ದೊಡ್ಡಬಳ್ಳಾಪುರ: ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ಬೆಟ್ಟದ ಸೊಣ್ಣೆನಹಳ್ಳಿ ಗ್ರಾಮದಲ್ಲಿ ಚೋಳರ ಕಾಲದ (Chola period) ಅಪ್ರಕಟಿತ ಶಿಲಾಶಾಸನ (Unpublished Inscription) ಪತ್ತೆಯಾಗಿದೆ.
6 ಅಡಿ ಎತ್ತರ, 3.5 ಅಡಿ ಅಗಲ ಇರುವ 10 ಸಾಲುಗಳ ಈ ಶಾಸನದಲ್ಲಿ ಚೋಳ ದೊರೆ ರಾಜಾಧಿರಾಜನ 2ನೇ ಆಡಳಿತ ವರ್ಷವಾದ ಕ್ರಿ.ಶ.1045ರಲ್ಲಿ ಕುಣಿಗಲ್ ನಾಡಿಗೆ ಸೇರಿದ ಸೊಣ್ಣೆನಹಳ್ಳಿ ಗ್ರಾಮದಲ್ಲಿ ತುರುಗೊಳ್ ಕಾಳಗದಲ್ಲಿ ವೀರನು ಸತ್ತು ಸ್ವರ್ಗಸ್ತನಾದ ವಿಷಯವನ್ನು ಬರೆಯಲಾಗಿದೆ.
ಇದನ್ನು ಕರ್ನಾಟಕ ಇತಿಹಾಸ ಅಕಾಡೆಮಿ ವಾರ್ಷಿಕ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ ಮಾಡಲಾಗಿದೆ ಎಂದು ಅಕಾಡೆಮಿ ಸದಸ್ಯ ಕೆ.ಆರ್.ಮಧುಸೂದನ್ ತಿಳಿಸಿದ್ದಾರೆ.
ಶಾಸನ ಪಾಠವನ್ನು ಡಾ.ಆರ್.ಯುವರಾಜು ಓದಿದ್ದಾರೆ. ಶಿಲಾಶಾಸನ ಪತ್ತೆಯಾಗಿರುವ ಜಮೀನಿನ ಮಾಲೀಕ ರುದ್ರಮೂರ್ತಿ, ಸಹಾನಂದ, ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್, ಗ್ರಾಮದ ಮುಖಂಡರಾದ ಬೈಲಯ್ಯ ಇವರು ಶಾಸನ ಪತ್ತೆಗೆ ಸಹಕಾರ ನೀಡಿದ್ದಾರೆ.
ಶಾಸನದ ವಿಶೇಷತೆ
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ರಾಜಾಧಿರಾಜ ಚೋಳನ ಮೊದಲ ಶಾಸನ ಇದಾಗಿದ್ದು, ವೀರನು ಆಲಿಡಾಸನ ಭಂಗಿಯಲ್ಲಿ ನಿಂತಿದ್ದು, ವಿರಗಚ್ಚೆ, ಕೊರಳಲ್ಲಿ ಹಾರ, ಕೈಗೆ ತೊಳ್ಬಂದಿ, ಕಾಲಿಗೆ ಕಾಲ್ಕಡಗ, ಕಿವಿಯಲ್ಲಿ ಓಲೆ ಧರಿಸಿದ್ದಾನೆ.
ಸೊಂಟದಲ್ಲಿ ಬಾಕು, ತಲೆ ಕೂದಲನ್ನು ತುರುಬಿನಲ್ಲಿ ಕಟ್ಟಲಾಗಿದೆ. ವೀರನ ಎಡಗಾಲಿನ ಬಳಿ ಎರಡು ತುರುಗಳಿವೆ. ವೀರನ ತಲೆಯ ಎಡ ಭಾಗದಲ್ಲಿ ಚಾಮರ ದಾರಣಿಯರಾದ ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕೊಂಡೈದಂತ ಸ್ವರ್ಗಸ್ತ ಕಲ್ಪನೆ ಇದೆ.
ನಿಧಿಗಳ್ಳರು ಈ ಶಾಸನ ಇರುವ ಸ್ಥಳದಲ್ಲಿ ಹಲವಾರು ಬಾರಿ ನಿಧಿಗಾಗಿ ಹಳ್ಳ ತೊಡಲಾಗಿದ್ದು, ಒಂದು ಕಲ್ಲು ಹಳ್ಳದಲ್ಲಿ ಮುಚ್ಚಿಹೋಗಿದೆ.