ಸಂಸ್ಥೆಯಾದ ಐಐಟಿ ಖರಗ್‌ಪುರ್‌ನಲ್ಲಿ ಪ್ರವೇಶ ಪಡೆದು ಎಲ್ಲರಿಗೂ ಮಾದರಿಯಾಗಿದ್ದು ಅವರಿಗೆ 1 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ನೀಡಿ, ಅಭಿನಂದಿಸಿ ಗೌರವಿಸಲಾಯಿತು.
ಬಳಿಕ ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಭವಿಷ್ಯದ ಬಗ್ಗೆ ಪೋಷಕರು, ಮಕ್ಕಳು ಮತ್ತು ಶಿಕ್ಷಕರು ಒಟ್ಟಾಗಿ ಚರ್ಚಿಸಲು ಒಂದು ಉತ್ತಮ ವೇದಿಕೆಯಾಗಿದ್ದು, ಈ ವೇಳೆ ರಾಜ್ಯದ ವಿವಿಧ ಭಾಗಗಳಿಂದ ಆನ್ಲೈನ್ ಮೂಲಕ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಬಳಿಕ ಬೈಲಹೊಂಗಲದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ರಾಕೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯ 11 ಮತ್ತು 12ನೇ ತರಗತಿ ಮಕ್ಕಳಿಗೆ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು. ಪಿಯು ಕಾಲೇಜು ವಿದ್ಯಾರ್ಥಿಗಳಿಗೂ ಸೌಲಭ್ಯ ಒದಗಿಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು’ ಎಂದು ಹೇಳಿದರು.
‘ರಾಕೇಶ್ ಹೇಳಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ತರಗತಿಗಳು ನಡೆಯುತ್ತವೆ. ಮನೆಗಳಿಂದ ಬೆಳಗ್ಗೆ ಬೇಗನೆ ಹೊರಡುತ್ತಾರೆ. ಹಾಗಾಗಿ, ಪಿಯು ಕಾಲೇಜುಗಳಿಗೂ ಮಧ್ಯಾಹ್ನದ ಊಟವನ್ನು ವಿಸ್ತರಿಸಬೇಕು ಎಂಬ ಬೇಡಿಕೆ ಸೂಕ್ತವಾಗಿದೆ.
ಮೊದಲು 8ನೇ ತರಗತಿಯವರೆಗೆ ಇದ್ದ ಮೊಟ್ಟೆ ವಿತರಣೆಯನ್ನು 9 ಮತ್ತು 10ನೇ ತರಗತಿಗೆ ವಿಸ್ತರಿಸಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಎಲ್ಲ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಜಾರಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ವಿಧಾನಪರಿಷತ್ ಶಾಸಕರಾದ ಬಲ್ಕಿಶ್ ಬಾನು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ ರೇವಣ್ಣ, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಬಿ.ಬಿ. ಚಿಮ್ಮನಕಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್, ಯೋಜನಾ ನಿರ್ದೇಶಕಿ ವಿದ್ಯಾಕುಮಾರಿ, ಪಿಯು ನಿರ್ದೇಶಕರಾದ ಭರತ್ ಎಸ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.